ತೀರ್ಥಹಳ್ಳಿಯಲ್ಲಿ ರಕ್ತದಾನದ ಮೂಲಕ ಪುನೀತ್ ನಮನ!
– ರಾಮಕೃಷ್ಣಪುರದ ಸಮರ್ಪಣಾ ತಂಡ, ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ
– ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳು ಆಚರಿಸುತ್ತಿದ್ದು, ತೀರ್ಥಹಳ್ಳಿಯಲ್ಲೂ ಕೂಡ ಇದರ ಸಂಭ್ರಮಾಚರಣೆ ನಡೆಯುತ್ತಿದೆ. ಇಲ್ಲಿನ ರೋಟರಿ ಬ್ಲಡ್ ಬ್ಯಾಂಕ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮಕೃಷ್ಣಪುರದ ಸಮರ್ಪಣಾ ತಂಡದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮದ ಮೂಲಕ ಸುಮಾರು 25 ಜನ ದಾನಿಗಳು ತಮ್ಮ ರಕ್ತವನ್ನು ನೀಡಿದ್ದಾರೆ.
ಮುತ್ತುವಳ್ಳಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮರ್ಪಣಾ ತಂಡದಿಂದ ಮೂರನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ವಿಭಾಗದಲ್ಲಿ ರಕ್ತದ ಅವಶ್ಯಕತೆ ಇದ್ದ ಅದೆಷ್ಟೋ ಜನರಿಗೆ ತಮ್ಮ ಸಂಸ್ಥೆಯ ಮೂಲಕ ರಕ್ತವನ್ನು ದೊರಕಿಸುವ ಕಾರ್ಯವನ್ನು ಕೈಗೊಂಡು, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ. ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರಾದ ಡಾ/ಸಿ.ಎನ್. ಮಂಜುನಾಥ್ ಅವರಿಂದ ಅಭಿನಂದನಾ ಪತ್ರ ದೊರೆತಿರುವುದು ಈ ಸಂಸ್ಥೆಯ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್ ಸಂಸ್ಥೆಯು ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆಯನ್ನು ಸ್ಮರಿಸುವ ಮತ್ತು ಅವರ ಹೆಸರಿನಲ್ಲಿ ಪ್ರೇರಣೆ ನೀಡುವಂತಹ ಕಾರ್ಯಗಳನ್ನು ನಡೆಸುತ್ತಿದೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಕಚೇರಿಯಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಸಂಜೆ ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ‘ಪುನೀತ್ ನಮನ’ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಸದಸ್ಯರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.








