ಪುನೀತ್ ಹುಟ್ಟು ಹಬ್ಬ: ತೀರ್ಥಹಳ್ಳಿಯಲ್ಲಿ ವಿಭಿನ್ನ ಕಾರ್ಯಕ್ರಮ!
– ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ಸಾಮಾಜಿಕ ಕೆಲಸ
– ಸಾಧಕರಿಗೆ ಸನ್ಮಾನ, ಪುನೀತ್ ಗೀತ ಗಾಯನ, ಸೇವಕರಿಗೆ ಗೌರವ
– ಚಿಡುವದಲ್ಲಿ ಜನಪದ ಅಂಟಿಗೆ ಪಿಂಟಿಗೆ ಜತೆ ಪುನೀತ್ ನಮನ
– ಕುಪ್ಪಳಿ ಬಳಿ ಶಾಲೆಯ ಮಕ್ಕಳಿಗೆ ಸಿಹಿ ವಿತರಣೆ
ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಹಲವಾರು ಕಾರ್ಯಕ್ರಮಗಳು ನೆರವೇರಿದವು. ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್ ಸಂಸ್ಥೆ, ವಿಶ್ವಮಾನವ ಕನ್ನಡ ವೇದಿಕೆ, ಶ್ರೀನಾರಾಯಣ ಗುರು ವಿಚಾರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿಯಲ್ಲಿ ‘ನಮ್ಮೂರ್ ಎಕ್ಸ್ ಪ್ರೆಸ್’ ಮಾಧ್ಯಮದ ಪ್ರಾದೇಶಿಕ ಕಛೇರಿಯಲ್ಲಿ ‘ಪುನೀತ್ ನಮನ‘, ಪುನೀತ್ ಗೀತೆಗಳ ಗಾಯನ ಕಾರ್ಯಕ್ರಮದ ಜೊತೆಗೆ ಸ್ಥಳೀಯ ಸಾಧಕ ಮಕ್ಕಳು ಮತ್ತು ಸಮಾಜ ಸೇವಕರನ್ನು ಗುರುತಿಸಿ, ಪುನೀತ್ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಶ್ರೀನಾರಾಯಣ ಗುರು ವಿಚಾರ ವೇದಿಕೆಯ ಮಹಿಳಾ ಅಧ್ಯಕ್ಷರಾದ ಶಾಲಿನಿ ನಾಗರಾಜ್, ಪೊಲೀಸ್ ಇಲಾಖೆಯ ಸುರೇಶ್, ವಾಕಿಂಗ್ ಬಡ್ಡಿಸ್ ಸಂಸ್ಥೆಯ ಅಶೋಕ್ ಶೆಟ್ಟಿ, ನಮ್ಮೂರ್ ಎಕ್ಸ್ ಪ್ರೆಸ್ ಸಂಸ್ಥೆಯ ರಾಘವೇಂದ್ರ, ಕೃಷ್ಣಮೂರ್ತಿ, ಅಮೃತಾ, ರಕ್ಷಿತ್, ಸಿಂಧು, ಪೂರ್ವ, ಅಪೂರ್ವ, ಪೂರ್ಣಿಮಾ, ನಿಶಾನಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ಸಾಧಕರು, ಸೇವಕರಿಗೆ ಪುನೀತ್ ಪುರಸ್ಕಾರ-2026
ಸರ್ಕಾರಿ ಶಾಲೆಯಲ್ಲೇ ಉತ್ತಮ ಸಾಧನೆ ಮಾಡುತ್ತಿರುವ ಸೀಬಿನಕೆರೆ ಸರ್ಕಾರಿ ಶಾಲೆ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ, ದಿತಿ ಭರತನಾಟ್ಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸಾಧಕಿ, ಕ್ಲೀಯಾನ್ ಫಾಬಿಯೋ ಮಾರ್ಟಿಸ್ ( ಅಂತಾ ರಾಷ್ಟ್ರ ಮಟ್ಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ), ಡ್ಯಾನ್ಸರ್, ಮೋಟಿವೇಷನಲ್ ಕಲಾವಿದ ಮನೋಜ್, ಶಾಟ್ ಪುಟ್ ಕ್ರೀಡಾಪಟುಗಳಾದ ಯಶ್ವಿತ್, ಸಮರ್ಥ್ ಸಿರಿವರ್ಧನ್, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಾದ ಸಾಫ್ಟ್ ಬಾಲ್ ಕ್ರೀಡಾಪಟು ಶ್ರಾವ್ಯ ನಾರಾಯಣ್,ಲೇಖನ ( ಅಬಕಾಸ್ ಕ್ರೀಡಾ ಪಟು), ಶಶಾಂಕ್ ಕುಮಾರ್ ಮತ್ತು ಧನುಶ್ (ಕಲಾತ್ಮಕ ಯೋಗಾಸನ ಜೋಡಿ ಸ್ವರ್ಧೆಯಲ್ಲಿ ಗೆದ್ದ ಸಾಧಕರು), ಹಿರೇಕೋಡಿಗೆ ಹಾಗೂ ಆಲೆಮನೆ ಶಾಲೆಯ ಟಾಪರ್ ವಿದ್ಯಾರ್ಥಿಗಳಾದ ಅಶ್ವಿತಾ ಎಚ್.ಆರ್, ಯಾಚನಾ ಎ, ಅಗಸ್ತ್ಯ ಕೆಸಿ, ಪರೀಕ್ಷಿತ, ಸಂಪದ ಟಿ.ಎಸ್, ಯಶಸ್ವಿನಿ ಎಚ್.ಡಿ, ಸಾತ್ವಿಕ್ ಕೆ ಆರ್ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕುಪ್ಪಳಿ ಸಮೀಪದ ಶಾಲಾ ಮಕ್ಕಳಿಗೆ ಸಿಹಿ ವಿತರಣೆ
ಅಲೆಮನೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಮತ್ತು ಪುನೀತ್ ಬ್ರಿಗೇಡ್ ಮತ್ತು ವಿಶ್ವಮಾನವ ಕನ್ನಡ ವೇದಿಕೆಯ ಕುಪ್ಪಳ್ಳಿ ಸುಧಾಕರ್ ಮತ್ತು ಮನೋಜ್ ಮನೋಜ್ ಮೆಡಿಕಲ್ ಮಾಲೀಕರು ಹಾಜರಿದ್ದರು. LBS ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಇದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು.
ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಹಳ್ಳಿಗರು!
ತೀರ್ಥಹಳ್ಳಿ ತಾಲೂಕು ಚಿಡುವ ಗ್ರಾಮದಲ್ಲಿ ಪುನೀತ್ ಭಾವ ಚಿತ್ರಕ್ಕೆ ಗ್ರಾಮಸ್ತರು ಸೇರಿ ಪುನೀತ್ ಬ್ರಿಗೇಡ್ ಸಂಸ್ಥೆಯ ಗೌರವಾಧ್ಯಕ್ಷರಾದ ಸೂರ್ಯನಾರಾಯಣ ಚಿಡುವ ಅವರ ನೇತೃತ್ವದಲ್ಲಿ ಹಾಗೂ ಚಿಡುವ ಗ್ರಾಮಸ್ಥರ ಸಮ್ಮುಖದಲ್ಲಿ ಮಲೆನಾಡಿನ ಪ್ರಸಿದ್ಧ ಜಾನಪದ ಕಲೆಯಾದ ಅಂಟಿಕೆ ಪಿಂಟಿಕೆ ಮೂಲಕ ಹಾಗೂ ದೀಪವನ್ನು ಬೆಳಗಿಸಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪನಮನದ ಮುಖಾಂತರ ಗೌರವ ಸಲ್ಲಿಸಲಾಯಿತು. ಗ್ರಾಮದ ಹಿರಿಯರು, ಯುವಕರು ಹಾಜರಿದ್ದರು.








