ಶಿವಮೊಗ್ಗದಲ್ಲಿ ಗಲಭೆ: ವಿಧಾನಸಭೆಯಲ್ಲಿ ಚರ್ಚೆ!
– ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ ಕಳವಳ
– ಗೃಹ ಸಚಿವರಿಂದ ಶಿವಮೊಗ್ಗ ಜಿಲ್ಲೆ ಭದ್ರತೆ ಬಗ್ಗೆ ಮಾಹಿತಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಹಾಗೂ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಗೆ ರಕ್ಷಣೆ ನೀಡುವವರು ಯಾರು? ಎಂದು ಪ್ರಶ್ನಿಸಿದರು
ಶಿವಮೊಗ್ಗ ಜಿಲ್ಲೆಯಲ್ಲಿ ಭದ್ರತೆ ಏನೇನಿದೆ?
ಶಾಸಕರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಶಿವಮೊಗ್ಗ ಜಿಲ್ಲೆಯಲ್ಲಿ 33 ಪೊಲೀಸ್ ಠಾಣೆಗಳಿವೆ, ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ 6 ಠಾಣೆಗಳು ಮತ್ತು 3 ಔಟ್ಪೋಸ್ಟ್ಗಳಿವೆ. ಇಡೀ ಜಿಲ್ಲೆಯಲ್ಲಿ 30,000 ಸಿಸಿಟಿವಿ ಕ್ಯಾಮೆರಾಗಳಿವೆ, ಶಿವಮೊಗ್ಗ ನಗರದಲ್ಲೇ 16,000 ಹಾಗೂ ತೀರ್ಥಹಳ್ಳಿಯಲ್ಲಿ 3,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೈವೇ ಪೆಟ್ರೋಲಿಂಗ್ಗಾಗಿ 25 ವಾಹನಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಹಿಂದಿಗಿಂತ ಅಪರಾಧ ಕಡಿಮೆ ಆಗಿದೆ!
ಕಳ್ಳತನ ಹಿಂದಿಗಿಂತಲ ಕಡಿಮೆ ಇದೆ ಎಂದ ಸಚಿವರು ಪೊಲೀಸರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎನ್ನುವುದು ಸರಿಯಲ್ಲ. 2023ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ದಾಖಲಾದ 12 ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಭೇದಿಸಲಾಗಿದೆ. 2024ರಲ್ಲಿ 31 ಪ್ರಕರಣಗಳ ಪೈಕಿ 10 ಪತ್ತೆಯಾಗಿವೆ ಮತ್ತು 7 ನ್ಯಾಯಾಲಯದ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಕಳ್ಳತನ ಮತ್ತು ದರೋಡೆಗಳನ್ನು ತಡೆಗಟ್ಟಲು 20 ಅಂಶಗಳ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.








