ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ರಂಗು
– ರಂಭಾಪುರಿ ಮಠಕ್ಕೆ ರಾಜಕೀಯ, ಧಾರ್ಮಿಕ ಗಣ್ಯರ ದಂಡು
– ಪ್ರಹ್ಲಾದ ಜೋಶಿ, ಡಿಸಿಎಂ ಶಿವಕುಮಾರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿ ಅನೇಕರುಭಾಗಿ
– ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳೇ ದಾರಿದೀಪ: ಡಿಕೆಶಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಾಳೆಹೊನ್ನೂರು: ಶ್ರೀ ರಂಭಾಪುರಿ ಪೀಠದ ಜಗದ್ಗುರು ಪರಮಪೂಜ್ಯ ಶ್ರೀ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ, ಬಾಳೆಹೊನ್ನೂರಿನಲ್ಲಿ ನಡೆದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿಯ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಗಣ್ಯರ ದಂಡು ಆಗಮಿಸಿದೆ.
ರಾಷ್ಟ್ರೀಯ, ರಾಜ್ಯದ ನಾಯಕರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂ ಶಿವಕುಮಾರ್, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿ ಅನೇಕ ಗಣ್ಯರು ಆಗಮಿಸಿದ್ದಾರೆ. ಶಾಸಕ ರಾಜೇಗೌಡ, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರಾದ ಜೀವರಾಜ್ ಇದ್ದರು.
ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆಗಳೇ ದಾರಿದೀಪ: ಡಿಕೆಶಿ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಬಾಳೆಹೊನ್ನೂರು ಧರ್ಮಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ, ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಸ್ಥಳದಲ್ಲಿ ನಿರ್ಮಿಸಿರುವ 51 ಅಡಿ ಎತ್ತರದ, ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ರಂಭಾಪುರಿ ಪೀಠ ನಿರ್ಮಿಸಿರುವ ಮೇಲ್ಪಾರ್ ರಸ್ತೆಯ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಶ್ರೀ ಶ್ರೀ ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ನೆರವೇರಿಸಿದರು.
ಶ್ರೀ ವೀರ ಗಂಗಾಧರ ಅಜ್ಜಯ್ಯನವರು ಈ ಪೀಠದ ಅಧ್ಯಕ್ಷರಾಗಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಅವರು ಸಂದೇಶವನ್ನು ಕೊಟ್ಟಿದ್ದರು. ನಮ್ಮ ಮನೆಗಳನ್ನು ಯಾವ ರೀತಿ ಕಾಪಾಡುತ್ತೇವೆಯೋ ಹಾಗೆಯೇ ನಮ್ಮ ಮಠಗಳನ್ನು ನಾವು ಕಾಪಾಡಬೇಕು ಎಂದರು.








