ಬ್ಯಾಂಕ್, ಪಾನ್ ಕಾರ್ಡ್ ನಿಯಮ ಬದಲು: ಏನಿದು ಓದಿ!
– ಏ.1ರಿಂದ ಜಾರಿ ಸಾಧ್ಯತೆ: ಪ್ಯಾನ್ಗೆ ಹೊಸ ನಿಯಮ
– ನಗದು ಬ್ಯಾಂಕಲ್ಲಿ ಇಡಬೇಕಾದ್ರೂ ಕೂಡ ಅನ್ವಯ!
– ಸ್ಥಿರಾಸ್ತಿಗಳ ಖರೀದಿ, ಮಾರಾಟ, ಗಿಫ್ಟ್ ನಿಯಮ
ನವದೆಹಲಿ: ಬ್ಯಾಂಕ್ಗಳಲ್ಲಿ ನಗದು ಠೇವಣಿ ಇಡುವುದು, ವಿತ್ ಡ್ರಾ ಮಾಡುವುದು, ಮೋಟಾರು ವಾಹನಗಳ ಖರೀದಿ, ಹೋಟೆಲ್ ಬಿಲ್ ಪಾವತಿಯಂತಹ ವಹಿವಾಟುಗಳಿಗೆ ಪ್ಯಾನ್ ಸಂಖ್ಯೆಯನ್ನು ನಮೂದಿಸುವ ಮಿತಿಯನ್ನು ಗಣನೀಯವಾಗಿ ಹೆಚ್ಚಿಸಲು ಹೊಸ ಕರಡು ಆದಾಯ ತೆರಿಗೆ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತಾವಿತ ‘ಆದಾಯ ತೆರಿಗೆ ನಿಯಮಗಳು 2026’ರ ಪ್ರಕಾರ, ಒಬ್ಬ ವ್ಯಕ್ತಿ ಒಂದು ಹಣಕಾಸು ವರ್ಷದಲ್ಲಿ ತನ್ನ ಒಂದು ಅಥವಾ ಹೆಚ್ಚಿನ ಖಾತೆಗಳಲ್ಲಿ ಒಟ್ಟು 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮಾಡಿದರೆ ಮಾತ್ರ ಪ್ಯಾನ್ ಸಂಖ್ಯೆ ನಮೂದಿಸುವುದು ಕಡ್ಡಾಯ.
ಪ್ರಸ್ತುತ, ಬ್ಯಾಂಕ್ಗಳಲ್ಲಿ ಒಂದೇ ದಿನದಲ್ಲಿ 50,000 ರೂ.ಗಿಂತ ಹೆಚ್ಚಿನ ನಗದು ವ್ಯವಹಾರಕ್ಕೆ ಪ್ಯಾನ್ ಸಂಖ್ಯೆ ಅಗತ್ಯವಿತ್ತು. ವಾಹನಗಳ ಖರೀದಿ ವಿಷಯದಲ್ಲಿಯೂ ದೊಡ್ಡ ಬದಲಾವಣೆ ತರಲಾಗಿದ್ದು, ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಮೋಟಾರು ವಾಹನಗಳ ಬೆಲೆ 5 ಲಕ್ಷ ರೂ. ಮೀರಿದರೆ ಮಾತ್ರ ಪ್ಯಾನ್ ವಿವರ ನೀಡಬೇಕಾಗುತ್ತದೆ. ಪ್ರಸ್ತುತ ಜಾರಿಯಲ್ಲಿರುವ 1962ರ ನಿಯಮಗಳಲ್ಲಿ ದ್ವಿಚಕ್ರವಾಹನ ಖರೀದಿಗೆ ಪ್ಯಾನ್ ಅವಶ್ಯಕತೆ ಇರಲಿಲ್ಲ. ಆದರೆ ಕಾರುಗಳ ಖರೀದಿಗೆ ಬೆಲೆಯ ಮಿತಿ ಇಲ್ಲದೆ ಪ್ಯಾನ್ ಕಡ್ಡಾಯವಾಗಿತ್ತು. ಅದೇ ರೀತಿ, ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ಗಳು 1 ಲಕ್ಷ ರೂ. ದಾಟಿದರೆ ಮಾತ್ರ ಪ್ಯಾನ್ ನೀಡಬೇಕು.
ಸ್ಥಿರಾಸ್ತಿಗಳ ಖರೀದಿ, ಮಾರಾಟ ಅಥವಾ ಗಿಫ್ಟ್ಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಈಗಿರುವ 10 ಲಕ್ಷ ರೂ. ಮಿತಿಯನ್ನು 20 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಇನ್ನು ಮುಂದೆ ವಿಮಾ ಕಂಪನಿಗಳೊಂದಿಗೆ ವ್ಯವಹಾರ ಆರಂಭಿಸಲು ಪ್ಯಾನ್ ಕಡ್ಡಾಯವಾಗಲಿದೆ.
ಹೊಸ ನಿಯಮಗಳಡಿ ಉದ್ಯೋಗದಾತರು ನೀಡುವ ಉಚಿತ ಊಟದ ಸೌಲಭ್ಯದ ಮಿತಿಯನ್ನು ಪ್ರತಿ ಊಟಕ್ಕೆ 200 ರೂ.ಗೆ ಹೆಚ್ಚಿಸಲಾಗಿದೆ. ಕಾರು ಭತ್ಯೆಯಾಗಿ 1.6 ಲೀಟರ್ ಎಂಜಿನ್ ಸಾಮರ್ಥ್ಯದ ವಾಹನಗಳಿಗೆ ಮಾಸಿಕ 8,000 ರೂ. ಮತ್ತು ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಿಗೆ 10,000 ರೂ. ನಿಗದಿಪಡಿಸಲಾಗಿದೆ. ಸಾರ್ವಜನಿಕರ ಸಲಹೆ ಪಡೆದ ನಂತರ, ಈ ಕರಡು ನಿಯಮಗಳ ಬಗ್ಗೆ ಮಾರ್ಚ್ ಮೊದಲ ವಾರ ಅಧಿಸೂಚನೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮನೆ ಬಾಡಿಗೆ ಭತ್ಯೆಗೆ 4 ನಗರಗಳ ಸೇರ್ಪಡೆ
ಮನೆ ಬಾಡಿಗೆ ಭತ್ಯೆಯ ಉದ್ದೇಶಕ್ಕಾಗಿ ಮೆಟ್ರೋ ನಗರಗಳ ಪಟ್ಟಿಗೆ ಬೆಂಗಳೂರು, ಪುಣೆ, ಅಹಮದಾಬಾದ್ ಮತ್ತು ಹೈದರಾಬಾದ್ ನಗರಗಳನ್ನು ಹೊಸದಾಗಿ ಸೇರಿಸ ಲಾಗಿದೆ. ಈವರೆಗೆ ಅದರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಮಾತ್ರ ಇದ್ದವು. ಇನ್ನು ಮುಂದೆ ಕಿಪ್ಟ್ ಎಕ್ಸ್ಚೇಂಜ್ಗಳು ತೆರಿಗೆ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು (ಸಿಬಿಡಿಸಿ) ಅಧಿಕೃತ ಎಲೆಕ್ಟ್ರಾನಿಕ್ ಪಾವತಿ ವಿಧಾನವಾಗಿ ಸ್ವೀಕರಿಸಲಾಗುವುದು ಎಂದು ಕರಡು ನಿಯಮಗಳಲ್ಲಿ ತಿಳಿಸಲಾಗಿದೆ.








