ಯುದ್ಧ ಮುಂದುವರಿದರೆ ಸೀಮೆ ಎಣ್ಣೆ ಬುಡ್ಡಿಯೇ ಗತಿ?!
– ಪಡಿತರ ಅಂಗಡಿಗಳಲ್ಲಿ ಇನ್ನು ಮುಂದೆ ಸೀಮೆ ಎಣ್ಣೆ ಲಭ್ಯ
– ಗ್ಯಾಸ್ ಮುಂದೆ ಕಷ್ಟ ಆಗುತ್ತಾ? ಕೇಂದ್ರದ ನಿಯಮ ಏನು?
ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದಲ್ಲಿ ತಲೆದೋರಬಹುದಾದ ಸಿಲಿಂಡರ್ ಪುರೈಕೆಯಲ್ಲಿನ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಪರಿಣಾಮವಾಗಿ ಇನ್ನು ಮುಂದೆ ಮನೆಯಲ್ಲಿ ಅಡುಗೆಗೆ ಸಿಲಿಂಡರ್ ಬದಲಾಗಿ ಸೀಮೆಎಣ್ಣೆಯನ್ನು ಬಳಸಲು ಅವಕಾಶ ಕಲ್ಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳ ಪಡಿತರ ಅಂಗಡಿಗಳಿಗೆ 1 ಲಕ್ಷ ಕಿಲೋಲೀಟರ್ ನಷ್ಟು, ನಿಯಮಿತ ಕೋಟಾದ ಜೊತೆಗೆ, ಇನ್ನೂ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಮೊದಲಿಗೆ ಬಡ ಕುಟುಂಬಗಳಿಗೆ ಇದನ್ನು ಅಡುಗೆಯ ಇಂಧನವಾಗಿ ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭಿಸಿದೆ.
ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸಿಲಿಂಡರ್ ಗೆ ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್ ಡಿಎಫ್ ಪೆಲೆಟ್ ಮತ್ತು ಕಲ್ಲಿದ್ದಲನ್ನು ಒಂದು ತಿಂಗಳ ಕಾಲ ಬಳಸಲು ಅವಕಾಶ ಕಲ್ಪಿಸುವಂತೆ, ಕೇಂದ್ರ ಸರ್ಕಾರವು ಪರಿಸರ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದೆ ಎನ್ನಲಾಗಿದೆ. ಅಲ್ಲದೆ ಇದು ಎಲ್ ಪಿಜಿ ಮೇಲಿನ ಒತ್ತಡವನ್ನು ಕೂಡ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಎಲ್ ಪಿಜಿ ಸಿಲಿಂಡರ್ ಪೂರೈಕೆಯ ಸಮಸ್ಯೆಯು ಮುಖ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಪರಿಣಾಮ ಬೀರಿದ್ದು, ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿರುವುದೇ ಇದಕ್ಕೆ ಕಾರಣವಾಗಿದೆ. ಮೊದಲಿಗೆ ಗ್ರಾಹಕರು 25 ದಿನಕ್ಕೊಮ್ಮೆ ಸಿಲಿಂಡರ್ ಅನ್ನು ಪಡೆಯಬಹುದಿತ್ತು. ಆದರೆ ಪೂರೈಕೆಯ ವ್ಯತ್ಯಯದಿಂದಾಗಿ 45 ದಿನಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಗ್ರಾಮೀಣ ಭಾಗದ ಜನರು 25 ದಿನಗಳಿಗೆ ಬದಲಾಗಿ 45 ದಿನಗಳಿಗೊಮ್ಮೆ ಸಿಲಿಂಡರ್ ಅನ್ನು ಬುಕ್ಕಿಂಗ್ ಮಾಡಿ, ಪಡೆಯಬೇಕು ಎನ್ನುವ ಆದೇಶವನ್ನು ಹೊರಡಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಸುಜಾತ ಶರ್ಮಾ ಅವರು “ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ನಂತರ ದೇಶಿಯ ಸರಬರಾಜುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶವು ಹಿಂದೆಂದೂ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಗ್ರಾಮೀಣ ಭಾಗದ ಗ್ರಾಹಕರು 45 ದಿನಗಳ ನಂತರ ಮಾತ್ರ ಸಿಲಿಂಡರ್ ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತಿರುವುದು ನಿಜಕ್ಕೂ ಕಷ್ಟಕರವಾದ ಸಂಗತಿಯಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
2012ರಲ್ಲಿ ಎಲ್ಪಿಜಿ ಅಡುಗೆ ಅನಿಲ ಬಳಸುವ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು, ಇದರ ಮೂಲಕ ಉಜ್ವಲ ಯೋಜನೆಯನ್ನು ಪ್ರಾರಂಭಿಸಿ, ಈ ಯೋಜನೆಯ ಅಡಿಯಲ್ಲಿ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಸಿಲಿಂಡರ್ ಅನ್ನು ನೀಡುತ್ತಿತ್ತು. ಆದರೆ ಈಗಿನ ಪರಿಸ್ಥಿತಿಗೆ ಅದು ಸಾಧ್ಯವಾಗದಿರುವ ಕಾರಣ ಕೇಂದ್ರ ಸರ್ಕಾರವು ಸೀಮೆಎಣ್ಣೆ ಬಳಕೆಗೆ ಅನುಮತಿ ನೀಡುವ ಮೂಲಕ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ಸಧ್ಯಕ್ಕೆ ಪರಿಹಾರ ಒದಗಿಸಿದೆ ಎನ್ನಲಾಗಿದೆ.








