ಟಾಪ್ ನ್ಯೂಸ್ ನ್ಯೂಸ್ ಕರ್ನಾಟಕ
ದೆವ್ವ ಬಂದಿದೆ ಎಂದು ವಿಮಾನದ ತುರ್ತು ಬಾಗಿಲು ತೆಗೆದವ ಅರೆಸ್ಟ್!
– ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿಗೆ ಶಿಕ್ಷೆ
– ರೀಲ್ಸ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಅಜ್ಜಿ ಇನ್ನಿಲ್ಲ
– ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ; ಬೆಂಗಳೂರಲ್ಲೇ ಹೆಚ್ಚು!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ, ವಿಮಾನದ ತುರ್ತು ನಿರ್ಗಮನದ ದ್ವಾರವನ್ನು ಎರಡು ಬಾರಿ ತೆರೆಯಲು ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ ನಡೆದಿದೆ. ರಾತ್ರಿ 8:15ಕ್ಕೆ ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ವಿಮಾನದಲ್ಲಿ, ಟೇಕಾಫ್ ಆದ ಹದಿನೈದು ನಿಮಿಷಕ್ಕೇ ವ್ಯಕ್ತಿಯೊಬ್ಬ ತುರ್ತು ನಿರ್ಗಮನದ ದ್ವಾರವನ್ನು ತೆರೆಯಲು ಪ್ರಯತ್ನಿಸಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ‘ನನ್ನ ಮೈ ಮೇಲೆ ದೆವ್ವ ಬಂದಿದೆ’ಎನ್ನುವಂತಹ ವಿಚಿತ್ರ ರೀತಿಯಲ್ಲಿ ಉತ್ತರ ನೀಡಿದ್ದಾನೆ ಎನ್ನಲಾಗಿದೆ. ವ್ಯಕ್ತಿಯನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ. ವಾರಣಾಸಿಯಲ್ಲಿ ವಿಮಾನವು ಭೂಸ್ಪರ್ಶ ಮಾಡುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
• ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿಗೆ ಶಿಕ್ಷೆ?
ಮಂಗಳೂರು: ಕದ್ರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಭಯದ ವಾತಾವರಣ ಸೃಷ್ಟಿಸಿ, ಕುಕ್ಕರ್ ಬಾಂಬ್ ಸ್ಪೋಟಿಸಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 170 ಮಂದಿಯ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ ಶಾರೀಕ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಈಗಾಗಲೇ 46ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ. ಇದರ ನಡುವೆ ಶಾರೀಕ್ ಅಧಿಕಾರಿಗಳು ತನ್ನ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯವು ಏಪ್ರಿಲ್ 10ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಪಡಿಸುತ್ತದೆ ಎನ್ನುವ ಸಂಗತಿ ತಿಳಿದುಬಂದಿದೆ.
ರೀಲ್ಸ್ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಅಜ್ಜಿ ಇನ್ನಿಲ್ಲ
ಯಲ್ಲಾಪುರ: ಸಾಮಾಜಿಕ ಜಾಲತಾಣಗಳನ್ನು ಬಳಸುವುದು, ಅದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಬಹುತೇಕ ಇಂದಿನ ಯುವಜನರ ಒಂದು ಹವ್ಯಾಸ. ಆದರೆ, ತಮ್ಮ 9೦ನೇ ವಯಸ್ಸಿನಲ್ಲಿ ರೀಲ್ಸ್ ಗಳನ್ನು ಮಾಡುವ ಮೂಲಕ ದೇಶದ ಅತ್ಯಂತ ಹಿರಿಯ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಎನ್ನುವ ಖ್ಯಾತಿ ಪಡೆದಿದ್ದ ಲಕ್ಷ್ಮೀ ಮಾಸ್ತಪ್ಪ ನಾಯ್ಕ ಅವರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಸೂರಜ್ ಆಚಾರಿ ಅವರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಮೂಲಕ ಲಕ್ಷಾಂತರ ಅನುಯಾಯಿಗಳ ಮನಗೆದ್ದಿದ್ದರು. ತಮ್ಮ ಮುಗ್ದತೆಯ ಅಭಿನಯದ ಮೂಲಕ ಕನ್ನಡಿಗರನ್ನು ನಗಿಸುತ್ತಿದ್ದ ಲಕ್ಷ್ಮೀ ಅಜ್ಜಿಯ ಅಗಲಿಕೆಗೆ ರೀಲ್ಸ್ ಪ್ರಿಯರು ವಿಷಾದ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ; ಬೆಂಗಳೂರಲ್ಲೇ ಹೆಚ್ಚು!
ಬೆಂಗಳೂರು: 14 ರಿಂದ 18 ವರ್ಷದ ಒಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ವೆಯೊಂದು ನಡೆದಿದ್ದು, ಇದರ ಪರಿಣಾಮವಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾದ ಬಾಲಕಿಯರ ಸಂಖ್ಯೆ 5975 ಎನ್ನುವುದು ಬೆಳಕಿಗೆ ಬಂದಿದೆ. ಈ ವಿಚಾರದಲ್ಲಿ ಕರ್ನಾಟಕದ ರಾಜಧಾನಿ, ಉದ್ಯಾನನಗರಿ, ಸಿಲಿಕಾನ್ ಸಿಟಿ ಎನ್ನುವ ಖ್ಯಾತಿಗೆ ಒಳಗಾಗಿರುವ ಬೆಂಗಳೂರು ಮೊದಲ ಸ್ಥಾನದಲ್ಲಿರುವುದು ದುರಂತ. ಇದರ ಕುರಿತು ಮಕ್ಕಳ ರಕ್ಷಣಾ ನೀತಿ 2023ರ ಅನ್ವಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿಯರು, ಬಾಲ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಸಂಬಂಧಿಸಿದಂತೆ ಪಾಲಿಸಬೇಕಾದ ಕ್ರಮಬದ್ಧ ಕಾರ್ಯವಿಧಾನವನ್ನು ಕೂಡ ಹೊರಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ- ಕಾಲೇಜು, ವಸತಿ ನಿಲಯ ಮತ್ತು ತರಬೇತಿ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಬಾಲಗರ್ಭಿಣಿ, ಮಕ್ಕಳ ಸಹಾಯವಾಣಿ-1098 ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲು ವಿವಿಧ ಇಲಾಖೆಗಳು ನಿಗಾವಹಿಸಬೇಕೆಂದು ಆದ್ಯತೆಯ ಅಂಶಗಳ ಕುರಿತು ಏಳು ಇಲಾಖೆಗಳಿಂದ ಸುತ್ತೋಲೆಯನ್ನು ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಹಂತಗಳಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ನೀಡಲು ಎಲ್ಲಾ ಭಾಗಿದಾರ ಇಲಾಖೆಗಳ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಯೋಜಿಸಲಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
