ಟಾಪ್ ನ್ಯೂಸ್ ನ್ಯೂಸ್ ಮಲ್ನಾಡ್
ಮಂಗಳೂರು: ಕುಕ್ಕರ್ ಬಾಂಬ್ ಕೇಸ್: ಏ.10ರಂದು ಶಿಕ್ಷೆ ಪ್ರಕಟ!
ಶಿವಮೊಗ್ಗ: ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಕೊಲೆ ಶಂಕೆ!
ತೀರ್ಥಹಳ್ಳಿ: ಅನುಮಾನ ಹುಟ್ಟಿಸಿದ ವೃದ್ಧೆಯ ನಡತೆ!
ಕೊಪ್ಪ: ಮತ್ತೊಂದು ಹಿಟ್ ಆ್ಯಂಡ್ ರನ್: ಮಣಿಪಾಲ ದಾಖಲು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮತ್ತು ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ. ತಮ್ಮದೇ ತೋಟದ ಮಧ್ಯೆ, ಬೆಂಕಿ ಹೊತ್ತಿ ಉರಿದಿರುವ ಸ್ಥಿತಿಯಲ್ಲಿ ಉಪನ್ಯಾಸಕರಾದ ಸುರೇಶ್ ಅವರ ಶವ ಪತ್ತೆಯಾಗಿರುವುದು ಆಘಾತಕಾರಿಯಾಗಿದೆ. ಶನಿವಾರದಂದು ಮದುವೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಸುರೇಶ್ ಅವರು, ಭಾನುವಾರ ಬೆಳಿಗ್ಗೆ ತೋಟದಲ್ಲಿ ಈ ರೀತಿ ಪತ್ತೆಯಾಗಿದ್ದಾರೆ.
ಆಗಲೂ ಕೂಡ ಶವವು ಉರಿಯುತ್ತಿದ್ದು, ಸುತ್ತಮುತ್ತಲಿನ ಗರಿಗಳು ಕೂಡ ಬೆಂಕಿಯಿಂದ ಉರಿಯುತ್ತಿತ್ತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಸುರೇಶ್ ಅವರ ಸಾವು ಕೊಲೆಯೇ ಅಥವಾ ಆತ್ಮಹತ್ಯೆಯೇ ಎನ್ನುವುದು ಸಂದೇಹವನ್ನು ಉಂಟು ಮಾಡಿದ್ದು, ಪೊಲೀಸರು ಈ ವಿಚಾರವಾಗಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಕಾರಣದಿಂದ ತಜ್ಞವೈದ್ಯರಿಂದ ಶವಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.
• ಮಂಗಳೂರು: ಕುಕ್ಕರ್ ಬಾಂಬ್ ಪ್ರಕರಣ; ಆರೋಪಿ ತಪ್ಪೊಪ್ಪಿಗೆ
ಮಂಗಳೂರು: ಕದ್ರಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಪೋಟಿಸುವುದಾಗಿ ಭಯದ ವಾತಾವರಣ ಸೃಷ್ಟಿಸಿ, ಕುಕ್ಕರ್ ಬಾಂಬ್ ಸ್ಪೋಟಿಸಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು 170 ಮಂದಿಯ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಿ ಶಾರೀಕ್ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದು, ಈಗಾಗಲೇ 46ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದೆ.
ಇದರ ನಡುವೆ ಶಾರೀಕ್ ಅಧಿಕಾರಿಗಳು ತನ್ನ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಡಿಸೆಂಬರ್ ತಿಂಗಳಿನಲ್ಲಿಯೇ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳುಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯವು ಏಪ್ರಿಲ್ 10ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಪಡಿಸುತ್ತದೆ ಎನ್ನುವ ಸಂಗತಿ ತಿಳಿದುಬಂದಿದೆ.
•ತೀರ್ಥಹಳ್ಳಿ: ಅನುಮಾನ ಹುಟ್ಟಿಸಿದ ವೃದ್ಧೆಯ ನಡತೆ
ತೀರ್ಥಹಳ್ಳಿ: ದೇವಂಗಿಯ ನಿವಾಸಿಯಾದ 90 ವರ್ಷದ ಲಕ್ಷ್ಮೀದೇವಿ ಅವರು ಶಿವಮೊಗ್ಗದಲ್ಲಿದ್ದ ತಮ್ಮ ಮಗಳ ಮನೆಯಿಂದ ಆಸ್ಪತ್ರೆಗೆ ಹೋಗುತ್ತೇನೆಂದು ತಿಳಿಸಿ ಬಂದಿದ್ದು ತೀರ್ಥಹಳ್ಳಿಯ ತುಂಗಾ ಸೇತುವೆಯ ಹತ್ತಿರ ಓಡಾಡುತ್ತಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿರಬಹುದು ಎನ್ನುವ ಅನುಮಾನ ಸ್ಥಳೀಯರಲ್ಲಿ ಮೂಡಿಸಿದೆ. ಎಷ್ಟೇ ತಿಳಿ ಹೇಳಿದರೂ ಮಗ ಮತ್ತು ಮಗಳು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ನೆಪವೊಡ್ಡಿ ಮನೆಗೆ ಹಿಂತಿರುಗಿ ಹೋಗಲು ನಿರಾಕರಿಸಿದ್ದಾರೆ.
ಅಲ್ಲದೆ ಅವರ ಮೈಮೇಲೆ ಚಿನ್ನಾಭರಣವನ್ನು ಗಮನಿಸಿದ ಸ್ಥಳೀಯರು ಏನಾದರೂ ಅನಾಹುತ ಸಂಭವಿಸಿದರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತೀರ್ಥಹಳ್ಳಿಯ ಡಿವೈಎಸ್ ಪಿ ಅರವಿಂದ್ ಕಲಗುಜ್ಜಿ ಪೊಲೀಸ್ ಇನ್ಸ್ಪೆಕ್ಟರ್ ಆದ ಇಮ್ರಾನ್ ಬೇಗ್, ಎಸ್ಐ ಸುರೇಖಾ, ಚಾಲಕ ಸುನಿಲ್ ಡಿಸೋಜಾ ಮತ್ತು ಹೈವೇ ಪೆಟ್ರೋಲಿಯಂನವರು ವೃದ್ಧೆಯನ್ನು ಸಮಾಧಾನಪಡಿಸಿ, ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಂತರ ಶಿವಮೊಗ್ಗದಲ್ಲಿರುವ ಅವರ ಮಗಳಿಗೆ ಕರೆ ಮಾಡಿ ತಿಳಿಸಿ, ಅಲ್ಲಿಂದ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
• ಕೊಪ್ಪ: ಮತ್ತೊಂದು ಹಿಟ್ ಆ್ಯಂಡ್ ರನ್: ಮಣಿಪಾಲ ದಾಖಲು
ಕೊಪ್ಪ: ವಾಕಿಂಗ್ ಗೆ ತೆರಳಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರಿಗೆ ವಾಹನವೊಂದು ಡಿಕ್ಕಿ ಹೊಡೆದು, ಚಾಲಕ ಅಲ್ಲಿಂದ ಪರಾರಿಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬಾಳಗಡಿಯ ಮೆಸ್ಕಾಂ ರಸ್ತೆಯಲ್ಲಿ ನಡೆದಿದೆ. ಪರಿಣಾಮವಾಗಿ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಗಮನಿಸಿದ ಶಿಕ್ಷಕರೊಬ್ಬರು ಆಟೋ ಚಾಲಕರೊಬ್ಬರ ಸಹಾಯದಿಂದ ವ್ಯಕ್ತಿಯನ್ನು ಕೊಪ್ಪ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಮಣಿಪಾಲ ಕರೆದುಕೊಂಡು ಹೋಗಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.








