ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ಹಣ ವರ್ಗಾವಣೆ ವಂಚನೆ
• ಬಂಟ್ವಾಳ: ಹೃದಯಾಘಾತಕ್ಕೆ ಯುವಕ ಬಲಿ
• ಸುಳ್ಯ: ಕಾರಿನ ಮೇಲೆ ಉರುಳಿದ ಮರ
• ಉಡುಪಿ: ಬಾಲಕನ ವೀಡಿಯೋ ಚಿತ್ರೀಕರಣ: ಅರೆಸ್ಟ್!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಕೆಯ್ಯೂರು ಗ್ರಾಮದ ನಿವಾಸಿಯಾದ ಹಸೈನಾರ್ ಎನ್ನುವವರು ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಅದರಿಂದ ಬೇರೊಂದು ಖಾತೆಗೆ ಹಣ ವರ್ಗಾವಣೆಯಾದ ಘಟನೆ, ನಡೆದಿದೆ. ಫೆಬ್ರವರಿ 9ರಂದು ಹಸೈನಾರ್ ಖಾತೆಯಿಂದ 49.೦೦೦ ಹಾಗೂ ಕೆಲವು ದಿನಗಳ ಹಿಂದೆ 25.600 ವರ್ಗಾವಣೆಗೊಂಡಿರುವ ಕುರಿತು ಮೊಬೈಲ್ ಸಂದೇಶ ಬಂದಿದೆ. ಹಸೈನಾರ್ ಬ್ಯಾಂಕ್ ಗೆ ತೆರಳಿ ಇದರ ಬಗ್ಗೆ ವಿಚಾರಿಸಿದಾಗ ಒಟ್ಟು 75.599 ರೂಪಾಯಿಯಷ್ಟು ಹಣ ಅಪರಿಚಿತನ ಖಾತೆಗೆ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಹಸೈನಾರ್ ಅವರು ತಮ್ಮ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಬಳಿಕ 1930ಕ್ಕೆ ಕರೆ ಮಾಡಿ ಯಾರೋ ಅಪರಿಚಿತರು ತಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಗ್ರಾಹಕರಾದ ಹಸೈನಾರ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬಂಟ್ವಾಳ: ಹೃದಯಾಘಾತಕ್ಕೆ ಯುವಕ ಬಲಿ
ಬಂಟ್ವಾಳ: ಹೃದಯಾಘಾತಕ್ಕೆ ಒಳಗಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ, ಕುಕ್ಕಿಪಾಡಿ ಎನ್ನುವಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರಶಾಂತ್ ಆಚಾರ್ಯ ಎಂದು ಹೇಳಲಾಗಿದೆ. ಸಿದ್ಧಕಟ್ಟೆಯ ಯಂತ್ರೋಪಕರಣ ಅಂಗಡಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಶಾಂತ್ ಆಚಾರ್ಯ ಅವರು ಭಾನುವಾರ ರಜಾ ದಿನವಾದ್ದರಿಂದ ಅರಂತಾಡಿಯ ಮನೆಯೊಂದರಲ್ಲಿ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತು ಎನ್ನಲಾಗಿದೆ.
ತಕ್ಷಣ ಅವರನ್ನು ಸಿದ್ಧಕಟ್ಟೆಯ ವೈದ್ಯರ ಸಲಹೆಯ ಮೇರೆಗೆ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುತ್ತಿದ್ದಂತೆ ತಪಾಸಣೆ ನಡೆಸಿದ ವೈದ್ಯರು ಪ್ರಶಾಂತ್ ಆಚಾರ್ಯ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
• ಸುಳ್ಯ: ಕಾರಿನ ಮೇಲೆ ಉರುಳಿದ ಮರ
ಸುಳ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ, ಸೋಮವಾರದಂದು ಬೆಂಗಮಲೆಯಲ್ಲಿ ನಡೆದಿದೆ. ಸುಳ್ಯದ ಬ್ಯಾಂಕ್ ಮ್ಯಾನೇಜರ್ ಆಗಿರುವ ಉತ್ಸವ್ ಚಕ್ರವರ್ತಿ ಮತ್ತು ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಸುಳ್ಯದ ಉಮ್ಮರ್ ಅವರಿಗೆ ಸೇರಿದ ಬಾಡಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಸಾಲ ವಸೂಲಾತಿಗಾಗಿ ಪಂಜಾದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಈ ಸನ್ನಿವೇಶ ಎದುರಾಗಿದೆ.
ಪರಿಣಾಮವಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಇಬ್ಬರು ವ್ಯಕ್ತಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.ರಸ್ತೆಯ ಮಧ್ಯದಲ್ಲಿ ಮರ ಬಿದ್ದ ಕಾರಣದಿಂದಾಗಿ ಅರ್ಧ ಗಂಟೆ ಕಾಲ ಇತರ ವಾಹನಗಳ ಸಂಚಾರದಲ್ಲಿ ಅಡಚಣೆಯುಂಟಾಯಿತು ಎನ್ನಲಾಗಿದೆ. ನಂತರ ಸ್ಥಳೀಯರು ಒಗ್ಗೂಡಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ.
• ಉಡುಪಿ: ಬಾಲಕನ ವೀಡಿಯೋ ಚಿತ್ರೀಕರಣ; ಇಬ್ಬರ ಬಂಧನ
ಉಡುಪಿ: ಕಟಿಂಗ್ ಶಾಪ್ ಒಂದರಲ್ಲಿ ಬಾಲಕನ ವೀಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಘಟನೆ, ಕಂಡೂರು ಪೇಟೆಯಲ್ಲಿ ನಡೆದಿದೆ. ಬಿಹಾರ ಮೂಲದ ಬಾಲಕನೊಬ್ಬ ಕಟಿಂಗ್ ಶಾಪ್ ಗೆ ಬಂದಿದ್ದ ಸಂದರ್ಭದಲ್ಲಿ ಹೇಳಿರುವ ವಿಷಯವನ್ನು ವೀಡಿಯೋ ಮಾಡಿಕೊಂಡು, ಸಾರ್ವಜನಿಕರನ್ನು ಗಲಾಟೆಗೆ ಪ್ರಚೋದಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಬಾಲಕ ಕೂಡ ಕಾನೂನು ಸಂಘರ್ಷಕ್ಕೆ ಒಳಗಾದವನು ಎನ್ನುವ ಸಂಗತಿ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಬಾಲಕನ ತಂದೆಯು ಕುಂದಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಮತ್ತೊಂದೆಡೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಟಿಂಗ್ ಶಾಪ್ ಬಳಿ 20 ರಿಂದ 30 ಜನ ಗುಂಪುಗೂಡಿ ಬೆದರಿಕೆ ಹಾಕಿರುವುದರ ಕುರಿತು ಕಟಿಂಗ್ ಶಾಪ್ ನ ಮಾಲೀಕರಾದ ಶಶಾಂಕ್ ಭಂಡಾರಿ ಕೂಡ ದೂರು ನೀಡಿದ್ದಾರೆ. ಪೊಲೀಸರು ದೂರಿನ ಆಧಾರದ ಮೇಲೆ ವೀಡಿಯೋ ಚಿತ್ರೀಕರಿಸಿದ ಶಶಾಂಕ್ ಭಂಡಾರಿ ಮತ್ತು ಪ್ರಮೋದ್ ಡಿಸೋಜಾ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.








