ಕರಾವಳಿ ಟಾಪ್ ನ್ಯೂಸ್
• ಕಾಪು: ಪ್ರವಾಸಕ್ಕೆ ತೆರಳಿದ್ದ ಯುವಕ ಸಾವು
• ಬೆಳ್ತಂಗಡಿ: ಆ್ಯಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆ
• ಪುತ್ತೂರು: ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಸಂಗ್ರಹ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾಪು: ಕಟಪಾಡಿಯ ಸರಕಾರಿಗುಡ್ಡೆ ನಿವಾಸಿಯಾದ, 33 ವರ್ಷ ವಯಸ್ಸಿನ ಅಶೋಕ್ ಆಚಾರ್ಯ ಎನ್ನುವ ಯುವಕನು ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ, ಮೃತಪಟ್ಟ ಘಟನೆ ನಡೆದಿದೆ. ಉಡುಪಿಯ ತಂಡವೊಂದು ಅಸ್ಸಾಂ ರಾಜ್ಯದ ಗುವಾಹಟಿಗೆ ಪ್ರವಾಸಕ್ಕೆಂದು ತೆರಳಿದ್ದಾಗ ಆ ತಂಡದಲ್ಲಿ ಅಶೋಕ್ ಆಚಾರ್ಯ ಅವರು ಸಹ ಇದ್ದರು ಎನ್ನಲಾಗಿದೆ. ಪ್ರವಾಸದ ಸಮಯದಲ್ಲಿ ಅಶೋಕ್ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ತಕ್ಷಣ ಅವರನ್ನು ಪ್ರವಾಸದಲ್ಲಿದ್ದ ಇತರರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಬೆಳ್ತಂಗಡಿ: ಆ್ಯಸಿಡ್ ಸೇವಿಸಿ ಮಹಿಳೆ ಆತ್ಮಹತ್ಯೆ
ಬೆಳ್ತಂಗಡಿ: ಮಹಿಳೆಯೊಬ್ಬರು ಮಾನಸಿಕವಾಗಿ ನೊಂದು, ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಭಾನುವಾರದಂದು ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಕಲ್ಮಂಜ ಗ್ರಾಮದ ಆರ್ಲ ನಿವಾಸಿಯಾದ ಗುಲಾಬಿ ಎಂದು ಗುರುತಿಸಲಾಗಿದೆ. ಗುಲಾಬಿ ಅವರ ಪತಿ ಮೃತಪಟ್ಟಿದ್ದು ಮನೆಯಲ್ಲಿ ಏಕಾಂಗಿಯಾಗಿದ್ದರು. ಇಬ್ಬರು ಪುತ್ರಿಯರಿದ್ದು, ವಾರಕ್ಕೊಮ್ಮೆ ಬಂದು ತಾಯಿಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಭಾನುವಾರದಂದು ಇಬ್ಬರು ಪುತ್ರಿಯರು ತಾಯಿಯ ಮನೆಗೆ ಬಂದ ಸಂದರ್ಭದಲ್ಲಿ, ಗುಲಾಬಿ ಅವರು ಕುಸಿದು ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಅವರನ್ನು ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಬೇಕೆಂದು ಕರೆದೊಯ್ಯುವಾಗಲೇ ಮಾರ್ಗಮಧ್ಯದಲ್ಲೇ ಮೃತಪಟ್ಟರು ಎನ್ನುವ ಮಾಹಿತಿ ಲಭಿಸಿದೆ. ಅವರು ರಬ್ಬರ್ ಹಾಲಿಗೆ ಹಾಕುವ ಆ್ಯಸಿಡ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಪುತ್ತೂರು: ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಸಂಗ್ರಹ
ಪುತ್ತೂರು:ಅಕ್ರಮ ಮರಳು ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುತೇಶ್ ಕೆ.ಪಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಘಟನೆ, ಮಂಗಳವಾರದಂದು ಬಜತ್ತೂರು ಗ್ರಾಮದ ವಳಾಲು ಎನ್ನುವ ಪ್ರದೇಶದಲ್ಲಿ ನಡೆದಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಗಣಿ ಇಲಾಖೆಯ ಪರವಾನಿಗೆ ಇಲ್ಲದೆ ನೇತ್ರಾವತಿ ನದಿಯ ದಂಡೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇದರಲ್ಲಿ ತೊಡಗಿಸಿಕೊಂಡ ಕಾರ್ಮಿಕರ ವಿಚಾರಣೆ ನಡೆಸಿದಾಗ ಜೈನುದ್ಧೀನ್ ಎನ್ನುವ ವ್ಯಕ್ತಿಯೊಬ್ಬನ ಆದೇಶದ ಮೇರೆಗೆ ಮರಳು ದಾಸ್ತಾನು ಮಾಡುತ್ತಿದ್ದೇವೆ ಎಂದು ಕಾರ್ಮಿಕರೊಬ್ಬರು ಹೇಳಿಕೆ ನೀಡಿದ್ದಾರೆ. ಕಾರ್ಯಚರಣೆಯ ಸಮಯದಲ್ಲಿ ಪೊಲೀಸರು 30 ಟನ್ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು, ಮರಳುಗಾರಿಕೆಗೆ ಬಳಸಿದ ಒಂದು ದೋಣಿ, ನಾಲ್ಕು ಹಾರೆಗಳು, ಹನ್ನೊಂದು ಕಬ್ಬಿಣದ ಬಕೆಟ್ ಗಳು, ಹತ್ತು ಪ್ಲಾಸ್ಟಿಕ್ ಬಕೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜೈನುದ್ಧೀನ್ ಎನ್ನುವ ಆರೋಪಿಯ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







