ಕರಾವಳಿ ಟಾಪ್ ನ್ಯೂಸ್
• ಉಡುಪಿ: ಪೆಟ್ರೋಲ್ಗೆ ಹಾಕಿ ಬೆಂಕಿ ಹಚ್ಚಿಕೊಂಡ ಯುವಕ!
• ಬಂಟ್ವಾಳ: ಕೆರೆಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ
• ಉಳ್ಳಾಲ: ಕರೆಂಟ್ ಶಾಕ್ ಹೊಡೆದು ಯುವಕ ಸಾವು..!
• ಬೈಂದೂರು: ಕಾಲೇಜು ವಾಹನ ಅಪಘಾತ: ಶಾಲಾ ವಿದ್ಯಾರ್ಥಿಗಳಿಗೆ ಗಾಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ, ಸದಾ ಸಂಚಾರದಟ್ಟಣೆಯಿಂದ ಕೂಡಿರುವ ಉಡುಪಿಯ ಕಲ್ಸಂಕ ಜಂಕ್ಷನ್ ಬಳಿ ನಡೆದಿದೆ. ಪರಿಣಾಮವಾಗಿ ಕೆಲವು ಕಾಲ ಭಯದ ವಾತಾವರಣ ಸೃಷ್ಟಿಯಾಗಿದ್ದು, ಟ್ರಾಫಿಕ್ ಪೊಲೀಸರ ಕರ್ತವ್ಯಕ್ಕೂ ಅಡಚಣೆಯುಂಟಾಯಿತು.ಈ ಹಿಂದೆ ಕೂಡ ಯುವಕ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ತಂದು, ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಕಿರುಚಿಕೊಂಡಿದ್ದು, ಆಗ ಪೊಲೀಸರು ಬಾಟಲಿಯನ್ನು ಕಸಿದುಕೊಂಡು, ಆತನನ್ನು ಪಾರು ಮಾಡಿದ್ದರು ಎನ್ನಲಾಗಿದೆ.
ಇದೀಗ ಪುನಃ ಅದೇ ರೀತಿಯ ಸನ್ನಿವೇಶ ಎದುರಾಗಿದ್ದು, ಟ್ರಾಫಿಕ್ ಪೊಲೀಸರ ಸಮಯಪ್ರಜ್ಞೆಯಿಂದ ಆಗಲಿದ್ದ ಅನಾಹುತವೊಂದು ತಪ್ಪಿದ್ದು, ಇದಕ್ಕೆ ನಿತ್ಯಾನಂದ ಒಳಕಾಡು ಅವರು ಕೂಡ ಸಹಕಾರ ನೀಡಿದರು. ಬಳಿಕ ಪೊಲೀಸರು ಯುವಕನನ್ನು ಸಮಾಧಾನಪಡಿಸಿ, ಆತನ ಊರಾದ ಗದಗಕ್ಕೆ ಕಳುಹಿಸಿಕೊಟ್ಟರು ಎನ್ನುವ ಮಾಹಿತಿ ಲಭಿಸಿದೆ. ಯುವಕನ ಈ ಹುಚ್ಚಾಟ್ಟಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
• ಬಂಟ್ವಾಳ: ಕೆರೆಯಲ್ಲಿ ವಿದ್ಯಾರ್ಥಿನಿಯ ಮೃತದೇಹ ಪತ್ತೆ
ಬಂಟ್ವಾಳ: ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕೆರೆಯಲ್ಲಿ ಶವವಾಗಿ ಕಂಡುಬಂದ ಘಟನೆ, ಕೊಡಂಗಾಯಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಮೂರುಕಜೆಯ ಮೈತ್ರೆಯಿ ಗುರುಕುಲ ಶಾಲೆಯ ವಿದ್ಯಾರ್ಥಿನಿ, ಬೆಂಗಳೂರು ಮೂಲದ ವೈಗಲಕ್ಷ್ಮೀ ಎಂದು ಗುರುತಿಸಲಾಗಿದೆ. ವೈಗಲಕ್ಷ್ಮೀ 22ರ ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಆದರೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸೋಮವಾರದಂದು ಸಮೀಪದಲ್ಲಿದ್ದ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು. ಬಾಲಕಿಯು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಕೆರೆಯಲ್ಲಿದ್ದ ವಿದ್ಯಾರ್ಥಿನಿಯ ಮೃತದೇಹವನ್ನು ಫ್ರೆಂಡ್ಸ್ ವಿಟ್ಲದ ಮುರುಳಿಧರ ಮತ್ತು ತಂಡದವರು ಮೇಲಕ್ಕೆ ತಂದಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭಿಸಬೇಕಿದೆ.
•ಉಳ್ಳಾಲ: ಕರೆಂಟ್ ಶಾಕ್ ಹೊಡೆದು ಯುವಕ ಸಾವು
ಉಳ್ಳಾಲ: ಹೊಸ ಬಟ್ಟೆ ಅಂಗಡಿಯನ್ನು ತೆರೆಯುವ ಹುಮ್ಮಸ್ಸಿನಲ್ಲಿದ್ದ ಯುವಕ, ಅದೇ ಅಂಗಡಿಯಲ್ಲಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟ ಘಟನೆ, ಸೋಮವಾರದಂದು ತೊಕ್ಕೊಟಿಯಲ್ಲಿ ನಡೆದಿದೆ. ಮೃತ ಯುವಕನನ್ನು ಪಾಂಡೇಶ್ವರದ ಸಲ್ಮಾನ್ ಫಾರಿಶ್ ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ತಮ್ಮ ಮಾಲೀಕತ್ವದಲ್ಲಿ ‘ಝೀರೋ’ ಎಂಬ ಹೆಸರಿನ ವಸ್ತ್ರ ಮಳಿಗೆಯನ್ನು ತೆರೆಯುವ ಸಿದ್ಧತೆಯಲ್ಲಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಶುಕ್ರವಾರದಂದು ಉದ್ಘಾಟನೆಗೊಳ್ಳಲಿರುವ ವಸ್ತ್ರ ಮಳಿಗೆಗೆ ಸಂಬಂಧಿಸಿದಂತೆ ಭಾನುವಾರದಂದು ಎಲೆಕ್ಟ್ರಿಷಿಯನ್ ಕೆಲಸ ಭರದಿಂದ ಸಾಗುತ್ತಿತ್ತು. ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದ ಸಲ್ಮಾನ್ ಫರಿಶ್ ಅವರಿಗೆ ನಡುರಾತ್ರಿ 1:30ರ ಸುಮಾರಿಗೆ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಟೋ ಮೂಲಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ, ಆಸ್ಪತ್ರೆಗೆ ತಲುಪುವ ಮೊದಲೇ ಸಲ್ಮಾನ್ ಮೃತಪಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಉಳ್ಳಾಲ ಠಾಣೆಯ ಪೊಲೀಸರು ಸ್ಥಳದ ಪರಿಶೀಲನೆಯನ್ನು ನಡೆಸಿದರು ಎನ್ನಲಾಗಿದೆ.
• ಬೈಂದೂರು: ಕಾಲೇಜು ವಾಹನ ಅಪಘಾತ
ಬೈಂದೂರು: ವಿದ್ಯಾರ್ಥಿಗಳನ್ನು ಒಳಗೊಂಡ ಕಾಲೇಜು ವಾಹನ ಅಪಘಾತಗೊಂಡ ಘಟನೆ, ಮಂಗಳವಾರ ಬೆಳಿಗ್ಗೆ ಹಳ್ಳಿಹೊಳೆ ಗ್ರಾಮದ ಶೆಟ್ಟಿಪಾಲು ಬಳಿ ನಡೆದಿದೆ. ಸುಳಗೋಡು ಶಾಲೆಯಲ್ಲಿ ನಡೆಯುತ್ತಿರುವ ಎನ್ಎಸ್ಎಸ್ ಶಿಬಿರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿಬಿದ್ದಿದೆ. ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉರುಳಿ ಬಿದ್ದ ರಭಸಕ್ಕೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.







