ಕರಾವಳಿ ಟಾಪ್ ನ್ಯೂಸ್
ಬಸ್ಸಲ್ಲಿ ಬಿದ್ದಿದ್ದ 3 ಲಕ್ಷದ ಚಿನ್ನದ ಸರ ವಾಪಸು ಕೊಟ್ಟ ಕಂಡಕ್ಟರ್!
– ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಮಾನವೀಯತೆ
• ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ
• ಉಡುಪಿ:ಯುವಕನಿಗೆ ಚೂರಿ ಇರಿತ; ನಾಲ್ವರ ಬಂಧನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: 3 ಲಕ್ಷ ಬೆಲೆ ಬಾಳುವ ಚಿನ್ನದ ಸರ ಬಸ್ಸಲ್ಲಿ ಬೀಳಿಸಿಕೊಂಡಿದ್ದು, ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಬಸ್ಸಿನಲ್ಲಿ ಸುಮಾರು 3,00,000 ಬೆಲೆ ಬಾಳುವ ಚಿನ್ನದ ಸರ ಸಿಕ್ಕಿದ್ದು ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡ ಅವರು ಯಾವುದೇ ಲಾಭದ ಆಸೆಗೆ ಒಳಗಾಗದೆ ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿದ್ದು, ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುದೀಕ್ಷಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದು ಅವರು ಸೂಕ್ತದ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದಿರುತ್ತಾರೆ .
ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗಡೆ ಇವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ. ಜನತೆ ಕೂಡ ರಾಜೇಶ್ ಅವರ ಸೇವೆಗೆ ಧನ್ಯವಾದ ಅರ್ಪಿಸಿದ್ದಾರೆ.
ಪ್ರೇಮ ಪ್ರಕರಣಕ್ಕೆ ಸಂಧಾನಕ್ಕೆ ಬಂದವರಿಗೆ ಚೂರಿ ಇರಿತ!
ಉಡುಪಿ: ಪ್ರೇಮ ಪ್ರಕರಣವೊಂದರ ಸಂಧಾನದ ವೇಳೆ ಬಿಜೆಪಿ ಹಾಗೂ ಹಿಂದೂ ಯುವ ಸೇನೆಯ ಮುಖಂಡ ಮಂಜು ಕೋಳ ಅವರಿಗೆ ಚೂರಿಯಿಂದ ಇರಿದ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಲಿಮಾರು ನಿವಾಸಿಗಳಾದ ಪ್ರಜೇಶ್, ಪುನೀತ್, ಅಮೃತ್, ಅಭಿಜಿತ್ ಹಾಗೂ ಇನ್ನೊಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಅವರ ಪತಿ ಮಂಜು ಕೋಳ ಅವರು, ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಜೋಡಿಯೊಂದರ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ರಾಜಿ ಪಂಚಾಯಿತಿ ನಡೆಸಲು ತೆರಳಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಉಂಟಾದ ಗಲಾಟೆಯಲ್ಲಿ, ಯುವಕನೊಬ್ಬ ಮಂಜು ಅವರ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ.
ಕೂಡಲೇ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.ಈ ಹಲ್ಲೆಯು ವೈಯಕ್ತಿಕ ಕಾರಣಗಳಿಂದ ನಡೆದಿದ್ದು, ಯಾವುದೇ ಕೋಮು ಹಿನ್ನೆಲೆಯನ್ನು ಹೊಂದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇದೊಂದು ವೈಯಕ್ತಿಕ ಕಾರಣಕ್ಕಾಗಿ ನಡೆದ ಘಟನೆಯಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ವದಂತಿಗಳನ್ನು ನಂಬಬಾರದು ಹಾಗೂ ಹರಡಬಾರದು. ಗಾಯಾಳು ಮಂಜು ಕೋಳ ಅವರ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ,” ಎಂದು ತಿಳಿಸಿದ್ದಾರೆ.
• ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗೆ ಶಿಕ್ಷೆ
ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದುದರ ಹಿನ್ನೆಲೆಯಲ್ಲಿ , ಯುವಕನಿಗೆ ಶಿಕ್ಷೆ ನೀಡಿರುವ ಘಟನೆ ನಡೆದಿದೆ. ರಾಘವನ್ ಅಲಿಯಾಸ್ ಕೋಳಿಕಿರಣ್ ಆರೋಪಿಯಾಗಿದ್ದು, ಈತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರ ವಶದಲ್ಲಿದ್ದ ಆತ ಪರಾರಿಯಾಗಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಅವರು ತನಿಖೆಯನ್ನು ನಡೆಸಿ, ಆತನನ್ನು ಬಂಧಿಸಲು ಬೇಕಾದ ಅಗತ್ಯ ಸಾಕ್ಷಿಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ, ಕೋಳಿಕಿರಣ್ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯ ಸಲ್ಲಿಸಿದ್ದರು ಎನ್ನುವ ಮಾಹಿತಿ ಲಭಿಸಿದೆ.
ಈ ಹಿನ್ನೆಲೆಯಲ್ಲಿ ಸುಳ್ಯದ ಎಸ್ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಿರುವ ಕಾರಣ ನ್ಯಾಯಾಧೀಶರಾದ ಬಿ.ಮೋಹನ್ ಬಾಬು ಅವರು ಆರೋಪಿಗೆ ಬಿಎನ್ ಎಸ್ ಕಲಂ 121 (1)ರ ಅಡಿಯಲ್ಲಿ ಮೂರು ವರ್ಷಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ , 10.000ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ ಆರು ತಿಂಗಳುಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಹಾಗೂ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಲು ನಡೆಸಿರುವ ಹಲ್ಲೆಗಾಗಿ ಕಲಂ 132ರ ಅನ್ವಯ ಒಂದು ವರ್ಷ ಕಾಲ ಸಾದಾ ಕಾರಾಗೃಹ ಶಿಕ್ಷೆ, 10.000ರೂಪಾಯಿ ದಂಡ ಹಾಗೂ ದಂಡ ತಪ್ಪಿದಲ್ಲಿ ಮೂರು ತಿಂಗಳುಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ಪೊಲೀಸರು ಕಾನೂನು ಬದ್ಧವಾಗಿ ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ತಡೆಯನ್ನುಂಟು ಮಾಡಿ ಪರಾರಿಯಾದ ಹಿನ್ನೆಲೆಯಲ್ಲಿ ಕಲಂ 262ರ ಅನ್ವಯ ಒಂದು ವರ್ಷ ಕಾಲ ಸಾದಾ ಕಾರಾಗೃಹ ಶಿಕ್ಷೆ, 10.000 ರೂಪಾಯಿ ದಂಡ ಹಾಗೂ ದಂಡ ಪಾವತಿಸಲು ತಪ್ಪಿದ್ದಲ್ಲಿ ಮೂರು ತಿಂಗಳುಗಳ ಕಾಲ ಸಾದಾ ಕಾರಾಗೃಹ ಶಿಕ್ಷೆಯನ್ನು ವಿಧಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.








