ಕರಾವಳಿ ಟಾಪ್ ನ್ಯೂಸ್
• ಬೆಳ್ತಂಗಡಿ: ಗೋಹತ್ಯೆ ಪ್ರಕರಣ; ಆರೋಪಿ ಮನೆ ಜಪ್ತಿ
• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ
• ಉಡುಪಿ: ರ್ಕಾರಿ ಇಲಾಖೆಗಳ ಮೇಲೆ ಲೋಕಾಯುಕ್ತ ದಾಳಿ
• ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮನೆಯನ್ನು ಜಪ್ತಿ ಮಾಡಿರುವ ಘಟನೆ ಬಾರ್ಯ ಗ್ರಾಮದ ಹೊಸವಕ್ಲು ಎನ್ನುವಲ್ಲಿ ನಡೆದಿದೆ. ಆರೋಪಿಯಾದ ಅಬ್ದುಲ್ ರಹಿಮಾನ್ ಮನೆಯ ಅಂಗಳದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಗೋಹತ್ಯೆ ಮಾಡಿ, ಮಾಂಸವನ್ನು ಸಿದ್ಧಪಡಿಸುತ್ತಿರುವುದು ಕಂಡುಬಂದಿದೆ.
ಇದರ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಸುತೇಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸರು ಬರುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮನೆಯ ಸುತ್ತಮುತ್ತಲು ಪರಿಶೀಲನೆ ನಡೆಸಿದಾಗ, ಗೋಮಾಂಸವನ್ನು ಪ್ಯಾಕೆಟ್ ಮಾಡಲಾಗಿದ್ದು, ಸಮೀಪದಲ್ಲಿದ್ದ ಆಟೋದಲ್ಲಿ ಕೂಡ ಗೋಮಾಂಸ ಪತ್ತೆಯಾಗಿದೆ. ಎರಡು ಸೇರಿ ಒಟ್ಟು 56 ಕೆಜಿಯಷ್ಟು ಗೋಮಾಂಸವಿತ್ತು ಎನ್ನುವ ಮಾಹಿತಿ ಲಭಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ಗೋಮಾಂಸ, ತೂಕದ ಯಂತ್ರ, ಆಟೋ, ಮೊಬೈಲ್ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
• ಮೂಡಬಿದರೆ: ಬೆಳಗಾವಿ ವ್ಯಕ್ತಿ ಮೂಡುಬಿದರೆಯಲ್ಲಿ ಕಾಣೆ
ಮೂಡಬಿದರೆ: ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಮೂಡಬಿದರೆಯಲ್ಲಿ ಕಾಣೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ವ್ಯಕ್ತಿಯನ್ನು ರಾಯಭಾಗ ತಾಲ್ಲೂಕಿನ ಮುಗಲ್ಕೋಡು ಗ್ರಾಮದ ಸಿದ್ಧಪ್ಪ ಮಾನಶೆಟ್ಟಿ ಎಂದು ಹೇಳಲಾಗಿದೆ. ಫೆಬ್ರವರಿ 21ರಂದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ತನ್ನ ಮಕ್ಕಳಿಗೆ ಪರೀಕ್ಷೆ ಬರೆಸಲು ಕರೆದುಕೊಂಡು ಬಂದಿದ್ದ ಸಿದ್ಧಪ್ಪ,ಪರೀಕ್ಷೆ ಮುಗಿಯುತ್ತಿದ್ದಂತೆ ಮಕ್ಕಳನ್ನು ಬಸ್ ಹತ್ತಿಸಿ ಊರಿಗೆ ಕಳುಹಿಸಿಕೊಟ್ಟು, ತನಗೆ ಸ್ವಲ್ಪ ಕೆಲಸ ಇರುವುದಾಗಿ ಮೂಡಬಿದರೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.
ಇಷ್ಟು ದಿನಗಳು ಕಳೆದರೂ ಸಿದ್ಧಪ್ಪ ಮನೆಗೆ ಮರಳಲಿಲ್ಲ. ಮನೆಯವರು ಕರೆ ಮಾಡಿದರೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎನ್ನುವ ಮಾಹಿತಿ ಲಭಿಸಿದೆ. ಎಲ್ಲೆಡೆ ಹುಡುಕಾಡಿದರು ಸಿದ್ಧಪ್ಪ ಅವರು ಸುಳಿವು ಸಿಗದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಾದ ಮಲ್ಲಪ್ಪ ಎನ್ನುವವರು ಮೂಡಬಿದರೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಉಡುಪಿ: ಸರ್ಕಾರಿ ಇಲಾಖೆಗಳ ಮೇಲೆ ಉಪಲೋಕಾಯುಕ್ತ ದಾಳಿ
ಉಡುಪಿ: ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ತಾಲ್ಲೂಕು ಕಛೇರಿಗೆ ದಿಡೀರ್ ಭೇಟಿ ನೀಡಿದ ಲೋಕಾಯುಕ್ತರು ಅಧಿಕಾರಿಗಳನ್ನು ಬೆಚ್ಚಿಬಿಳಿಸಿದ್ದಾರೆ. ಒಂದೆಡೆ ಜೀನ್ಸ್ ಪ್ಯಾಂಟ್ ಧರಿಸಿ ಕಾರ್ಯನಿರ್ವಹಿಸಲು ಬಂದ ಸರ್ಕಾರಿ ಅಧಿಕಾರಿ, ಇನ್ನೊಂದೆಡೆ ಚಿಟ್ ಫಂಡ್ ಗೆ ಸಂಬಂಧಿಸಿದ ದಾಖಲೆಗಳನ್ನು ಹಿಡಿದುಕೊಂಡು ಬಂದಿದ್ದ ಸರ್ಕಾರಿ ನೌಕರ, ಮತ್ತೊಂದೆಡೆ ತನ್ನ ವೈಯಕ್ತಿಕ ಬ್ಯಾಗಿನಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಂಡಿದ್ದ ಸರ್ಕಾರಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸರ್ಕಾರಿ ದಾಖಲೆಗಳನ್ನು ವೈಯಕ್ತಿಕ ಬ್ಯಾಗಿನಲ್ಲಿ ಇರಿಸಿಕೊಂಡು ಬಂದಿದ್ದ ಸರ್ಕಾರಿ ನೌಕರನನ್ನು ಅಮಾನತುಗೊಳಿಸಿ, ಆತನ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಉಡುಪಿ ನಗರ ಪೊಲೀಸರಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಮಲ್ಪೆಗೆ ಭೇಟಿ ನೀಡಿದ ಉಪಲೋಕಾಯುಕ್ತರು ಮಲಿನವಾದ ನೀರು ಸಮುದ್ರವನ್ನು ಸೇರುತ್ತಿರುವ, ಉಡುಪಿಯ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಹೊಟೇಲ್ ಒಂದರಲ್ಲಿ ತಿಂಡಿಗಳ ದರವನ್ನು ನಮೂದಿಸದ ಹೊಟೇಲ್ ಮಾಲೀಕನನ್ನು ತರಾಟೆಗೆ ತೆಗೆದುಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.
ಉಡುಪಿ: ಮಾರ್ಚ್ 4ರಂದು ಕಂಬಳದ ಶಂಕುಸ್ಥಾಪನೆ
ಉಡುಪಿ: 80 ಬಡಗುಬೆಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆಯ ವತಿಯಿಂದ ನಡೆಸಲಾಗುವ ಉಡುಪಿ ಕಂಬಳದ ಶಂಕುಸ್ಥಾಪನೆಯನ್ನು, ಮಾರ್ಚ್ ನಾಲ್ಕರಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.








