ಸಿಎಂ ರೇಸ್ ಅಲ್ಲಿ ಕಿಮ್ಮನೆ ಹೆಸರು!
– ಸಿದ್ದು v/s ಎಚ್ಡಿಕೆ ವಾಕ್ ಸಮರ ವೇಳೆ ಪ್ರಸ್ತಾಪ
– ಕಿಮ್ಮನೆ ರತ್ನಾಕರ್ ಹೆಸರು ಕೂಡ ಪ್ರಸ್ತಾಪಿಸಿದ ಸಿದ್ದರಾಮಯ್ಯ
ಶಿವಮೊಗ್ಗ: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಮಾಜಿ ಸಚಿವರು, ಮಾಜಿ ಶಾಸಕರು ಆದ ಕಿಮ್ಮನೆ ರತ್ನಾಕರ್ ಅವರ ಹೆಸರು ಇದೀಗ ಸಿಎಂ ರೇಸ್ ಅಲ್ಲಿ ಬಂದಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಸ್ತಾಪ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವದ ಬದಲಾವಣೆಯ ಚರ್ಚೆ ಬಿರುಸಾಗಿ ಈಗದು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ವಾದವಾಗಿ ಬದಲಾಗಿದೆ.
ಸಿದ್ದರಾಮಯ್ಯ ರಾಜ್ಯದಲ್ಲಿ ಪರ್ಯಾಯ ಒಕ್ಕಲಿಗ ನಾಯಕತ್ವ ಬೆಳೆಯಲು ತೊಡರುಗಾಲು ಹಾಕಿದ್ದೇ ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದು ಮಾತಿನ ಬಾಣ ಹೂಡಿದರೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಬಹುತೇಕರು ಜೆಡಿಎಸ್ ಪಡಸಾಲೆಯಿಂದ ಹೊರಬಂದವರೇ ಆಗಿದ್ದಾರೆ. ಅಂದಮೇಲೆ ದೇವೇಗೌಡರು ಯಾರನ್ನು ಬೆಳೆಸಿಲ್ಲ ಎಂದು ಹೇಳುವುದು ಯಾವ ಅರ್ಥದಲ್ಲಿ ಎಂದು ಪ್ರಶ್ನಿಸಿದ್ದಾರೆ.
ಅದರೆ ಇಂದಿಗೂ ಚಾಲ್ತಿಯಲ್ಲಿರುವ ಮಾತೆಂದರೆ ಒಕ್ಕಲಿಗ ಸಮುದಾಯದ ನಾಯಕತ್ವದ ಪ್ರಶ್ನೆ ಬಂದಾಗ ಈಗಲೂ ಬಹುಮಂದಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನೇ ಒಪ್ಪುತ್ತಾರೆ ಎನ್ನುವುದು. ಕಾಂಗ್ರೆಸ್ನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದ ಮೇಲಿನ ದೇವೇಗೌಡ ಕುಟುಂಬದ ಹಿಡಿತವನ್ನು ಕಡಿಮೆ ಮಾಡಿ ಆ ಸ್ಥಾನಕ್ಕೆ ಏರಲು ಬೇಕಾದಷ್ಟು ತಯಾರಿ ಮಾಡಿಕೊಂಡಿದ್ದರಾದರೂ ರಾಜಕಾರಣದ ಚಿತ್ರ ವಿಚಿತ್ರ ವ್ಯೂಹಗಳು ಅವರ ಆಸೆಯನ್ನು ಇನ್ನೂ ಈಡೇರಲು ಬಿಟ್ಟಿಲ್ಲ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥ ನಾಯಕತ್ವ ನೀಡಲು ಸಾಧ್ಯವಿರುವವರು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಕಿಮ್ಮನೆ ರತ್ನಾಕರ್, ಎಂ.ಕೃಷ್ಣಪ್ಪ, ಕೃಷ್ಣೇಬೈರೇಗೌಡ, ಪಿರಿಯಾಪಟ್ಟಣ ವೆಂಕಟೇಶ್ ಹೀಗೆ ಒಕ್ಕಲಿಗ ನಾಯಕರ ದೊಡ್ಡ ಪಟ್ಟಿಯೇ ಇದೆ. ಆದರೆ ಜೆಡಿಎಸ್ನಲ್ಲಿ ದೇವೇಗೌಡರ ಕುಟುಂಬ ಹೊರತುಪಡಿಸಿ ಯಾರಿದ್ದಾರೆ. ಒಕ್ಕಲಿಗ ಸಮಾಜದಿಂದ ಮುಂದೆ ಯಾರಾದರೂ ಮುಖ್ಯಮಂತ್ರಿ ಆದಲ್ಲಿ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಲಿದೆ ಎಂದು ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಎಬ್ಬಿಸಿದೆ.
ರಾಜ್ಯ ಮಟ್ಟದಲ್ಲಿ ತೀರ್ಥಹಳ್ಳಿ ರಾಜಕಾರಣಿಗಳ ಸದ್ದು!
ಸಿದ್ದರಾಮಯ್ಯ ಉಲ್ಲೇಖಿಸಿರುವ ಹೆಸರುಗಳ ಪಟ್ಟಿಯಲ್ಲಿ ಮಾಜಿ ಶಿಕ್ಷಣ ಸಚಿವ ತೀರ್ಥಹಳ್ಳಿಯ ಕಿಮ್ಮನೆ ಹೆಸರು ಇದೀಗ ಸಂಚಲನ ಮೂಡಿಸಿದೆ. ತೀರ್ಥಹಳ್ಳಿ ರಾಜ್ಯ, ದೇಶಕ್ಕೆ ಅನೇಕ ಮುಂಚೂಣಿ ರಾಜಕಾರಣಿಗಳನ್ನು ಕೊಟ್ಟಿದೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದ ಕಡಿದಾಳು ಮಂಜಪ್ಪ ಅವಿಭಜಿತ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿ ಮುಖ್ಯಮಂತ್ರಿಯಾಗಿದ್ದರು (ಆಗ ತೀರ್ಥಹಳ್ಳಿ ಶೃಂಗೇರಿ ಸೇರಿ ಒಂದೇ ಕ್ಷೇತ್ರವಿತ್ತು).
ದೇಶ ಕಂಡ ಮಹಾನ್ ಸಮಾಜವಾದಿಗಳಲ್ಲಿ ಒಬ್ಬರಾಗಿದ್ದ ಶಾಂತವೇರಿ ಗೋಪಾಲಗೌಡರು ಇಂದಿಗೂ ಈ ರಾಜ್ಯಕಂಡ ಅತ್ಯಂತ ಶ್ರೇಷ್ಠ ವಿರೋಧ ಪಕ್ಷದ ನಾಯಕರಾಗಿದ್ದವರು ಮತ್ತು ಒಂದು ಹಂತದಲ್ಲಿ ಸರ್ಕಾರ ರಚನೆಗೆ ನೀಡಿದ ಬೆಂಬಲವನ್ನು ಹಿಂಪಡೆದು ಸಮಾಜವಾದಿ ಪಕ್ಷಕ್ಕೆ ನೀಡುವ ಭರವಸೆ ಬಂದಾಗ ಅದನ್ನವರು ಅನೈತಿಕ ಎಂದು ತಿರಸ್ಕರಿಸಿ ಮುಖ್ಯಮಂತ್ರಿ ಆಗುವ ಅವಕಾಶ ತ್ಯಜಿಸಿ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದರು.
ಮುಂದೆ ಕೋಣಂದೂರು ಲಿಂಗಪ್ಪ ತೀರ್ಥಹಳ್ಳಿಯಲ್ಲಿ ಬೆರಳೆಣಿಕೆ ಸಮುದಾಯದ ಹಿನ್ನಲೆಯಿಂದ ಬಂದು ಕ್ಷೇತ್ರದ ಏಕೈಕ ಒಕ್ಕಲಿಗೇತರ ಶಾಸಕರಾಗಿ ವಿಕ್ರಮ ಸಾಧಿಸಿದವರು. ಕಡಿದಾಳು ದಿವಾಕರ್ 26ನೇ ಹರೆಯದಲ್ಲಿಯೇ ಶಾಸಕರಾಗಿ ಇಡೀ ವಿಧಾನಸಭೆಯ ಕೇಂದ್ರ ಬಿಂದುವಾಗಿದ್ದವರು. ಪಟಮಕ್ಕಿ ರತ್ನಾಕರ್ ರಾಜ್ಯಕಂಡ ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿದ್ದವರು. ಡಿ.ಬಿ.ಚಂದ್ರೇಗೌಡ ಸ್ವೀಕರ್ ಆಗಿ ಕ್ಷೇತ್ರಕ್ಕೆ ಗೌರವ ತಂದವರು. ಸಹಕಾರ ಕ್ಷೇತ್ರದಲ್ಲಿ ರಾಜ್ಯದಲ್ಲಿ ಮಂಜುನಾಥ ಗೌಡ ಮುಂಚೂಣಿಯಲ್ಲಿದ್ದಾರೆ. ರಾಜಕೀಯ ಮಾತ್ರವಲ್ಲ, ಸಹಕಾರ ಕ್ಷೇತ್ರದಲ್ಲಿ ತೀರ್ಥಹಳ್ಳಿ ಮುಂಚೂಣಿಯಲ್ಲಿದೆ.
ಮತ್ತೊರ್ವ ಸಿಎಂ ಸ್ಥಾನಕ್ಕೆ ಪಕ್ಕಾ ನಾಯಕ ಆರಗ ಜ್ಞಾನೇಂದ್ರ
ಬಡ ಕುಟುಂಬದಿಂದ ಬಂದ ಆರಗ ಜ್ಞಾನೇಂದ್ರ ಪ್ರಖರ ಸಮಾಜವಾದ, ಕಮುನಿಸ್ಟ್, ಕಾಂಗ್ರೆಸ್ ಚಿಂತನೆಯ ನೆಲದಲ್ಲಿ ಇಡೀ ರಾಜ್ಯವೇ ದಂಗಾಗುವಂತೆ ಬಿಜೆಪಿಯನ್ನು ಗೆಲ್ಲಿಸಿದ ಹಾಗೂ ಪ್ರತಿಭಾವಂತ ಚರ್ಚಾಪಟು. ಹಂಗಾಮಿ ಸ್ಪೀಕರ್ ಆಗಿ, ಗೃಹಮಂತ್ರಿಯಾಗಿ ಅತ್ಯುನ್ನತ ಗೌರವಕ್ಕೆ ಪಾತ್ರರಾದವರು. ಆರಗ ಜ್ಞಾನೇಂದ್ರ ಇದೀಗ ರಾಜ್ಯ ಬಿಜೆಪಿ ನಾಯಕರಲ್ಲಿ ಮುಂಚೂಣಿ ಹೆಸರು.
ಪ್ರಾಮಾಣಿಕ ರಾಜಕಾರಣಿ ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾಗಿ ರಾಜ್ಯದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಉತ್ತಮ ಕ್ರಮಗಳನ್ನು ಕೈಗೊಂಡಿದ್ದಲ್ಲದೇ ಹಲವು ಕ್ರಾಂತಿಕಾರಕ ಬದಲಾವಣೆಯನ್ನು ತಂದರು. ಸದ್ಯ ಕಿಮ್ಮನೆ ರತ್ನಾಕರ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿಯೂ ಯಾವ ಅಧಿಕಾರದಲ್ಲೂ ಇಲ್ಲ. ಮನಸ್ಸು ಮಾಡಿದ್ದರೆ ನಿಗಮ ಮಂಡಳಿ ಅಧ್ಯಕ್ಷರಾಗಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಮಿಂಚಬಹುದಿತ್ತು. ಗೂಟದ ಕಾರಿನಲ್ಲಿ ಓಡಾಡಬಹುದಿತ್ತು.
ಆದರೆ ಎಲ್ಲವನ್ನು ತಿರಸ್ಕರಿಸಿ ಈಗಲೂ ತೀರ್ಥಹಳ್ಳಿ ಬಿಜೆಪಿಗೆ ಸಮರ್ಥ ಎದುರಾಳಿಯಾಗಿಯೇ ಉಳಿದುಕೊಂಡಿದ್ದಾರೆ. ಹಾಗೆ ಅಧಿಕಾರವಿಲ್ಲದಾಗಲೂ ರಾಜಕೀಯವಾಗಿ ಅತ್ಯಂತ ಬಿಕ್ಕಟ್ಟಿನ ಸಮಯದಲ್ಲಿ ಸಾವಿರಾರು ಕೋಟಿಗಳಿಗೆ ತೂಗುವ ಶ್ರೀಮಂತರಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರ ಹೇಳಿಕೆಯಲ್ಲಿ ಅವರ ಹೆಸರು ಸಂಭವನೀಯ ಒಕ್ಕಲಿಗ ನಾಯಕತ್ವ ಮತ್ತು ಮುಖ್ಯಮಂತ್ರಿ ಪಟ್ಟಕ್ಕೆ ಉಲ್ಲೇಖಗೊಂಡಿರುವುದು ರಾಜ್ಯದಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.








