ದೀಪಾವಳಿ.. ದೀಪಾವಳಿ: ಎಲ್ಲೆಡೆ ಸಂಭ್ರಮ..!
– ಬೆಳಕಿನ ಹಬ್ಬದ ಸಂಭ್ರಮ: ಮನೆ ಮನೆಯಲ್ಲೂ ಬೆಳಕಿನೋತ್ಸವ
– ಪಟಾಕಿ ಹೊಡೆವಾಗ ಹುಷಾರು.. ಅಂಟಿಗೆ ಪಿಂಟಿಗೆ ಸುಂದರ
– ಉದ್ಯಮ ಕ್ಷೇತ್ರಕ್ಕೆ ದೀಪಾವಳಿಯಿಂದ ಭರವಸೆ ಬೆಳಕು?!
ವಿಶೇಷ ವರದಿ: ಪ್ರಾಪ್ತಿ ಸಾಗರ
ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ, ಸುಜ್ಞಾನವೆಂಬ ಬೆಳಕು ಚೆಲ್ಲುವ ಹಬ್ಬ, ರಾವಣನ ಸೋಲಿಸಿ ರಾಮ ಅಯೋಧ್ಯೆಗೆ ಬಂದ ದಿನ ದೀಪಾವಳಿ. ಈ ಹಬ್ಬ ಹಿಂದೂಗಳ ಪಾಲಿನ ಅತೀ ದೊಡ್ಡ ಹಬ್ಬ. ಇದೀಗ ಆ ಹಬ್ಬದ ಸಂಭ್ರಮದಲ್ಲಿ ಇಡೀ ದೇಶವಿದೆ. ಪ್ರತಿ ಮನೆ ಮನೆಯಲ್ಲೂ ಬೆಳಕಿನೋತ್ಸವ ಆಚರಣೆ ಆಗಲಿದೆ.
5 ದಿನಗಳ ಕಾಲ ದೀಪಾವಳಿ ಹಬ್ಬವನ್ನು ವಿವಿಧ ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಕುಟುಂಬದ ಎಲ್ಲಾ ಸದಸ್ಯರು ಹೊಸ ಬಟ್ಟೆ ಧರಿಸಿ, ಹಬ್ಬ ಆಚರಣೆ ಮಾಡಿ ಬೆಳಕಿನ ದೀಪಗಳನ್ನು ಹಚ್ಚುವ ಈ ಹಬ್ಬ ಪ್ರತಿ ಮನೆಯಲ್ಲೂ ಸಂತಸದ ದೀಪ ಬೆಳಗುತ್ತದೆ.
ಪಟಾಕಿ ಹೊಡೆಯುವಾಗ ಮನೆ ಮಂದಿ ಮಕ್ಕಳೆಲ್ಲ ಜಾಗ್ರತೆ ವಹಿಸಬೇಕಿದೆ. ಅನಾಹುತ ಆಗುವುದನ್ನು ತಡೆಯಬೇಕಿದೆ.
ರಾವಣನ ಸೋಲಿಸಿ ರಾಮ ಅಯೋಧ್ಯೆಗೆ ಬಂದ ದಿನ!
14 ವರ್ಷಗಳ ನಂತರ ವನವಾಸ ಮುಗಿದು ಮತ್ತು ರಾಕ್ಷಸ ರಾಜ ರಾವಣನನ್ನು ಸೋಲಿಸಿದ ನಂತರ ರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ. ಅನೇಕ ಅಡೆತಡೆಗಳ ನಂತರ ಸೀತೆಯನ್ನು ರಕ್ಷಿಸಿದ ರಾಮನ ಆಗಮನ ವಿಜಯೋತ್ಸವವನ್ನು ಈ ದಿನ ಆಚರಿಸಲಾಗುತ್ತದೆ. ರಾಮ ಬಂದ ಖುಷಿಗೆ ಅಯೋಧ್ಯೆಯಲ್ಲಿ ಅನೇಕ ದೀಪಗಳನ್ನು ಹಚ್ಚಿ ಸಂಭ್ರಮಿಸಲಾಗಿತ್ತು. ಹಾಗಾಗಿ ಈ ದಿನವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ.
ದೀಪಾವಳಿ ಯಾವತ್ತು ಏನೇನು?
ಅ.19ರಂದು ದೀಪಾವಳಿ ಆರಂಭವಾಗುವ ಹಿಂದಿನ ದಿನ. ಈ ದಿನ ಬೂರೇ ಹಬ್ಬದ ಭಾಗವಾಗಿ ಯುವಕರು, ಮಕ್ಕಳೆಲ್ಲರೂ ಸೇರಿ ಊರಿನ ಯಾರ ಮನೆಯಲ್ಲಾದರೂ ಏನನ್ನಾದರೂ ಕದ್ದು ಬಚ್ಚಿಡುವ ಪದ್ಧತಿಯಿದೆ. ಗೆಳೆಯರ ಬಳಗದಲ್ಲಿಯೇ ಅವರ ಜೊತೆಗೂಡಿ ಅವರಿಗೆ ಗೊತ್ತಿಲ್ಲದಂತೆ ತೆಂಗಿನಕಾಯಿ, ಕೋಳಿ, ಮನೆಯ ಗೇಟ್, ವಾಹನದ ಚಕ್ರ ಕದಿಯುವ ಸಂಭ್ರಮವೇ ಜೋರಾಗಿರುತ್ತದೆ.
ಅ. 20 ಎರಡನೇ ದಿನ ದೀಪಾವಳಿಯ ಆರಂಭದ ದಿನ. ಇವತ್ತು ಸ್ನಾನ. ನರಕ ಚತುರ್ದಶಿಯಂದು ಮುಂಜಾನೆ ಎದ್ದು ಅರಿಶಿಣ ಮತ್ತು
ಕುಂಕುಮವನ್ನು ಹಚ್ಚಿ, ಬಾವಿಗೆ ಪೂಜೆಯನ್ನ ಸಲ್ಲಿಸಿ ಪಟಾಕಿ ಸಿಡಿಸಿ ಬೂರೇ ನೀರು ತುಂಬುತ್ತಾರೆ. ಕಹಿ ಹಿಂಡಲೇ ಕಾಯಿಯನ್ನು ಕಾಡಿನಿಂದ ತಂದು ಬಚ್ಚಲ ಮನೆಯನ್ನು ಶುಚಿ ಮಾಡಿ, ಹಂಡೆಯನ್ನು ತೊಳೆದು, ಹಂಡೆಗೆ ನೀರು ತುಂಬಿಸಿ, ಹಂಡೆಯ ಸುತ್ತಲೂ ಕೆಮ್ಮಣ್ಣು ಮತ್ತು ಸುಣ್ಣವನ್ನು ಬಳಿದು ಹಿಂಡಲೆಕಾಯಿಯ ಬಳ್ಳಿಯನ್ನು ಕಟ್ಟುತ್ತಾರೆ. ತದ ನಂತರದಲ್ಲಿ ಬೂರೇ ನೀರು ತುಂಬಿಸಿ, ಹಂಡೆಗೆ ಪೂಜೆ ಮಾಡಿ, ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಸಂಪ್ರದಾಯ ಮಲೆನಾಡು ಸೇರಿ ಅನೇಕ ಕಡೆ ಇದೆ.
ದೀಪಾವಳಿ ಸಿದ್ಧತೆಯ ಸಡಗರ
ದೀಪಾವಳಿಯ ಎರಡನೆಯ ಅ. 21 ದಿನದಂದು ಗೋವುಗಳಿಗೆ ಮೈ ತೊಳೆಯುವ ಹಬ್ಬ ಎಂದು ಆಚರಿಸಲಾಗುತ್ತದೆ. ಗೋಪೂಜೆಗೆ ಸಿದ್ಧತೆಯನ್ನು ಮಾಡಿಕೊಂಡು ದನಗಳ ಮೈ ಸ್ವಚ್ಛಗೊಳಿಸಿ ಕಾಡಿನಿಂದ ಉಗ್ಗಣೆಕಾಯಿಯನ್ನೂ ತಂದು ಸುರಿದು ಮಾಲೆಯನ್ನು ಮಾಡುವ ಪ್ರತೀತಿ ಇದೆ. ಜೊತೆಗೆ ತೋಟದಲ್ಲಿ ಬೆಳೆದ ಚೆಂಡು ಹೂವುಗಳನ್ನ ತಂದು ಹಾರವನ್ನಾಗಿ ಮಾಡಿ. ಗೋಪೂಜೆಗೆ ತಯಾರಿಯನ್ನು ನಡೆಸುವ ದಿನವೇ ದೀಪಾವಳಿಯ ಎರಡನೆಯ ದಿನದ ಹಬ್ಬದ ವಿಶೇಷತೆಯಾಗಿದೆ.
ಗೋ ಶೃಂಗಾರಕ್ಕೆ ಮೀಸಲು ಗೋ ಪೂಜೆ ದಿನ, ಲಕ್ಷ್ಮಿ ಪೂಜೆ
ಅ. 22ರ ಮೂರನೆಯ ದಿನ ಗೋಪೂಜೆ ಆಚರಣೆಯಲ್ಲಿ ಗೋವುಗಳ ಕೊರಳಿಗೆ ಅಡಕೆ ಮಾಲೆ, ಪಚ್ಚೆ ತೆನೆ, ಚಪ್ಪೆ ರೊಟ್ಟಿ ಮುಂತಾದವುಗಳನ್ನು ಕಟ್ಟಲಾಗುತ್ತದೆ. ಕೋಡುಗಳನ್ನು ಶೃಂಗರಿಸಿ, ದನಗಳ ಮೈಮೇಲೆ ಹುಬ್ಬು ಬರೆದು. ಕೆಮ್ಮಣ್ಣು ಮತ್ತು ಸುಣ್ಣದಿಂದ ಗೋವುಗಳ ಮೈಗೆ ಲೋಟದಿಂದ ಅಚ್ಚು ಬರೆದು ಗೋವುಗಳಿಗೆ ಪೂಜೆಯನ್ನು ಸಲ್ಲಿಸಿ, ಗೋವನ್ನ ಮನೆಯ ಒಳಗೆ ದಾಟಿಸಿ ವಿಶೇಷ ಭಕ್ಷ್ಯಗಳನ್ನು ನೀಡಲಾಗುತ್ತದೆ. ನಂತರ ಪಟಾಕಿ ಸಿಡಿಸಿ ಗೋವುಗಳನ್ನು ಮನೆಯಿಂದ ಬೆರೆಸುವ ಸಂಪ್ರದಾಯವಿದೆ. ಬೇರೆ ಮನೆಯ ಗೋವಿಗೆ ಅಲಂಕರಿಸಿರುವ ಹೂವಿನ ಹಾರವನ್ನು ಕಿತ್ತು ತಮ್ಮ ಮನೆಯ ಬಾಗಿಲಿಗೆ ಸಿಂಗರಿಸುವುದು ಶುಭದ ಸಂಕೇತ ಎಂದು ಕೆಲವೆಡೆ ಈ ರೀತಿಯಲ್ಲಿ ಆಚರಿಸಲಾಗುತ್ತದೆ. ಗೋಪೂಜೆಯ ದಿನದಂದೇ ಸಂಜೆ ಕೆಲವು ಮನೆಗಳಲ್ಲಿ, ಅಂಗಡಿಗಳಲ್ಲಿ ಬುದ್ಧಿವಂತಿಕೆ ಮತ್ತು ಸಂಪತ್ತಿಗಾಗಿ ಲಕ್ಷ್ಮಿ ಪೂಜೆಯನ್ನು ಮಾಡುವ ಪ್ರತೀತಿ ಇದೆ ಕರಿ ಹಬ್ಬ. ಬಲೀಂದ್ರನ ಪೂಜೆ, ಆಯುಧಗಳಿಗೆ ಪೂಜೆ ಮಾಡಲಾಗುತ್ತದೆ. ಎತ್ತಿನ ಗಾಡಿ, ನೇಗಿಲು, ನೊಗ, ಮಚ್ಚು, ಕುಡುಗೋಲು ಮುಂತಾದ ಹತಾರಗಳನ್ನು ಸ್ವಚ್ಛವಾಗಿ ತೊಳೆದು ಆಚ್ಚುಕಟ್ಟಾಗಿ ಜೋಡಿಸಿ ಅರಿಶಿನ-ಕುಂಕುಮ ಹೂ-ಪತ್ರೆಗಳನಿಟ್ಟು ಪೂಜೆ ಮಾಡುತ್ತಾರೆ. ಸಂಜೆ ತೋಟ, ಗದ್ದೆ, ಮನೆಗಳಲ್ಲಿ ದೀಪ ಹಚ್ಚಲಾಗುತ್ತದೆ.
ವರ್ಷ ತೊಡಕು ಹಬ್ಬ: ಹೊಸ ಫಸಲು ತರುವ ಹಬ್ಬ!
ಅ.23 ಕೊನೆಯ ದಿನ ವರ್ಷದ ಹೊಸ ತೊಡಕು ಹಬ್ಬ, ಗದ್ದೆಯಿಂದ ಹೊಸ ಭತ್ತದ ಕದಿರು ತಂದು, ಮನೆಯ ವಿವಿಧ ಜಾಗಗಳಲ್ಲಿಟ್ಟು ಪೂಜಿಸುವ ಸಂಪ್ರದಾಯವಿದೆ ಹಾಗೂ 9 ಭತ್ತದಿಂದ ಅಕ್ಕಿಯನ್ನು ಬಿಡಿಸಿ ಅದರಿಂದ ಪಾಯಸ ಹೀಗೇ ವಿಶೇಷ ತಿನಿಸುಗಳನ್ನು ಮಾಡಿ ಊಟ ಮಾಡುತ್ತಾರೆ.
ದೀಪಾವಳಿಗೆ ಅಂಟಿಗೆ ಪಿಂಟಿಗೆ ವಿಶೇಷ
ದೀಪಾವಳಿ ಹಬ್ಬದ ಕೊನೆಯ ದಿನವಾದ ಐದನೆಯ ದಿನದಂದು ಅಂಟಿಗೆ ಪಿಂಟಿಗೆಯನ್ನೂ ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ವಿಪುಲ ಸಾಹಿತ್ಯ ಭಂಡಾರವಿರುವ ಜನಪದ ಕಲೆಯಾದ ಆಂಟಿಗೆ ಪಿಂಟಿಗೆ ಮಲೆನಾಡು ಭಾಗದ ದೀಪಾವಳಿ ಹಬ್ಬದ ವಿಶೇಷತೆಗಳ ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ಹಳ್ಳಿಯ ಜನರು ತಮ್ಮದೇ ಜನಪದ ಭಾಷೆಯಲ್ಲಿ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ತಾವು ತಂದಿದ್ದ ದೀಪಗಳಿಗೆ ಜ್ಯೋತಿ ಹಚ್ಚಿಕೊಂಡು ಹಾಡು ಹೇಳುತ್ತಾ ಮನೆ ಮನೆಗೆ ತೆರಳುವುದು ಕೆಲವೆಡೆಯಾದರೆ ಮತ್ತೊಂದೆಡೆ ಹೀಗೆ ಹಾಡುವ ಮೂಲಕ ಗದ್ದೆಗೆ ತೆರಳಿ ದೀಪವನ್ನು ಹಚ್ಚುತ್ತಾರೆ. ಆ ದೀಪದ ಬೆಳಕಿನಲ್ಲಿ ಭೂಮಿ ತಾಯಿಯು ದೀಪಾವಳಿಯ 15 ದಿನದ ಮುನ್ನ ಆಚರಿಸುವ ಭೂಮಿ ಹುಣ್ಣಿಮೆಯ ದಿನದಂದು ಬಡಿಸಿರುವ ಸೀಮಂತದ ಊಟವನ್ನು ಸವಿಯುತ್ತಾಳೆ ಎಂಬ ಪ್ರತೀತಿಯಿದೆ.
ಯಶವಂತಪುರ-ತಾಳಗುಪ್ಪ ರೈಲು ಸೇವೆ ವಿಸ್ತರಣೆ
ಯಶವಂತಪುರ-ತಾಳಗುಪ್ಪ ಎಕ್ಸ್ಪ್ರೆಸ್ ವಿಶೇಷ ರೈಲು (ಸಂಖ್ಯೆ 06587) ಅ.17 ಮತ್ತು ಅ.24 ರಂದು ರಾತ್ರಿ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಮುಂಜಾನೆ 4.15ಕ್ಕೆ ತಾಳಗುಪ್ಪ ತಲುಪಲಿದೆ. ಹಿಂತಿರುಗುವ ದಿಕ್ಕಿನಲ್ಲಿ, ತಾಳಗುಪ್ಪ- ಯಶವಂತಪುರ ಎಕ್ಸ್ಪ್ರೆಸ್ ವಿಶೇಷ ರೈಲು ಅ.18 ಮತ್ತು ಅ.25 ರಂದು ತಾಳಗುಪ್ಪದಿಂದ ಬೆಳಗ್ಗೆ 10ಕ್ಕೆ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.
ಬೆಳಕಿನ ಹಬ್ಬಕ್ಕೂ ಈ ಸಲ ಮಳೆ ಅಡ್ಡಿ!?
ಮುಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಕಡಿಮೆಯಾಗಲಿದ್ದು, ಚಳಿಗಾಲ ಶುರುವಾಗುವ ಸಮಯ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಮುಂದಿನ ವಾರದೊಳಗೆ ಇಡೀ ರಾಜ್ಯದಿಂದ ನೈಋತ್ಯ ಮಾನ್ಸೂನ್ ಹಿಂದೆ ಸರಿಯುವ ಸಾಧ್ಯತೆ ಇದೆ . ಹಾಗಾಗಿ ಭಾರೀ ಮಳೆ ಆಗುತ್ತಿದೆ








