ತೀರ್ಥಹಳ್ಳಿಯಲ್ಲಿ ಕೆರೆಬೇಟೆ ತೆರೆಗೆ: ನೀವೂ ಒಮ್ಮೆ ನೋಡಿ!
– ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಸಿನಿಮಾ
– ವೆಂಕಟೇಶ್ವರ ಚಿತ್ರ ಮಂದಿರದಲ್ಲಿ 4 ಪ್ರದರ್ಶನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕೆರೆಭೇಟೆ ಅಬ್ಬರ ಶುರುವಾಗಿದ್ದು, ಮಲೆನಾಡ ಸೊಗಡಿನ ಹಚ್ಚ ಹಸುರು ಪರಿಸರದ, ಭಾಷಾ ಗಮ್ಮತ್ತಿನ ಸಿನಿಮಾ ಈಗ ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ತೆರೆ ಕಂಡಿದೆ. ತೀರ್ಥಹಳ್ಳಿ ಮೂಲದ ನಟ ಗೌರಿ ಶಂಕರ್ ನಾಯಕ ನಟರಾಗಿ ನಟನೆ ಮಾಡಿದ್ದು, ಈ ಚಿತ್ರಕ್ಕೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಮಲೆನಾಡ ಜಾನಪದ ಕಲೆ ಕೆರೆ ಬೇಟೆ!
ಮಲೆನಾಡಿನ ಜನಪದ ಕಲೆ ಕೆರೆ ಬೇಟೆಯ ಹಿನ್ನೆಲೆಯಲ್ಲಿಯೇ ಸಿನಿಮಾ ಮಾಡಿದ್ದಾರೆ. ಅದೇ ಮಲೆನಾಡಿನ ಹುಡುಗ ಗೌರಿ ಶಂಕರ್. ಸಿನಿಮಾ ಕಲಿತು, ಒಂದಷ್ಟು ನಿರ್ದೇಶಕರ ಕಡೆಗೆ ಪಳಗಿದ ರಾಜ್ಗುರು ಕೆರೆಬೇಟೆ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಮಲೆನಾಡ ಭಾಗದ ಕಥೆಯೇ ಕೆರೆಬೇಟೆ. ಯಾರ ಮಾತನ್ನೂ ಕೇಳದ, ಯಾರಿಗೂ ಕ್ಯಾರೇ ಎನ್ನದ ಮನಸ್ಥಿತಿ ಕಥಾನಾಯಕನದ್ದು. ಒಂದು ರೀತಿ ಆತ ಇಡೀ ಊರಿಗೆ ಗುಂಡ್ರಗೋವಿ. ಹೆಸರು ಹುಲಿಮನೆ ನಾಗ (ಗೌರಿಶಂಕರ್). ಮೋಟು ಬೀಡಿ ಸೇದುತ್ತಾ ಕುರುಚುಲು ಗಡ್ಡದ, ಕಪ್ಪು ತುಟಿಯುಳ್ಳ ಉಡಾಳ. ಇಂಥ ಹುಡುಗನ ಎದೆಗೆ ಕಾಲಿಟ್ಟವಳು, ಮೇಲ್ಪಾತಿಯ ಮೀನಾ(ಬಿಂದು). ಒಂದು ಸನ್ನಿವೇಶದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳೆಕೆಯೊಡೆಯುತ್ತದೆ, ಊರ ತುಂಬ ಸುದ್ದಿಯಾಗಿ, ಮನೆ ಮಂದಿಗೂ ವಿಚಾರ ತಿಳಿದು ರಾದ್ಧಾಂತವಾಗುತ್ತದೆ. ಹಾಗಾದರೆ ಇದೊಂದು ಪ್ರೇಮಕಥೆಯೇ? ಇಲ್ಲ ಇಲ್ಲಿಂದಲೇ ಅಸಲಿ ಕಥೆ ಶುರುವಾಗುವುದು!
ಹೆಸರೇ ಹೇಳುವಂತೆ ಕೆರೆಬೇಟೆ ಸಿನಿಮಾ ಒಂದು ಅಪ್ಪಟ ಮಲೆನಾಡ ಸೆರಗಿನಲ್ಲಿ ಹುಟ್ಟಿಕೊಂಡ ಕಥೆ. ಇಲ್ಲಿ ಕಾಣಿಸುವುದೆಲ್ಲ ಹಸಿರು, ಹಚ್ಚ ಹಸಿರು. ಇದರಾಚೆಗೆ ಆ ಭಾಗದ ಆಚಾರ ವಿಚಾರ, ಸಂಪ್ರದಾಯ, ಭಾಷಾ ಸೊಗಡು, ಅಲ್ಲಿನ ಆಹಾರ ಪದ್ಧತಿ, ಕೆರೆಯಲ್ಲಿ ಮೀನು ಹಿಡಿಯುವ ಪದ್ಧತಿಯನ್ನೂ ತೆರೆಮೇಲೆ ತರುವ ಕಾಯಕವನ್ನು ನಿರ್ದೇಶಕರು ಅಚ್ಚುಕಟ್ಟಾಗಿಯೇ ನಿಭಾಯಿಸಿದ್ದಾರೆ. ಜತೆಗೆ ಜಾತಿ ಪದ್ಧತಿ ವಿಷವರ್ತುಲವೂ ಇಲ್ಲಿ ಬಿಡಿಸಿಕೊಳ್ಳಲು ಬಾರದ ಬಳ್ಳಿಯಂತೆ ಹಬ್ಬಿದೆ. ಇಂಥ ಜಾತಿಯ ಸುಳಿಗೆ ಸಿಲುಕುವ ಪ್ರೇಮಿಗಳು ಮುಂದೆ ಏನೆಲ್ಲ ಅನುಭವಿಸುತ್ತಾರೆ ಎಂಬ ಕೌತುಕವನ್ನೂ ಭರ್ತಿಯಾಗಿ ತುಂಬಿಸಿದ್ದಾರೆ ರಾಜ್ಗುರು. ಒಮ್ಮೆ ನೀವೂ ಸಿನಿಮಾ ನೋಡಲೇಬೇಕು.
ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲಿ 4 ಶೋ ಪ್ರದರ್ಶನ ಇದ್ದು ಸಮಸ್ತ ಮಲೆನಾಡಿನ ಸಿನಿ ಪ್ರಿಯರು, ಸರ್ವರೂ ವೀಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ.