Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಕಾರ್ಕಳ: ಕಾರಿನಲ್ಲಿ ಏಕಾಏಕಿ ಧಗಧಗನೇ ಬೆಂಕಿ!
– ಉಡುಪಿ:15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
– ಉಳ್ಳಾಲ: 2.5 ಲಕ್ಷ ಮೌಲ್ಯದ ಚಿನ್ನಾಭರಣ, ವಾಪಾಸು ಮಾಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ!

NAMMUR EXPRESS NEWS
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಘಟನೆ ಕಾರ್ಕಳ ಬೈಪಾಸ್ ಸರ್ಕಲ್ ಬಳಿ ನಡೆದಿದೆ. ಬೈಪಾಸ್ ಸರ್ಕಲ್ ಬಳಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ‌ ಆಗಮಿಸಿ ಬೆಂಕಿ‌ ನಂದಿಸಿದರು. ಅಷ್ಟೊತ್ತಿಗೆ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.

* ಉಡುಪಿ:15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಉಡುಪಿ: ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಡುಪಿಯ 80 ಬಡಗಬೆಟ್ಟು ನಿವಾಸಿ ಮುತ್ತಯ್ಯ ಎಂಬವರ ಪುತ್ರ ಬಾಲಾಜಿ ಎಂ.ನನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಆರೋಪಿಯ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು. ಬೆಂಗಳೂರಿನ ಹರಳೂರು ಬಸ್ ನಿಲ್ದಾಣದ ಬಳಿ ಆರೋಪಿ ಪತ್ತೆಯಾಗಿದ್ದು, ಈ ಮಹತ್ವದ ಮಾಹಿತಿಯ ಮೇರೆಗೆ ಮಣಿಪಾಲ ಪೊಲೀಸ್‌ ಇನ್ಸ್‌ಪೆಕ್ಟರ್‌ ದೇವರಾಜ್ ಟಿ ವಿ ನೇತೃತ್ವದ ಪಿಎಸ್‌ಐಗಳಾದ ಅನಿಲ್ ಕುಮಾ‌ರ್, ಅಕ್ಷಯ ಕುಮಾರಿ, ಹೆಡ್ ಕಾನ್‌ಸ್ಟೆಬಲ್‌ ಥಾಮ್ರನ್ ಮತ್ತು ಪೊಲೀಸ್ ಪೇದೆ ರವಿರಾಜ್ ಅವರ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳ್ಳಾಲ: 2.5 ಲಕ್ಷ ಮೌಲ್ಯದ ಚಿನ್ನಾಭರಣ, ವಾಪಾಸು ಮಾಡಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ!

ಉಳ್ಳಾಲ: ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾಪಾಸು ಅದರ ಮಾಲಕರಿಗೆ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಯುವಕನನ್ನು ಶ್ಲಾಘಿಸಲಾಗಿದೆ. ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ ವಿಜಯಕುಮಾರ್‌ ರೈ ಅವರು ಚಿನ್ನಾಭರಣ ವಾಪಾಸು ನೀಡಿದ್ದು, ಇದರಿಂದ ಚಿನ್ನಾಭರಣ ಪಡೆದ ಮಾಲಕರು ಕಾರ್ಯಕ್ರಮವೊಂದರಲ್ಲಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಸಿಕ್ಕಿದ್ದ ಚಿನ್ನಾಭರಣವನ್ನು ಹಿಡಿದುಕೊಂಡು ತುಂಬಾ ಹೊತ್ತು ಕಾದು ಕುಳಿತಿದ್ದಾಗ, ತನ್ನ ಮಗುವಿನ ಆಭರಣ ಕಳೆದುಕೊಂಡು ಹುಡುಕಾಟ ಮಾಡುತ್ತಾ ಬಂದ ಕಿರಣ್‌ ಶೆಟ್ಟಿ ಅವರು ನಿಶ್ಚಿತಾರ್ಥ ನಡೆದ ಸ್ಥಳಕ್ಕೆ ಬಂದಿದ್ದಾರೆ. ನಿರೀಕ್ಷೆಯಂತೆ ಕಾದು ಕುಳಿತ್ತಿದ್ದ ವಿಜಯ ಕುಮಾ‌ರ್ ರೈ ಅವರು ಕಿರಣ್ ಶೆಟ್ಟಿ ಅವರನ್ನು ವಿಚಾರಿಸಿದ್ದಾರೆ. ಆಗ ಚಿನ್ನ ಕಳೆದುಕೊಂಡ ಕುರಿತು ಹೇಳಿದ್ದಾರೆ, ನಂತರ ಚಿನ್ನದ ಗುರುತನ್ನು ಕೇಳಿ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಅನಂತರ ಕಿರಣ್ ಶೆಟ್ಟಿ ಅವರು ವಿಜಯಕುಮಾ‌ರ್ ರೈ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಹೋಗಿದ್ದಾರೆ. ನಂತರ ತಾನು ಮಾರ್ಗದರ್ಶಕರಾಗಿರುವ ತಲಪಾಡಿ ಸಮೀಪದ ಕಿನ್ಯ ದುರ್ಗಾಪುರದ ಯುವಶಕ್ತಿಯ ಕಾರ್ಯಕ್ರಮದಲ್ಲಿ ವಿಜಯಕುಮಾರ್ ರೈ ಅವರನ್ನು ನಗದು ಸಹಿತ ಸನ್ಮಾನ ಮಾಡಿ ಗೌರವಿಸಿದ್ದಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.