ಕನ್ನಡದಲ್ಲಿ ಯುವ ಸಿನಿಮಾ ಹವಾ!
– ಹೊಡೆದಾಟದಲ್ಲೇ ಕಥೆಯ ಹುಡುಕಾಟ
– ನಟ ಯುವರಾಜ ಕುಮಾರ್ ಡೈಲಾಗ್ ಅಬ್ಬರ
NAMMUR EXPRESS NEWS
ಯುವ ಹೆಸರಿಗೆ ತಕ್ಕಂತೆ ಯೂತ್ಫುಲ್ ಸಿನಿಮಾ. ಕಾಲೇಜು ಕ್ಯಾಂಪಸ್ನಿಂದ ಆರಂಭವಾಗುವ ಕಥೆ ಮುಂದೆ ಜೀವನದ ಪಾಠ ಹೇಳುವಲ್ಲಿಗೆ ಬಂದು ನಿಲ್ಲುತ್ತದೆ. ನಿರ್ದೇಶಕ ಸಂತೋಷ್ ಆನಂದರಾಮ್ ಸಿನಿಮಾ ಎಂದರೆ ಅಲ್ಲೊಂದಿಷ್ಟು ಸೆಂಟಿಮೆಂಟ್ಗೆ ಅವಕಾಶವಿರುತ್ತದೆ, ಜೊತೆಗೆ ಒಂದಷ್ಟು ಮಾಸ್ ಡೈಲಾಗ್ಗಳಿಗೆ ಕೊರತೆ ಇರುವುದಿಲ್ಲ. ಅದರಲ್ಲೂ ತಂದೆ-ಮಗ ಸೆಂಟಿಮೆಂಟ್ ಎಂದರೆ ಅವರಿಗೆ ಅಚ್ಚುಮೆಚ್ಚು. ಅದನ್ನು ಈ ಸಿನಿಮಾದಲ್ಲೂ ಬಳಸಿಕೊಂಡಿದ್ದಾರೆ. ಮಾಸ್ ನಿಂದ ಆರಂಭವಾಗಿ ಕ್ಲಾಸ್ ಆಗಿ ಕೊನೆಗೊಳ್ಳುವ ಒಂದು ಸರಳ ಕಥೆಯನ್ನು ಹೇಳಿದ್ದಾರೆ. ಇಲ್ಲಿ ಯುವ ಜನರ ಕನಸು, ಪ್ರೀತಿ, ಕಿಚ್ಚು, ತಂದೆ-ಮಗ ಬಾಂಧವ್ಯ ಎಲ್ಲವೂ ಇದೆ.
ಸಿನಿಮಾದ ಆರಂಭ ಮಂಗಳೂರಿನ ಕಾಲೇಜಿನಿಂದ ಆಗುತ್ತದೆ. ಇಲ್ಲಿ ಹೊಡೆದಾಟ, ಬಡಿದಾಟಗಳದ್ದೇ ಕಾರುಬಾರು. ಸಣ್ಣಸಣ್ಣ ವಿಷಯಗಳಿಗೂ ನಾಯಕ ಎದುರಾಳಿಗಳ ರಕ್ತಚಿಮ್ಮುವಂತೆ ಹೊಡೆಯುತ್ತಾನೆ. ಕಾಲೇಜು ಕಿರಿಕ್ಗಳು ಇಷ್ಟೊಂದು ರಕ್ತಪಾತಕ್ಕೆ ಕಾರಣವಾಗುತ್ತಾ ಎಂಬ ಪ್ರಶ್ನೆ ಬಂದರೂ ಬರಬಹುದು. ಆದರೆ, ಇದು ಕಮರ್ಷಿಯಲ್ ಸಿನಿಮಾ, ನೋ ಲಾಜಿಕ್, ಓನ್ಸಿ ಮ್ಯಾಜಿಕ್.
ಇನ್ನು, ಸಿನಿಮಾದ ಮೂಲಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿ ನಾಯಕನಲ್ಲದ ಬದಲಾವಣೆ, ಆತ ಎದುರಿಸುವ ಸಂದಿಗ್ಧತೆ, ಆತನ ಕನಸು, ಕುಸ್ತಿ ಎಲ್ಲವೂ ಬಂದು ಹೋಗುತ್ತದೆ. ಈ ಅವಧಿಯಲ್ಲಿ ನಿರ್ದೇಶಕರು ಒಂದಷ್ಟು ದೃಶ್ಯಗಳನ್ನು ಪಾಸಿಂಗ್ ಶಾಟ್ ನಲ್ಲೇ ಮುಗಿಸಿದ್ದಾರೆ. ಆದರೆ, ಇಲ್ಲೂ ಸೆಂಟಿಮೆಂಟ್ ದೃಶ್ಯಗಳಿಗೆ ಕೊಡಬೇಕಾದ ಮಹತ್ವ ಕೊಟ್ಟಿದ್ದಾರೆ. ಜೊತೆಗೆ ಕ್ಲಾಸ್ ಆಡಿಯನ್ಸ್ಗೆ ಇಷ್ಟವಾಗುವ ಹಲವು ದೃಶ್ಯಗಳು ಇಲ್ಲಿವೆ. ಮಾಸ್-ಕ್ಲಾಸ್ ಪ್ಯಾಕೇಜ್ ಸಿನಿಮಾವಾಗಿ ಯುವ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಮೊದಲ ಚಿತ್ರದಲ್ಲಿ ಮಾಸ್ ಎಂಟ್ರಿ!
ನಾಯಕ ನಟ ಯುವ ಮೊದಲ ಚಿತ್ರದಲ್ಲೇ ಮಾಸ್ ಆಗಿ ಎಂಟ್ರಿಕೊಟ್ಟಿದ್ದಾರೆ. ಚಿತ್ರದಲ್ಲಿ ಬರುವ ಮಾಸ್, ಫೈಟ್ ದೃಶ್ಯಗಳಲ್ಲಿ ಹಾಗೂ ಡ್ಯಾನ್ಸ್ನಲ್ಲಿ ಹೆಚ್ಚು ಗಮನ ಸೆಳೆಯುವ ಯುವ, ಸೆಂಟಿಮೆಂಟ್ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪಳಗಬೇಕು. ಉಳಿದಂತೆ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಸಪ್ತಮಿ ಗೌಡಗೆ ಇಲ್ಲಿ ತುಂಬಾ ಗಮನ ಸೆಳೆಯುವ ಪಾತ್ರವೇನು ಇಲ್ಲ. ತಂದೆಯಾಗಿ ನಟಿಸಿರುವ ಅಚ್ಯುತ್ ಕುಮಾರ್ ಪಾತ್ರದಲ್ಲೊಂದು ಫೀಲ್ ಇದೆ. ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣವ್ ಕ್ಷೀರಸಾಗರ್ ಗಮನ ಸೆಳೆಯುತ್ತಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸುಧಾರಾಣಿ, ಹಿತ ನಟಿಸಿದ್ದಾರೆ.