ಗರ್ಭಿಣಿಯರಿಗೆ ಸಕ್ಕರೆ ಕಾಯಲೆ ಇದ್ರೆ ಡೇಂಜರ್!
– ಏನು ಮಾಡಬೇಕು… ಚಿಕಿತ್ಸೆ ಹೇಗೆ..?..ಮುನ್ನೆಚ್ಚರಿಕೆ ಏನು?
– ಸಕ್ಕರೆ ಕಾಯಿಲೆಯಿಂದ ಭ್ರೂಣಕ್ಕೆ ತೊಂದರೆ!
ಲೇಖನ: ಡಾ.ನಿವೇದಿತಾ ಹೆಗಡೆ
ಬ್ರೂಣ ಶಾಸ್ತ್ರ ,ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
ಸಹ್ಯಾದ್ರಿನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ
ಶಿವಮೊಗ್ಗ
ನಮ್ಮೂರ್ ಎಕ್ಸ್ ಪ್ರೆಸ್: ಅರೋಗ್ಯ
ಸೃಜನಳ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆಕೆಯು ಮದುವೆಯಾಗಿ ೧೦ ವರ್ಷಗಳ ನಂತರ ಗರ್ಭಿಣಿಯಾಗಿದ್ದಳು. ಏಳು ತಿಂಗಳು ತುಂಬಿದ್ದರಿಂದ ಸೀಮಂತ ಏರ್ಪಡಿಸಲಾಗಿತ್ತು.ಆದರೆ ಬೆಳಿಗ್ಗೆಯಿಂದ ಮಗು ಸರಿಯಾಗಿ ಹಂದಾಡದೇ ಇದ್ದುದರಿಂದ ಆಕೆ ಸ್ವಲ್ಪ ಗಾಬರಿಗೊಂಡಳು. ಮನೆಯಲಿ ಸೀಮಂತ ಇದ್ದುದರಿಂದ ಮರುದಿನ ವೈದ್ಯರಿಗೆ ತೋರಿಸಿದರೆ ಆಯಿತು ಎಂದು ನಿರ್ಧರಿಸಿದಳು.
ಮಾರನೇ ದಿನ ಪ್ರಸೂತಿ ತಜ್ಞರನ್ನು ಕಂಡಾಗ, ವೈದ್ಯರು ಸ್ಕ್ಯಾನಿಂಗ್ ಮಾಡಿದರು. ಆಘಾತಕಾರಿ ಸುದ್ದಿಯೆಂದರೆ ಮಗುವಿನ ಹೃದಯ ಬಡಿತ ನಿಂತು ಹೋಗಿದ್ದು ಗರ್ಭದಲ್ಲೇ ಮರಣ ಹೊಂದಿತ್ತು. ರಕ್ತ ಪರೀಕ್ಷೆಯ ನಂತರ ತಿಳಿದು ಬಂದದ್ದು ಆಕೆಗೆ ಸಕ್ಕರೆ ಕಾಯಿಲೆ ಇದೆಯೆಂದು. ಗರ್ಭಧಾರಣೆ ಕೊನೆಯ ವಾರಗಳಲ್ಲಿ ಇದು 8-10% ಡಯಾಬಿಟಿಸ್ ಇರುವ ತಾಯಂದಿರಲ್ಲಿ ಕಂಡು ಬರುತ್ತದೆ. ಸರಿಯಾಗಿ ನಿರ್ವಹಿಸದ ಸಕ್ಕರೆ ಕಾಯಿಲೆಯು ಇದಕ್ಕೆ ಕಾರಣವಾದರೂ, ಶುಗರ್ ಕಂಟ್ರೋಲ್ ಚೆನ್ನಾಗಿದ್ದರೂ ಗರ್ಭಿಣಿಯರಲ್ಲಿ ಪ್ರಸವ ಪೂರ್ವದಲ್ಲಿ ಮಗುವಿನ ಮರಣ ಸಂಭವಿಸಬಹುದು.
ಭಾರತದಲ್ಲಿ ಸಕ್ಕರೆ ಕಾಯಲೆ ಹೆಚ್ಚಳ!
ಭಾರತವು ಸಿಹಿ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಸಕ್ಕರೆ ಕಾಯಿಲೆಯ ರಾಜಧಾನಿಯೂ ಆಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಸುಮಾರು 100 ಮಿಲಿಯನ್ ಜನರು ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ. ವಿದೇಶಿಯರಿಗಿಂತ 10 ವರ್ಷ ಮೊದಲೇ ನಮ್ಮಲ್ಲಿ ಡಯಾಬಿಟಿಸ್ ಶುರುವಾಗಬಹುದು. ಬದಲಾದ ಜೀವನ ಶೈಲಿ, ಕಮ್ಮಿ ವ್ಯಾಯಾಮ ಹಾಗೂ ಅನುವಂಶೀಯತೆಯು ಇದಕ್ಕೆ ಕಾರಣವೆನ್ನಬಹುದು. ಹಾಗೆಯೇ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಗರ್ಭಾವಸ್ಥೆಯ ಮಧುಮೇಹ (Gestational Diabetes Mellitus) ಪ್ರತಿ ವರ್ಷ 4 ಮಿಲಿಯನ್ ಗರ್ಭಿಣಿಯರಲ್ಲಿ ಕಂಡು ಬರುತ್ತಿದೆ. ಶೇಕಡಾ 10-20% ಗರ್ಭಿಣಿಯರು ಇದಕ್ಕೆ ತುತ್ತಾಗಿದ್ದು, ಇದು ನಂತರದ ದಿನಗಳಲ್ಲಿ Type-2 ಡಯಾಬಿಟಿಸ್ ಆಗಿ ಮಾರ್ಪಾಡುಗೊಳ್ಳುತ್ತದೆ.
ಕಾರಣಗಳು ಏನು?
– ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಾಸ.
– ಬೊಜ್ಜುತನ, ಥೈರಾಯ್ಡ್ ತೊಂದರೆ, ಪಿಸಿಒಡಿ (PCOD) ತೊಂದರೆ.
– ಅನುವಂಶೀಯತೆ.
ಪರಿಶೀಲನೆ (Diagnosis):
ಗರ್ಭಿಣಿಯ ಮೊದಲ ಭೇಟಿಯಲ್ಲೇ Random Blood Sugar ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1c) ಪರೀಕ್ಷೆ ಮಾಡಲಾಗುತ್ತದೆ. ನಂತರ ಸುಮಾರು 24ನೇ ವಾರದಲ್ಲಿ ಗ್ಲೂಕೋಸ್ ಮಿಶ್ರಣವನ್ನು ಕುಡಿಸಿ ಪರೀಕ್ಷೆ ಮಾಡಲಾಗುತ್ತದೆ. ಇದನ್ನು Glucose Challenge Test ಎಂದು ಕರೆಯಲಾಗುತ್ತದೆ.ಈ ಟೆಸ್ಟ್ ಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಜೀವನಶೈಲಿ ಬದಲಾವಣೆ, ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಹೇಳಲಾಗುತ್ತದೆ. ಇದರಲ್ಲಿ ಹತೋಟಿಗೆ ಬರದಿದ್ದಲ್ಲಿ ಮೆಟ್ಫಾರ್ಮಿನ್ (Metformin) ಮಾತ್ರೆ ಅಥವಾ ಇನ್ಸುಲಿನ್ (Insulin) ಅನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇದು ಗರ್ಭಾವಸ್ಥೆಯ ಕೊನೆಯವರೆಗೂ ತೆಗೆದುಕೊಳ್ಳಬೇಕಾಗುತ್ತದೆ.
ಸಕ್ಕರೆ ಕಾಯಿಲೆಯಿಂದ ಭ್ರೂಣಕ್ಕೆ ತೊಂದರೆ:
ಗರ್ಭಪಾತವಾಗುವ ಸಾಧ್ಯತೆ.
ಭ್ರೂಣದಲ್ಲಿ ಅಂಗವಿಕಲತೆ – ಹೃದಯದ ತೊಂದರೆ, ಬೆನ್ನುಹುರಿ ಸೀಳುವಿಕೆ (Open Spina Bifida), ಕಿಡ್ನಿ ತೊಂದರೆ, ಅನ್ನನಾಳದ ತೊಂದರೆ, Caudal Regression Syndrome ಇತ್ಯಾದಿ.
ಮಗುವಿನ ಬೆಳವಣಿಗೆ ಅಧಿಕಗೊಂಡು ಹೆರಿಗೆ ಸಮಯದಲ್ಲಿ ತೊಂದರೆ ಆಗಬಹುದು. ಇದಕ್ಕೆ Macrosomia ಎಂದು ಕರೆಯಲಾಗುತ್ತದೆ. ಹೆರಿಗೆ ಸಮಯದಲ್ಲಿ ಭುಜ ಸಿಕ್ಕಿಹಾಕಿಕೊಂಡು (Shoulder Dystocia) ಡೆಲಿವರಿ ಸುಲಭವಾಗದೇ ಇರಬಹುದು.
Polyhydramnios: ಮಗುವಿನ ಸುತ್ತ ಇರುವ ನೀರಿನ ಪ್ರಮಾಣ ಅಧಿಕಗೊಂಡು ಸಮಯಕ್ಕಿಂತ ಮೊದಲೇ ನೀರು ಹೋಗುವುದು, ಹೊಕ್ಕುಳ ಬಳ್ಳಿ ಜಾರುವುದು ಉಂಟಾಗುವ ಸಾಧ್ಯತೆ ಇರುತ್ತದೆ.
ಇಂತಹ ಗರ್ಭಿಣಿಯರಲ್ಲಿ ಸಿಸೇರಿಯನ್ ಸಾಧ್ಯತೆಯೂ ಹೆಚ್ಚಿರುತ್ತದೆ.
ಹೆರಿಗೆ ನಂತರದ ತೊಂದರೆಗಳು:
ಸಕ್ಕರೆ ಕಾಯಿಲೆಯಿಂದ C-Section ಗಾಯ ವಾಸಿಯಾಗುವುದು ನಿಧಾನವಾಗಬಹುದು ಅಥವಾ ಗಾಯಕ್ಕೆ ಸೋಂಕು ತಗಲಬಹುದು. ಹೆರಿಗೆ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುವ ಸಂಭವ ಇರುತ್ತದೆ.
ಡಯಾಬಿಟಿಸ್ ಬಗ್ಗೆ ಇರುವ ಅಪನಂಬಿಕೆಗಳು:
- ಸಕ್ಕರೆ ಕಾಯಿಲೆ ಸಕ್ಕರೆ ತಿಂದರೆ ಬರುತ್ತದೆ, ಆದ್ದರಿಂದ ಬೆಲ್ಲವನ್ನು ಜಾಸ್ತಿ ತಿನ್ನಬಹುದು.
- ಬೊಜ್ಜುತನ ಇರುವವರಿಗೆ ಮಾತ್ರ ಸಕ್ಕರೆ ಕಾಯಿಲೆ ಬರಬಹುದು.
– ಗರ್ಭಿಣಿಯರಲ್ಲಿ ಸಕ್ಕರೆ ಕಾಯಿಲೆ ಬಂದರೆ ಅದು ಪ್ರಸವದ ನಂತರವೂ ಕಡಿಮೆ ಆಗುವುದಿಲ್ಲ.
– ಡಯಾಬಿಟಿಸ್ ಗರ್ಭಿಣಿಯರು ಕಡ್ಡಾಯವಾಗಿ ಸಿಸೇರಿಯನ್ ಮಾಡಿಸಿಕೊಳ್ಳಬೇಕು.
– ಡಯಾಬಿಟಿಸ್ನಿಂದ ತಾಯಿಗೆ ಮಾತ್ರ ತೊಂದರೆ, ಮಗುವಿಗೆ ಯಾವುದೇ ತೊಂದರೆ ಇರುವುದಿಲ್ಲ.
ಬಾಣಂತಿ ಆರೈಕೆ:
ಮೊದಲೇ ತಿಳಿಸಿದಂತೆ ಗರ್ಭಾವಸ್ಥೆಯಲ್ಲಿ ಕಾಣುವ ಮಧುಮೇಹ ಕ್ರಮೇಣ ಹೆರಿಗೆಯ ನಂತರ ಸರಿ ಹೋಗುತ್ತದೆ. ಆದರೂ ಬಾಣಂತಿಯರು ಮೊದಲ 1 ರಿಂದ 3 ತಿಂಗಳವರೆಗೆ ಸಕ್ಕರೆ ಕಾಯಿಲೆಗೆ ಅನುಗುಣವಾಗಿ ಪಥ್ಯ ಮಾಡುವುದು ಉತ್ತಮ. 6 ವಾರಗಳು ಕಳೆದ ನಂತರ ಮತ್ತೆ ರಕ್ತದಲ್ಲಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಂತರದ ದಿನಗಳಲ್ಲೂ ಒಳ್ಳೆಯ ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಮಾಡುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಡಬೇಕು. ಇದರಿಂದ Type-2 ಡಯಾಬಿಟಿಸ್ ಬರುವುದನ್ನು ತಡೆಯಬಹುದು.
Type-2 ಡಯಾಬಿಟಿಸ್ ಇರುವಂತಹ ತಾಯಂದಿರು ಗರ್ಭಪೂರ್ವ ಸಮಾಲೋಚನೆಗೆ ವೈದ್ಯರನ್ನು ಭೇಟಿಯಾಗುವುದು ಉತ್ತಮ. HbA1c ರಕ್ತದಲ್ಲಿ 7ಕ್ಕಿಂತ ಕಡಿಮೆ ಇದ್ದಾಗ ಗರ್ಭಧಾರಣೆಯಾದರೆ ಮಗುವಿನಲ್ಲಿ ಅಂಗವಿಕಲತೆ ಆಗುವ ಪ್ರಮಾಣ ಕಡಿಮೆಯಾಗುತ್ತದೆ. ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಭ್ರೂಣಕ್ಕೆ ತೊಂದರೆ ಮಾಡದಂತಹ ಡಯಾಬಿಟಿಸ್ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಮೆಟ್ಫಾರ್ಮಿನ್ ಮತ್ತು ಇನ್ಸುಲಿನ್ ಎರಡೂ ಗರ್ಭಾವಸ್ಥೆಯಲ್ಲಿ ಕೊಡಬಹುದಾದ ಔಷಧಗಳು.
ಈಗಾಗಲೇ ಡಯಾಬಿಟಿಸ್ ಇರುವುದರಿಂದ ಕಣ್ಣಿನ ರೆಟಿನಾ (Retina) ಪರೀಕ್ಷೆ, ಕಿಡ್ನಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಕೆಲವೊಮ್ಮೆ ಡಯಾಬಿಟಿಸ್ ರಕ್ತನಾಳಗಳಿಗೆ ತೊಂದರೆ ಮಾಡಿದ್ದಲ್ಲಿ (Vascular disease), ಗರ್ಭಕ್ಕೆ ಸರಿಯಾಗಿ ರಕ್ತ ಸಂಚಾರವಾಗದೇ ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇರುತ್ತದೆ.
ಗರ್ಭಧಾರಣೆಯ ನಂತರ ಬರುವ Gestational Diabetes ಅಥವಾ ಈಗಾಗಲೇ ಡಯಾಬಿಟಿಸ್ ಇರುವವರಾಗಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಸರಿಯಾದ ಪಥ್ಯ, ಜೀವನಶೈಲಿ ಮತ್ತು ವೈದ್ಯರ ಸಲಹೆಯಿಂದ ಡಯಾಬಿಟಿಸ್ ಇರುವವರೂ ಗರ್ಭಿಣಿಯಾಗಬಹುದು. ಸರಿಯಾದ ಸಮಯಕ್ಕೆ ತಕ್ಕಂತೆ ವೈದ್ಯರ ಸಲಹೆ ಪಾಲಿಸುವುದರಿಂದ ಮುಂದಾಗುವ ಅನಾಹುತಗಳನ್ನು ಕಡಿಮೆ ಮಾಡಬಹುದು.
ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರು, ಕುಟುಂಬದವರಿಗೆ ಶೇರ್ ಮಾಡಿರಿ..







