ಕರಾವಳಿ ಟಾಪ್ ನ್ಯೂಸ್
• ಉಡುಪಿ: ಆರೋಪಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ
• ಕುಂದಾಪುರ: ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ
ಉಡುಪಿ: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೋಕಾ ಕಾಯ್ದೆಯಡಿಯಲ್ಲಿ ಏಳು ಮಂದಿ ಆರೋಪಿಗಳಾದ ಸುರತ್ಕಲ್ ಕಾಟಿಪಳ್ಳದ ದೇವಿ ಪ್ರಸಾದ್ ಶೆಟ್ಟಿ, ಸುದೀಪ್, ಮಿಥುನ್ ಕೈಕಂಬ, ಕೃಷ್ಣಾಪುರದ ಶ್ರೀಶಾ ಆನಂದ ಶೆಟ್ಟಿ, ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್, ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ ಮತ್ತು ಕೆಮ್ಮಣ್ಣು ಹೂಡೆಯ ಮನೋಜ್ ವಿ ಕೊಟ್ಯಾನ್ ಅವರನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಾದ ಮಂಗಳೂರಿನ ಜೋಕಟ್ಟೆಯ ಮನೋಜ್ ಕೋಡಿಕೆರೆ ಮತ್ತು ಬಂಟ್ವಾಳದ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ ಅವರು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಒಂದು ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ.
ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧನಾ ಕಾರ್ಯವನ್ನು ಆರಂಭಿಸಿದ್ದರೂ ಕೂಡ, ಪೊಲೀಸರು ಈ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 50.000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಆರೋಪಿಗಳನ್ನು ಸೆರೆಹಿಡಿಯಲು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪೊಲೀಸರು ಬಲೆ ಬೀಸಿದ್ದಾರೆ. 2025ರ ನವೆಂಬರ್ ತಿಂಗಳಿನಲ್ಲಿ ಸಿದ್ಧಾಪುರದ ಮೋಹನ ದಾಸ್ ಶೆಟ್ಟಿ ಅವರ ಪುತ್ರರಾದ ತೇಜಸ್ ಅವರನ್ನು ಮನೋಜ್ ಕೋಡಿಕೆರೆ ಸೂಚನೆಯ ಮೇರೆಗೆ ಅಪಹರಣ ಮಾಡಲಾಗಿತ್ತು. ಬಳಿಕ ಆರೋಪಿಗಳು ಮೋಹನ ದಾಸ್ ಶೆಟ್ಟಿ ಅವರ ಬಳಿ ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಮನೋಜ್ ಕೋಡಿಕೆರೆ ವಿರುದ್ಧ ಮಂಗಳೂರು ನಗರದಲ್ಲಿ 18 ಹಾಗೂ ಉಡುಪಿ ಜಿಲ್ಲೆಯಲ್ಲಿ ಎರಡು ಪ್ರಕರಣಗಳು, ಚೇತನ್ ಕುಲಾಲ್ ವಿರುದ್ಧ ಮಂಗಳೂರು ನಗರದಲ್ಲಿ 11 ಹಾಗೂ ಉಡುಪಿ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ತಲೆಮರಿಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ತಮಗೆ ನೆರವಾಗುವವರಿಗೆ 50.000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸಾರ್ವಜನಿಕರಿಗೆ ಆರೋಪಿಗಳ ಕುರಿತು ಮಾಹಿತಿ ಲಭಿಸಿದಲ್ಲಿ 9480805422 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾಹಿತಿದಾರರ ವಿವರವನ್ನು ಸಂಪೂರ್ಣವಾಗಿ ಗೌಪ್ಯವಾಗಿಡುವ ಭರವಸೆಯನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದಾರೆ.
•ಕುಂದಾಪುರ: ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ
ಕುಂದಾಪುರ: ಇಲ್ಲಿನ ಬೋರ್ಡ್ ಹೈಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ, ಗುರುವಾರ ಸಂಜೆ ಮಂಗಲ್ ಪಾಂಡೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಪುರಸಭೆ ವ್ಯಾಪ್ತಿಯ ಮಂಗಲ್ ಪಾಂಡೆ ರಸ್ತೆಯ ನಿವಾಸಿ ಕೌಶಿಕ್ ಬಾಯಾರಿ ಎಂದು ಗುರುತಿಸಲಾಗಿದೆ. ಗುರುವಾರದಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ 8 ಮತ್ತು 9ನೇ ತರಗತಿಯ ಮಕ್ಕಳಿಗೆ ರಜೆ ನೀಡಿದ್ದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಇಲ್ಲದ ಸಮಯದಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಇಲ್ಲಿಯವರೆಗೆ ಒಂಭತ್ತನೇ ತರಗತಿಯ ನಾಲ್ಕು ಪರೀಕ್ಷೆಗಳು ಮುಗಿದಿತ್ತು, ಏಪ್ರಿಲ್ 4ರ ಶನಿವಾರ ಮತ್ತು ಏಪ್ರಿಲ್ 6ರ ಸೋಮವಾರದಂದು ಎರಡು ಪರೀಕ್ಷೆಗಳು ನಿಗದಿಯಾಗಿದ್ದವು. ಕೌಶಿಕ್ ಕಲಿಕೆಯಲ್ಲೂ ಮುಂಚೂಣಿಯಲ್ಲಿದ್ದ ಎಂದು ಕೂಡ ಶಿಕ್ಷಕರು ತಿಳಿಸಿದ್ದಾರೆ. ಆದರೆ ಕೌಶಿಕ್ ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣ ಏನೆನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.







