ಸತ್ಯ ಮತ್ತು ತ್ಯಾಗದ ಪ್ರತೀಕ ‘ಗುಡ್ ಫ್ರೈಡೇ’: ಏಸು ಕ್ರಿಸ್ತನ ಬಲಿದಾನದ ಸ್ಮರಣೆಯ ದಿನ
– ಉಪವಾಸ, ಪ್ರಾರ್ಥನೆ ಮತ್ತು ತ್ಯಾಗ: ಕ್ರೈಸ್ತ ಬಾಂಧವರಿಂದ ಪವಿತ್ರ ‘ಗುಡ್ ಫ್ರೈಡೇ’ ಆಚರಣೆ
– ಗುಡ್ ಫ್ರೈ ಡೇ ಎಲ್ಲರಲ್ಲೂ ಮಾನವೀಯತೆ ತರಲಿ
ದೈವದ ಒಂದು ಅಂಶವಾಗಿ ಬಡ ತಂದೆ ತಾಯಿಗಳ ಮಗನಾಗಿ, ಗೋದಲಿಯಲ್ಲಿ ಜನ್ಮ ತಾಳಿದರು ಜೀಸಸ್. ಬದುಕಿನುದ್ದಕ್ಕೂ ಅನೇಕ ನೋವು, ಹಿಂಸೆಗಳನ್ನು ಎದುರಿಸಿದ ಸಹನಾಮೂರ್ತಿ. ತನ್ನದೇ ಆದ ತತ್ವ, ಸಂದೇಶಗಳ ಮೂಲಕ ನೂರಾರು ಅನುಯಾಯಿಗಳನ್ನು ಪಡೆದು, ಜಗತ್ತಿಗೆ ಶಾಂತಿ, ಪ್ರೀತಿ, ಕರುಣೆಯಂತಹ ಅತ್ಯಮೂಲ್ಯ ಅಂಶಗಳನ್ನು ಸಾರುವಂತೆ ಅವರನ್ನು ತಯಾರಿಸಿದ ಗುರು.
ಸತ್ಯ, ತ್ಯಾಗ, ವಾತ್ಸಲ್ಯ ಎನ್ನುವ ಉತ್ತಮ ಗುಣಗಳನ್ನು ಅಳವಡಿಸಿಕೊಂಡಿದ್ದರ ಪರಿಣಾಮವಾಗಿ ಶತೃಗಳ ಕೆಂಗಣ್ಣಿಗೆ ಗುರಿಯಾದನು ಈ ಅವಧೂತ. ಫಲವಾಗಿ ಪ್ಲಸ್ ಆಕಾರದ ಮರದ ತುಂಡಿಗೆ ಮೊಳೆ ಹೊಡೆಸಿಕೊಂಡು, ಮುಳ್ಳಿನ ಕಿರೀಟವನ್ನು ಶಿರದಲ್ಲಿ ಧರಿಸಿ, ಅತ್ಯಂತ ಕ್ರೂರ ರೀತಿಯಲ್ಲಿ, ಹಿಂಸಾತ್ಮಕವಾಗಿ ತನ್ನ ಕೊನೆಯ ಕ್ಷಣವನ್ನು ಕಳೆಯಬೇಕಾದ ಸನ್ನಿವೇಶ ಎದುರಿಸುವಂತಾಯಿತು. ಅಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತನ್ನನ್ನು ಈ ಸ್ಥಿತಿಗೆ ತಂದ ಶತೃಗಳನ್ನು ಕ್ಷಮಿಸಿ, ತನ್ನ ಅನುಯಾಯಿಗಳಿಗೂ “ಅವರನ್ನು ಕ್ಷಮಿಸಿ. ತಿಳಿಯದೆ ತಪ್ಪು ಮಾಡಿದ್ದಾರೆ. ಅವರನ್ನು ದ್ವೇಷಿಸಬೇಡಿ”ಎಂದು ಹೇಳುತ್ತಲೇ ಪ್ರೀತಿಗೆ ಇರುವ ನಿಜವಾದ ಶಕ್ತಿಯನ್ನು ಮಾನವಕುಲಕ್ಕೆ ತೋರಿದನು. ಹಿಂಸಾತ್ಮಕ ಸಾವಿನಲ್ಲೂ ಮುಗುಳುನಗೆಯ ಬೀರುತ್ತ, ತನ್ನ ನೋವನ್ನು ನುಂಗಿ ಜಗಕೆ ಸಂತಸ ನೀಡಿದನು. ಇದರ ನೆನಪಿಗಾಗಿ ಅಂದರೆ ಜೀಸಸ್ ನನ್ನು ಜೆರುಸಲೇಮ್ ನಲ್ಲಿ ಶಿಲುಬೆಗೇರಿಸಿದ ಈಸ್ಟರ್ ಗೂ ಮೊದಲು ಬರುವ ಶುಕ್ರವಾರದಂದು ಕ್ರೈಸ್ತ ಬಾಂಧವರು ಗುಡ್ ಫ್ರೈಡೆ ಎನ್ನುವ ದಿನವನ್ನು ಆಚರಿಸಿ, ಏಸು ಕ್ರಿಸ್ತನ ಸಂದೇಶ, ಆತನು ಅನುಭವಿಸಿದ ನೋವು, ಅದನ್ನು ತೋರಗೊಡದೆ ಜಗತ್ತಿಗೆ ನೀಡಿದ ಸುಖವನ್ನು ಸ್ಮರಿಸಿಕೊಂಡು ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಕ್ಯಾಥೋಲಿಕ್ ಸಂಪ್ರದಾಯದವರು ಅದರಲ್ಲೂ 18-59 ವರ್ಷದೊಳಗಿನವರು ಗುಡ್ ಫ್ರೈಡೆ ಬರುವ 40 ದಿನಗಳ ಮುಂಚಿತವಾಗಿ ಉಪವಾಸ ಕೈಗೊಳ್ಳುತ್ತಾರೆ. ಜೊತೆಗೆ 14 ವರ್ಷ ಮೇಲ್ಪಟ್ಟವರು ಮಾಂಸವನ್ನೂ ಕೂಡ ಸೇವಿಸುವುದಿಲ್ಲ. ಇದನ್ನು ಲೆಂಟ್ ಎಂದು ಕರೆಯುತ್ತಾರೆ. ಬೂದಿ ಬುಧವಾರದಿಂದ ಪ್ರಾರಂಭಗೊಳ್ಳುವ ಇದು ಈಸ್ಟರ್ ಹಬ್ಬದವರೆಗೂ ಮುಂದುವರಿದು, ಅಂದು ಇಷ್ಟದ ಆಹಾರಗಳ ಸೇವನೆಯ ಮೂಲಕ ಮುಕ್ತಾಯಗೊಳ್ಳುತ್ತದೆ. ಯುದ್ಧ, ಹಿಂಸೆ, ದ್ವೇಷ,ಅಸತ್ಯವೇ ಹೆಚ್ಚಿನ ಪ್ರಮಾಣದಲ್ಲಿ ತುಂಬಿಕೊಂಡಿರುವ ಈ ಕಾಲದಲ್ಲಿ ಜೀಸಸ್ ನಮ್ಮನ್ನು ಪ್ರೀತಿ,ಕರುಣೆ,ಸತ್ಯ, ಶಾಂತಿಯತ್ತ ನಡೆಸುವಂತಾಗಲಿ.








