ಎಸ್. ಎಸ್. ಎಲ್ ಸಿ ಪಿಯುಸಿ ಮುಂದೇನು?
ಡಾಕ್ಟರ್, ಇಂಜಿನಿಯರ್ ಆಗೋದು ಹೇಗೆ…?
ನಿಮ್ಮ ಮುಂದಿದೆ ನೂರಾರು ಆಯ್ಕೆ.. ನೂರಾರು ಅವಕಾಶ
ಕೌಶಲ್ಯ, ಜ್ಞಾನ ಇದ್ರೆ ಎಲ್ಲಾದ್ರೂ ಕೆಲಸ ಗ್ಯಾರಂಟಿ
ಎಸ್ ಎಸ್ ಎಲ್ ಸಿ ಆದ ಬಳಿಕ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಭವಿಷ್ಯವನ್ನು ರೂಪಿಸುತ್ತವೆ. ಎಸ್ ಎಸ್ ಎಲ್ ಸಿ ಬಳಿಕ ಮುಂದೇನು? ಎಂಬ ಪ್ರಶ್ನೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿರುತ್ತದೆ. ಆಸಕ್ತಿ, ತನ್ನಲ್ಲಿರುವ ಕೌಶಲ್ಯವನ್ನು ಪರಿಗಣಿಸಿ ತನಗೆ ಸೂಕ್ತ ಹೊಂದುವ ವೃತ್ತಿಯ ಕಡೆಗೆ ಸಾಗಬೇಕಾಗಿರುವುದು ಇಂದಿನ ಅನಿವಾರ್ಯತೆ, ಭಾರತದಲ್ಲಿ ಉದ್ಯೋಗಗಳ ಕೊರತೆಯಿಲ್ಲ. ಬದಲಾಗಿ ಇರುವ ಉದ್ಯೋಗಗಳಿಗೆ ಸರಿಹೊಂದುವ ಉದ್ಯೋಗಿಗಳು ಸಿಗುತ್ತಿಲ್ಲ’ ಎಂಬ ಮಾತಿದೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಬೇಕಾಗಿದೆ. ಈಗಿನ ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರಮುಖ ಗುರಿ ಡಾಕ್ಟರ್, ಇಂಜಿನಿಯರ್..!.
ಡಾಕ್ಟರ್ ಆಗೋದು ಹೇಗೆ?
‘ವೈದ್ಯ’ರಾಗಬೇಕೆಂಬ ಕನಸುಗಳನ್ನು ಹೊತ್ತವರು ಪಿಯುಸಿಯಲ್ಲಿ ವಿಜ್ಞಾನವನ್ನೇ ಆಯ್ಕೆಮಾಡಬೇಕು. ಅದರಲ್ಲಿ ‘ಪಿಸಿಎಂಬಿ’ ಅಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಓದಬೇಕಾಗುತ್ತದೆ. ಪಿಯುಸಿ ಬಳಿಕ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ‘ನೀಟ್’ ಪರೀಕ್ಷೆಯನ್ನು ಬರೆಯಬೇಕು. ಅದಕ್ಕಾಗಿ ಪ್ರಥಮ ಪಿಯುಸಿಯಿಂದಲೇ ತಯಾರಿಯನ್ನು ನಡೆಸುವುದು ಉತ್ತಮ. ಇತ್ತೀಚೆಗೆ ಹೆಚ್ಚಿನ ಪಿಯು ಕಾಲೇಜುಗಳಲ್ಲಿ ಮಧ್ಯಾಹ್ನದವರೆಗೂ ಪಿಯುಸಿಯ ಪಠ್ಯಕ್ರಮಗಳನ್ನು ಹಾಗೂ ಮಧ್ಯಾಹ್ನದ ಬಳಿಕ ನೀಟ್ ಪರೀಕ್ಷೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗುತ್ತದೆ. ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಪಡೆಯಲು ಅವು ಪೂರಕ.
ಏನಿದು ನೀಟ್ ಪರೀಕ್ಷೆ?
ನೀಟ್’ ಪರೀಕ್ಷೆಯನ್ನು ಕೇಂದ್ರ ಸರಕಾರದ ಎನ್ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ) ನಡೆಸುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಮೇ ತಿಂಗಳಿನಲ್ಲಿ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಹೆಚ್ಚಿನ ರ್ಯಾಂಕಿಂಗ್ ಬಂದರೆ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಕರ್ನಾಟಕ ರಾಜ್ಯದ ಸರಕಾರಿ ಕಾಲೇಜುಗಳಲ್ಲಿ 3,150 ಹಾಗೂ ಖಾಸಗಿ ಕಾಲೇಜುಗಳಲ್ಲಿ6,995 ವೈದ್ಯಕೀಯ ಸೀಟುಗಳು ಲಭ್ಯವಿದೆ. ಭಾರತ ದೇಶದಲ್ಲಿ ಒಟ್ಟು 695 ಕಾಲೇಜುಗಳಲ್ಲಿ ಆಯುರ್ವೇದ, ನ್ಯಾಚುರೋಪತಿ, ಪಶು ವೈದ್ಯಕೀಯ, ಡೆಂಟಲ್ ಸರ್ಜರಿ ಸೇರಿ ಒಟ್ಟು 1,06,333 ವೈದ್ಯಕೀಯ ಸೀಟುಗಳು ಮಾತ್ರ ಇವೆ. ಇವು ‘ನೀಟ್’ ರ್ಯಾಂಕ್ ಆಧಾರದಲ್ಲಿ ಲಭ್ಯವಾಗುತ್ತವೆ. ನೀಟ್ ಪರೀಕ್ಷೆಯನ್ನು ಎಷ್ಟು ಬಾರಿ ಬೇಕಾದರೂ ಬರೆಯಬಹುದಾಗಿದೆ. ೨೦೨೪ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 1,31,318 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದು ಅದರಲ್ಲಿ75,248 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.
ಸರ್ಕಾರಿ ಕಾಲೇಜಿನಲ್ಲಿ ಶುಲ್ಕ : ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಬಾರದೇ ಮ್ಯಾನೇಜ್ಮೆಂಟ್ ಸೀಟು ಗಳ ಮೂಲಕ ವೈದ್ಯಕೀಯ ಕಾಲೇಜಿಗೆ ಸೇರುವುದಾದರೆ ಐದು ವರ್ಷಗಳ ಅಧ್ಯಯನಕ್ಕೆ ರೂ 50 ಲಕ್ಷದಿಂದ 1.50 ಕೋಟಿಯವರೆಗೂ ಶುಲ್ಕವಿರುತ್ತದೆ. ನೀಟ್ನಲ್ಲಿ ರ್ಯಾಂಕ್ ಪಡೆದು ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ದೊರೆತರೆ ಅಲ್ಲಿ ವಾರ್ಷಿಕ ಅಂದಾಜು ರೂ 10 ಸಾವಿರ ರೂಪಾಯಿಗಳಿಂದ ರೂ 1 ಲಕ್ಷದವರೆಗೆ ಶುಲ್ಕವಿರುತ್ತದೆ. ಐದು ವರ್ಷಗಳ ವೈದ್ಯಕೀಯ ಪದವಿ ಪಡೆದ ನಂತರ ‘ನೀಟ್ ಪಿಜಿ’ ಪರೀಕ್ಷೆಯನ್ನು ಬರೆದು ನಂತರ ಮೂರು ವರ್ಷಗಳಿಂದ ಎಂಡಿಎಂಎಸ್, ಉನ್ನತ ಶಿಕ್ಷಣಕ್ಕೆ ಪ್ರವೇಶವನ್ನು ಪಡೆಯಬಹುದು. ಅದಾದ ಬಳಿಕ ಆಯ್ಕೆಯ ಸ್ಪೆಷಲೈಸೇಷನ್ ಪಡೆಯುವುದಾದರೆ ಮತ್ತೆ ಮೂರು ವರ್ಷಗಳ ಡಿಎಂ ಅಥವಾ ಇತರೆ ಕೋರ್ಸ್ ಗಳನ್ನು ಮಾಡಬಹುದಾಗಿದೆ.
ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ: ಕೆಲವು ದೇಶಗಳಲ್ಲಿ ಭಾರತಕ್ಕಿಂತಲೂ ಕಡಿಮೆ ಶುಲ್ಕದೊಂದಿಗೆ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ. ವಿದೇಶಕ್ಕೆ ಹೋಗುವವರೂ ಕೂಡ ‘ನೀಟ್’ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಎಂದು ಭಾರತೀಯ ವೈದ್ಯಕೀಯ ಮಂಡಳಿಯೇ ಸೂಚಿಸಿದೆ. ಇದಲ್ಲದೇ ಇಂಗ್ಲಿಷ್ ಭಾಷೆಯ ಜೊತೆಗೆ ಅಧ್ಯಯನಕ್ಕೆ ಆಯ್ಕೆ ಮಾಡುವ ದೇಶದ ಭಾಷೆಯನ್ನೂ ಕಲಿಯಬೇಕು (ಕೆಲವು ಕಡೆ ಕಡ್ಡಾಯ). ಇನ್ನು ಆ ದೇಶ ನಡೆಸುವ ಪ್ರವೇಶ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು. ಇದಕ್ಕೂ ಭಾರತದಲ್ಲಿ ಕೆಲವು ತರಬೇತಿ ಕೇಂದ್ರಗಳು ಇವೆ.
ಇಂಜಿನಿಯರಿಂಗ್ ಪದವಿ ಪಡೆಯೋದು ಹೇಗೆ?
ವೃತ್ತಿಯಲ್ಲಿ ಇಂಜಿನಿಯರ್ ಆಗಬೇಕೆಂದುಕೊಂಡಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಬೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ (ಪಿಸಿಎಂ) ವಿಷಯಗಳ ಜೊತೆಗೆ ತನ್ನ ಆಸಕ್ತಿಯ ಮತ್ತೊಂದು ವಿಷಯವನ್ನು ಕಂಪ್ಯೂಟರ್ ಸೈನ್ಸ್/ ಸಂಖ್ಯಾಶಾಸ್ತ್ರ/ ಎಲೆಕ್ಟ್ರಾನಿಕ್ಸ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಲು ಆಸಕ್ತಿ ಇರದಿದ್ದರೆ ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸ್ ಮಾಡಿ ಬಳಿಕ ನೇರವಾಗಿ ದ್ವಿತೀಯ ವರ್ಷದ
ಇಂಜಿನಿಯರಿಂಗ್ ಪದವಿ (ಬಿ.ಇ) ಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಪಿಯುಸಿ ಬಳಿಕ ಇಂಜಿನಿಯರಿಂಗ್ ಶಿಕ್ಷಣಕ್ಕೆ ಹೆಸರಾಂತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಈ ಕೆಳಗಿನ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ.
ಜೆಇಇ (ಮೇನ್ಸ್ ) : ಇದು ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಪಡೆಯುವ ಅಂಕ ಹಾಗೂ ರಾಷ್ಟ್ರಮಟ್ಟದ ರ್ಯಾಂಕ್ ಆಧರಿಸಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತದೆ.
ಜೆಇಇ (ಅಡ್ವಾನ್ಸ್ ) : ಈ ಪರೀಕ್ಷೆಯ ಭಾರತದ ಐಟಿಐಗಳ ದಾಖಲಾತಿಗಾಗಿ ನಡೆಯುತ್ತದೆ. ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಹತ್ತಿರದಲ್ಲಿದ್ದ 2.5 ಲಕ್ಷ ಒಳಗಿನ ರ್ಯಾಂಕ್ ಬಂದವರು ಈ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸುತ್ತಾರೆ. ಈ ಪರೀಕ್ಷೆಯನ್ನು ಗರಿಷ್ಠ ಎರಡು ಬಾರಿ ಮಾತ್ರ ಬರೆಯಲು ಸಾಧ್ಯ.
ರಾಜ್ಯಮಟ್ಟದ ಪ್ರವೇಶ ಪರೀಕ್ಷೆಗಳು : ಅನೇಕ ರಾಜ್ಯಗಳು ಇಂಜಿನಿಯರಿಂಗ್ ಪ್ರವೇಶಕ್ಕಾಗಿ ತಮ್ಮದೇ ಆದ ಪರೀಕ್ಷೆಗಳನ್ನು ನಡೆಸುತ್ತದೆ. ಕರ್ನಾಟಕದಲ್ಲೂ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಖಾಸಗಿ ಪ್ರವೇಶ ಪರೀಕ್ಷೆಗಳು: ಕೆಲವು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು, ಕಾಲೇಜು ಮಟ್ಟದಲ್ಲೂ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತದೆ.
ಇಂಜಿನಿಯರಿಂಗ್ ಅಲ್ಲೂ ಹತ್ತಾರು ಕೋರ್ಸ್…!
ಇಂಜಿನಿಯರಿಂಗ್ ಕೋರ್ಸ್ 4 ವರ್ಷ ಅವಧಿಯಾದ್ದಾಗಿದ್ದು ಇದರಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಮ್ಯುನಿಕೇಷನ್, ಕೆಮಿಕಲ್, ಏರೋಸ್ಪೇಸ್, ಮಾಹಿತಿ ತಂತ್ರಜ್ಞಾನ ( ಇನ್ ಫಾರ್ಮೇಶನ್ ಟೆಕ್ನಾಲಜಿ) ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ ) ಹೀಗೆ ವಿವಿಧ ಕೋರ್ಸ್ ಗಳಿವೆ. ಇಂಜಿನಿಯರಿಂಗ್ ಬಳಿಕ ಎಂ ಟೆಕ್, ಎಂಬಿಎಂ ಇತ್ಯಾದಿ ಉನ್ನತ ಶಿಕ್ಷಣಕ್ಕೂ ಅವಕಾಶವಿದೆ. ಇಂಜಿನಿಯರಿಂಗ್ ಶಿಕ್ಷಣದ ಶುಲ್ಕಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಭಾರೀ ಅಂತರವಿದೆ. ಸರ್ಕಾರಿ ಕಾಲೇಜುಗಳಲ್ಲಿ ವಾರ್ಷಿಕ ರೂ ೧೦, ಸಾವಿರದಿಂದ ರೂ 1 ಲಕ್ಷಗಳವರೆಗೆ ಶುಲ್ಕವಿದ್ದರೆ, ಖಾಸಗಿ ಕಾಲೇಜುಗಳು ವಾರ್ಷಿಕವಾಗಿ ರೂ ಒಂದು ಲಕ್ಷದಿಂದ ರೂ 30 ಲಕ್ಷದವರೆಗೆ ಶುಲ್ಕವನ್ನು ಪಡೆಯುತ್ತವೆ. ಕಾಲೇಜು, ಆ ಕಾಲೇಜು ಇರುವ ಪ್ರದೇಶ, ಕಾಲೇಜು ಕೊಡುವ ಸೌಲಭ್ಯ ಇತ್ಯಾದಿಗಳ ಆಧಾರದಲ್ಲಿ ಶುಲ್ಕದಲ್ಲಿ ವ್ಯತ್ಯಾಸ ಇರುತ್ತದೆ.
2024 – 2025 ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ 245 ಕಾಲೇಜುಗಳಲ್ಲಿ 1,32,309 ಇಂಜಿನಿಯರಿಂಗ್ ಸೀಟುಗಳು ಲಭ್ಯವಿದ್ದವು. ಇದರಲ್ಲಿ ಸರ್ಕಾರಿ ಕೋಟಾದಡಿಯಲ್ಲಿ 62,930 ಸೀಟುಗಳು, ಅಔಒಇಆ -ಏ ಕೋಟಾದಡಿಯಲ್ಲಿ 28,656 ಮತ್ತು ಹೆಚ್ಚುವರಿಯಾಗಿ 5,155 ಸೀಟುಗಳು, ವಿಟಿಯ ಅಡಿಯಲ್ಲಿ ಇರುವ ಸಂಯೋಜಿತ ಕಾಲೇಜುಗಳ ಶೇ.೪೫ ರಷ್ಟು ಸೀಟುಗಳು ಸಿಇಟಿ ರ್ಯಾಂಕ್ ಪಡೆದವರಿಗೆ ಮೀಸಲಾಗಿರುತ್ತದೆ. ಒಬ್ಬ ವಿದ್ಯಾರ್ಥಿಯು ಎಷ್ಟು ಬಾರಿ ಬೇಕಿದ್ದರೂ ಸಿಇಟಿ ಪರೀಕ್ಷೆಯನ್ನು ಬರೆಯಬಹುದಾಗಿದೆ. ಸಿಇಟಿಯಲ್ಲಿ ಪಡೆದ ರ್ಯಾಂಕಿನ ಆಧಾರದಲ್ಲಿ ಕಾಲೇಜುಗಳಿಗೆ ಪ್ರವೇಶ ದೊರೆಯುತ್ತದೆ.
ನರ್ಸಿಂಗ್ ಕೂಡ ಈಗ ಭಾರೀ ಬೇಡಿಕೆ!
ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಬೇಕು ಅಂದುಕೊAಡಿರುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ದುಕೊಂಡರೆ ಮುಂದೆ ‘ಬಿ.ಎಸ್ಸಿ. ನರ್ಸಿಂಗ್’ ಪದವಿಗೆ ಸೇರಿಕೊಳ್ಳಬಹುದು. ಕೆಲವು ಕಾಲೇಜುಗಳಲ್ಲಿ ಕಲಾ/ವಾಣಿಜ್ಯ ವಿದ್ಯಾರ್ಥಿಗಳಿಗೂ ಪ್ರವೇಶ ನೀಡುತ್ತಾರೆ. ಖಾಸಗಿ ಕಾಲೇಜುಗಳಲ್ಲಿ ವಾರ್ಷಿಕ ಒಂದು ಲಕ್ಷದಿಂದ ಎರಡು ಲಕ್ಷದ ವರೆಗೆ ಶುಲ್ಕವಿರುತ್ತದೆ.
ಕೌಶಲ್ಯ, ಜ್ಞಾನ ಇದ್ರೆ ಎಲ್ಲಾದ್ರೂ ಕೆಲಸ ಗ್ಯಾರಂಟಿ ಲಾಯರ್, ಡಿಸೈನರ್, ವಿಡಿಯೋ ಎಡಿಟರ್, ಹೋಟೆಲ್ ಮ್ಯಾನೇಜ್ಮೆಂಟ್, ಸಿಎ, ಆಡಿಟರ್, ವೆಬ್ ಡೆವಲಪರ್, ಡಿಜಿಟಲ್ ಮಾರ್ಕೆಟರ್, ಅರ್ಕಿಟೆಕ್ಟ್, ಟೆಕ್ ಎಕ್ಸ್ಪರ್ಟ್ ಸೇರಿ ನೂರಾರು ಕೋರ್ಸ್, ನೂರಾರು ಉದ್ಯೋಗಳಿವೆ.
ಆದರೆ ಕೆಲಸ ಮಾಡುವ ಕೌಶಲ್ಯ, ಜ್ಞಾನ, ಶ್ರಮ, ಪ್ರಾಮಾಣಿಕತೆ, ಕಲಿಯುವ ಆಸಕ್ತಿ ಇರಬೇಕಷ್ಟೆ..








