ರೈತರಿಗೆ ಮೈಲುತುತ್ತ ಭಾರ!
– ನುಂಗಲಾರದ ತುತ್ತಾದ ಕೊಳೆರೋಗ ಔಷಧ!
– ಕೆಜಿಗೆ 250 ರೂ.ನಿಂದ 550 ರೂ.ಗೆ ಹೆಚ್ಚಳ
ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುವ ಬೋರ್ಡ್ ಮಿಶ್ರಣದ ಮೈಲುತುತ್ತ ದರ ದಿಢೀರನೆ ದುಪ್ಪಟ್ಟಾಗಿದೆ. ಕೆಜಿ ಮೈಲುತುತ್ತಕ್ಕೆ ಸುಮಾರು 275 ರೂ. ಹೆಚ್ಚಾಗಿದ್ದು ಅಡಕೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. ರೋಗಗಳ ನಡುವೆ ಅಡಕೆ ಬೆಳೆ ಸಂರಕ್ಷಣೆ ರೈತರಿಗೆ ಸವಾಲಾಗಿರುವ ಹೊತ್ತಲ್ಲಿ ಮೈಲುತುತ್ತ ದರ ಏರಿಕೆಯಾಗಿದೆ. ಅಡಕೆ ಎಲೆಚುಕ್ಕಿ, ಕೊಳೆ ರೋಗ ನಿಯಂತ್ರಣಕ್ಕೆ ಮೈಲುತುತ್ತ ಔಷಧ ಬಳಸುತ್ತಿರುವ ರೈತರಿಗೆ ದರ ಏರಿಕೆ ನುಂಗಲಾರದ ತುತ್ತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸರಿಸುಮಾರು 4 ಬಾರಿ ಔಷಧ ಸಿಂಪಡಣೆ ರೈತರಿಗೆ ಅನಿವಾರ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಡಕೆ ಮರದ ಹೆಡಲಿಗೆ ಬೋರ್ಡೋ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ರೈತರು ಐದಾರು ಬಾರಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮೈಲುತುತ್ತ ಧಾರಣೆ ಮತ್ತಷ್ಟು ಏರಿಕೆ ಆಗಬಹುದು ಎನ್ನಲಾಗಿದೆ. ಅತೀ ಹೆಚ್ಚು ಅಡಕೆ ಬೆಳೆಯುವ ಪ್ರದೇಶ ಹೊಂದಿರುವ ರೈತರು, ಕ್ವಿಂಟಾಲ್ ಗಟ್ಟಲೆ ಮೈಲುತುತ್ತ ಖರೀದಿಗೆ ಮುಂಗಡ ಹಣ ನೀಡುತ್ತಿದ್ದಾರೆ. ಕೆಜಿಗೆ 250ರಿಂದ 300 ರೂ.ದರದಲ್ಲಿ ದೊರೆಯುತ್ತಿದ್ದ ಮೈಲುತುತ್ತ ಈಗ 600 ರೂ. ಹತ್ತಿರ ದರ ಏರಿಕೆ ಆಗಿದೆ. ಕೇಂದ್ರ, ರಾಜ್ಯ ಸರಕಾರ ತಕ್ಷಣ ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂಬ ಅಗ್ರಹ ವ್ಯಕ್ತವಾಗಿದೆ.
ಕೆಜಿ ಮೈಲುತುತ್ತ ಈಗ ಮಾರುಕಟ್ಟೆಯಲ್ಲಿ 550ರಿಂದ 570 ರೂ.ಗೆ ಮಾರಾಟವಾಗುತ್ತಿದೆ. ಮೈಲುತುತ್ತ ಬೇಡಿಕೆ ದಿನಗಳಾದ ಮಳೆಗಾಲ ಆರಂಭಕ್ಕೆ 4 ತಿಂಗಳ ಮುನ್ನವೇ ಈ ದರದಲ್ಲಿ ಮಾರಾಟವಾಗುತ್ತಿರುವುದರಿಂದ ರೈತರು ಸಹಜವಾಗಿ ಆತಂಕಕ್ಕೀಡಾಗಿದ್ದಾರೆ. ಮೈಲುತುತ್ತ ದರದಲ್ಲಿ ದಿಢೀರ್ ಏರಿಕೆಯನ್ನು ರೈತರನ್ನು ಪ್ರತಿನಿಧಿಸುವ ಸಹಕಾರ ಸಂಸ್ಥೆಗಳು, ಪ್ರತಿನಿಧಿಗಳು ಈವರೆಗೂ ಅಧಿಕೃತವಾಗಿ ಪ್ರಶ್ನಿಸಿಲ್ಲ. ಇನ್ನು ನಿಯಂತ್ರಣ ಔಷಧಕ್ಕೆ ಸರಕಾರದಿಂದ ದೊರೆಯುತ್ತಿದ್ದ ಸಹಾಯಧನ ಇತ್ತೀಚಿನ ವರ್ಷದಲ್ಲಿ ರೈತರಿಗೆ ಸಿಗದಂತಾಗಿದೆ., ರಾಳದ ಬೆಲೆ ಏರುವ ಸಾಧ್ಯತೆ ಹೆಚ್ಚಿದೆ. 1 ಬಾರಿ 1 ಎಕರೆ ಅಡಕೆ ತೋಟದ ಔಷಧ ಸಿಂಪಡಣೆಗೆ ಕುಶಲ ಕಾರ್ಮಿಕನ ಸಂಬಳ, ಔಷಧ ಸಾಮಗ್ರಿ ಹೆಚ್ಚು ಆಗುತ್ತಿದ್ದು ರೈತರ ಬದುಕು ಈಗ ಮೂರಾಬಟ್ಟೆಯಾಗಿದೆ.








