ನಡೆದಾಡುವ ದೇವರು ದಿ.ಡಾ.ಶಿವಕುಮಾರ ಶ್ರೀಗಳ ಜನ್ಮ ದಿನ..!
– 111 ವರ್ಷ ಮನುಕುಲದ ಸೇವೆಗೆ ಜೀವನ ಮುಡಿಪು
– ಲಕ್ಷ ಲಕ್ಷ ಜನರಿಗೆ ಅನ್ನ, ವಿದ್ಯೆ, ಆಶ್ರಯ ನೀಡಿದ ಪರಮಾತ್ಮ
ಮತ್ತೆ ಹುಟ್ಟಿ ಬನ್ನಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ
ಕಣ್ಣಿಗೆ ಕಾಣುವ ದೇವರಾಗಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ತ್ರಿವಿಧ ದಾಸೋಹ ಮೂಲಕ ರಾಜ್ಯದಲ್ಲಿ ಲಕ್ಷ ಲಕ್ಷ ಜನರಿಗೆ ಅನ್ನ, ವಿದ್ಯೆ, ಆಸರೆ ನೀಡಿದವರು. ಅವರು ನಮ್ಮ ಮುಂದೆ ಇಲ್ಲವಾದರೂ ಅವರ ಸೇವೆ ಮನುಕುಲಕ್ಕೆ ಮಾದರಿ. ಮಾಗಡಿ ತಾಲ್ಲೂಕಿನ ವೀರಾಪುರ ಎನ್ನುವ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ತಾಯಿ ಗಂಗಮ್ಮ ಅವರ ಮಗನಾಗಿ 1908ರ ಏಪ್ರಿಲ್ 1ರಂದು ಜನಿಸಿದರು.
ಬಾಲ್ಯದಲ್ಲಿ ಶಿವಣ್ಣ ಎಂದು ಮನೆಯವರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಶ್ರೀಗಳು ತಮ್ಮ ಪ್ರಾಥಮಿಕ ಶಾಲಾ ಸಂದರ್ಭದಲ್ಲಿಯೇ ತಾಯಿಯನ್ನು ಕಳೆದುಕೊಂಡು ಅಕ್ಕನ ಆಸರೆಯಲ್ಲಿ ಬೆಳೆದರು. ನಂತರ ಧರ್ಮಛತ್ರದಲ್ಲಿ ಉಳಿದುಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಆಗಾಗ ತುಮಕೂರು ಜಿಲ್ಲೆಯ ಸಿದ್ಧಗಂಗಾ ಮಠಕ್ಕೆ ಅವರು ತೆರಳುತ್ತಿದ್ದರು. ಅಂತಹ ಸಂದರ್ಭದಲ್ಲಿ ಮಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀಉದ್ದಾನ ಶಿವಯೋಗಿ ಸ್ವಾಮೀಜಿಗಳು ಮತ್ತು ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗವು ಶಿವಣ್ಣನವರಿಗೆ ಒಂದು ರೀತಿಯ ಹಿತಾನುಭವ ನೀಡುತ್ತಿತ್ತು.
1930ರಲ್ಲಿ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾದ ಸಂದರ್ಭದಲ್ಲಿ, ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ತೆರಳಿದ್ದ ಶಿವಣ್ಣ ಅವರನ್ನು ಹಿರಿಯ ಸ್ವಾಮಿಗಳಾದ ಶ್ರೀಉದ್ದಾನ ಸ್ವಾಮೀಜಿಗಳು ಮಠದ ಉತ್ತರಾಧಿಕಾರಿಯಾಗಿ ಘೋಷಿಸಿದರು. ಶಿವಣ್ಣ ಆಗಿದ್ದವರು ಮಠದ ಉತ್ತರಾಧಿಕಾರಿಯಾಗಿ ಸನ್ಯಾಸತ್ವ ಸ್ವೀಕರಿಸಿ, ಕಾವಿ ರುದ್ರಾಕ್ಷಿಗಳನ್ನು ಧರಿಸಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಕರೆಸಿಕೊಂಡಿದ್ದು ಇತಿಹಾಸ.
ಧರ್ಮ, ಜಾತಿ, ಅಂತಸ್ತು ಮೀರಿದ ಮಾನವೀಯ ಸೇವೆ!
ಜಾತಿ ಧರ್ಮಗಳನ್ನು ಮೀರಿ ವಿದ್ಯಾರ್ಥಿಗಳಿಗೆ ಜ್ಞಾನ, ಆಸರೆ ಮತ್ತು ಅನ್ನ ನೀಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿಕೊಂಡರು, ಬೆಳಗಿನ ಜಾವ ನಾಲ್ಕು ಗಂಟೆಗೆ ಏಳುವುದು, ಯೋಗ, ತಣ್ಣೀರಿನ ಸ್ನಾನದ ಬಳಿಕ ಇಷ್ಟಲಿಂಗ ಪೂಜೆ, ಪೂಜಾಕೋಣೆಯಲ್ಲಿ ಗಂಟೆಗಳ ಕಾಲ ಧ್ಯಾನ, ಮಿತ ಆಹಾರ, ಮಲಗುವ ಮೊದಲು ಪುಸ್ತಕ ಓದುವುದು ಇವರ ಆರೋಗ್ಯದ ಗುಟ್ಟು. ಪರಿಣಾಮವಾಗಿ ಶತಾಯುಷಿಗಳಾಗಿ ನಮ್ಮ ನಡುವೆ ಇದ್ದು ನಡೆದಾಡುವ ದೇವರು ಎನಿಸಿಕೊಂಡರು.
111ನೇ ವಯಸ್ಸಿನಲ್ಲಿ ವಿಧಿ ವಶ!
ಶ್ವಾಸಕೋಶದ ಸೋಂಕಿನಿಂದ ಬಳಲಿದ ಶ್ರೀಗಳು 2019ರ ಜನವರಿ 21ರಂದು ತಮ್ಮ 111ನೇ ವಯಸ್ಸಿನಲ್ಲಿ ಸಿದ್ಧಗಂಗಾದ ಹಳೆಯ ಮಠದಲ್ಲಿ ಶಿವೈಕ್ಯರಾದರು. ಇಂತಹ ದೈವಂಶ ಸಂಭೂತರು ನಮ್ಮ ನಡುವೆ ಇದ್ದರು ಎನ್ನುವುದೇ ನಮ್ಮ ಪುಣ್ಯ. ಇವರ ಮಾರ್ಗವನ್ನು ಅನುಸರಿಸಿ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ. ಅವರಿಗೆ ನಮನ ಸಲ್ಲಿಸೋಣ.








