ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಕಸ ಎಸೆದರೆ ದಂಡ!
– ದೆಹಲಿಯಲ್ಲಿ ಹೊಸ ನಿಯಮ: ಮುಂದೆ ಎಲ್ಲಾ ಕಡೆ ಇದೇ ನಿಯಮ ಸಾಧ್ಯತೆ
– ಕರ್ಕಶ ಹಾರ್ನ್, ಶಬ್ದ ಮಾಡಿದರೂ ದಂಡ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಇನ್ನು ಮುಂದೆ ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಎಸೆದರೆ 500ರೂಪಾಯಿ ದಂಡ ವಿಧಿಸುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದೆ. ಪ್ರಸ್ತುತ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1957ರ ಅನ್ವಯ ಈ ರೀತಿಯ ಕೃತ್ಯಕ್ಕೆ 50 ರೂಪಾಯಿ ದಂಡ ವಿಧಿಸಲಾಗುತ್ತಿತ್ತು, ಜನ್ ವಿಶ್ವಾಸ್ ಬಿಲ್ 2025 ಕಾಯ್ದೆಯು ಜಾರಿಗೆ ಬಂದಲ್ಲಿ ಇದರ ಮೊತ್ತ 10 ಪಟ್ಟು ಹೆಚ್ಚಲಿದೆ ಎನ್ನುವ ಮಾಹಿತಿ ಲಭಿಸಿದೆ. ಜನರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಜಿತಿನ್ ಪ್ರಸಾದ್ ಅವರು ಈ ತಿದ್ದುಪಡಿಯನ್ನು ಮಂಡಿಸಿ, ಲೋಕಸಭೆಯಿಂದ ಅಂಗೀಕಾರವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಕೇವಲ ಮೂತ್ರ ವಿಸರ್ಜನೆ ಮತ್ತು ಕಸ ಎಸೆಯುವುದು ಅಷ್ಟೇ ಅಲ್ಲದೆ, ಕರ್ಕಶ ಶಬ್ದ ಮಾಡುವ ಮೂಲಕ ಶಾಂತಿಯನ್ನು ಕದಡುವ, ಮಾನವ ತ್ಯಾಜ್ಯ ಎಸೆಯುವ, ಸಗಣಿ ಅಥವಾ ಗೊಬ್ಬರ ಶೇಖರಿಸಿಡುವುದಕ್ಕೂ ದಂಡವು ಅನ್ವಯಗೊಳ್ಳುತ್ತದೆ ಎಂದು ಹೇಳಲಾಗಿದೆ. ಇದರೊಂದಿಗೆ ಕೊರಳಿಗೆ ಬೆಲ್ಟ್ ಹಾಕಿರದ ಸಾಕು ನಾಯಿಯನ್ನು ರಸ್ತೆಯಲ್ಲಿ ತಿರುಗಾಡಲು ಬಿಟ್ಟರೆ 50 ರಿಂದ 1.000 ರೂಪಾಯಿ ದಂಡ, ಸಾರ್ವಜನಿಕ ಸ್ಥಳಗಳಲ್ಲಿ ದನಗಳನ್ನು ಕಟ್ಟಿದರೆ, ಮನೆ ಸಂಖ್ಯೆಗೆ ಹಾನಿ ಮಾಡಿದರೆ 1.000 ರೂಪಾಯಿ ದಂಡ, ಮನೆಯ ಸುತ್ತಮುತ್ತಲಿರುವ ಹೊಲಸನ್ನು ಸ್ವಚ್ಛಗೊಳಿಸದಿದ್ದಲ್ಲಿ 50 ರೂಪಾಯಿ ಬದಲಿಗೆ 500 ರೂಪಾಯಿ ದಂಡ, ಅಪಾಯಕಾರಿ ಪಟಾಕಿ ಹೊಡೆದರೆ 50 ರೂಪಾಯಿ ಬದಲಿಗೆ 500 ರೂಪಾಯಿ ದಂಡ, ರಸ್ತೆಗೆ ಕಸ ಎಸೆದರೆ 50 ರೂಪಾಯಿ ಬದಲು 200 ರೂಪಾಯಿ ದಂಡ, ಕಸ ಗುಡಿಸುವ ಪುರಸಭೆಯ ಸಿಬ್ಬಂದಿಯು ಅನುಮತಿ ಇಲ್ಲದೆ ರಜೆ ಹಾಕಿದ್ದಲ್ಲಿ ಒಂದು ತಿಂಗಳ ಸೆರೆಮನೆ ವಾಸದೊಂದಿಗೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.








