ವಿಶ್ವದಲ್ಲಿ ಉದ್ಯೋಗ ಕಡಿತ ಶುರುವಾಗಿದೆ!
– ಒರಾಕಲ್ ಕಂಪನಿಯಿಂದ 1.6 ಲಕ್ಷ ಉದ್ಯೋಗಿಗಳ ವಜಾ
– ಬೆಂಗಳೂರು ಸೇರಿ ಎಲ್ಲೆಡೆ ಉದ್ಯೋಗ ಕಡಿತ ಹೆಚ್ಚಳ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನ್ಯೂಯಾರ್ಕ್: ಪ್ರಸಿದ್ಧ ತಂತ್ರಜ್ಞಾನ ಸಂಸ್ಥೆಯಾದ ಒರಾಕಲ್ ಮಂಗಳವಾರದಂದು ದಿಢೀರ್ ಆಗಿ ಭಾರಿ ಪ್ರಮಾಣದ ಲೇಆಫ್ ಗೆ ಚಾಲನೆ ನೀಡಿದ್ದು, ಪರಿಣಾಮವಾಗಿ ಸುಮಾರು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಸಂಕಷ್ಟಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಒಳಗಾಗಿದ್ದಾರೆ ಎನ್ನುವುದು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.
ಒರಾಕಲ್ ಸುಮಾರು 1.62 ಲಕ್ಷದಷ್ಟು ಸಿಬ್ಬಂದಿಗಳನ್ನು ಹೊಂದಿದ್ದು, ಶೇಕಡಾ 18ರಷ್ಟು ಉದ್ಯೋಗಿಗಳನ್ನು ಮಂಗಳವಾರದಂದು ವಜಗೊಳಿಸಿದೆ. ಇದರಲ್ಲಿ ಸುಮಾರು 12.೦೦೦ ಮಂದಿ ಭಾರತೀಯರಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಮಾರ್ಚ್ 31 ಕೊನೆಯ ಕೆಲಸದ ದಿನವಾಗಿರುವುದರಿಂದ ತಕ್ಷಣ ಕಂಪನಿಯು ಲೇಆಫ್ ಇ-ಮೇಲ್ ಕಳುಹಿಸಿದ್ದು, ಅದರಲ್ಲಿ ಕಂಪನಿಯ ಪುನರ್ವ್ಯವಸ್ಥಿಕರಣದ ಭಾಗವಾಗಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದು, ಇನ್ನು ಮುಂದೆ ನಿಮ್ಮ ಕೆಲಸದ ಅಗತ್ಯ ಕಂಪನಿಗೆ ಇಲ್ಲ ಎಂದು ತಿಳಿಸಿದೆ.
ಬಳಿಕ ಲ್ಯಾಪ್ ಟಾಪ್ ಹಾಗೂ ಸಿಸ್ಟಮ್ ಗಳ ಆ್ಯಕ್ಸೆಸ್ ಅನ್ನು ತಕ್ಷಣ ಸ್ಥಗಿತಗೊಳಿಸಿರುವುದು ಉದ್ಯೋಗಿಗಳಲ್ಲಿ ಚಿಂತೆಯನ್ನುಂಟು ಮಾಡಿದೆ. ನಿಜಾಂಶವೆಂದರೆ ಒರಾಕಲ್ ಯಾವುದೇ ರೀತಿಯ ನಷ್ಟವನ್ನು ಅನುಭವಿಸುತ್ತಿಲ್ಲ. ಬದಲಿಗೆ ಕಳೆದ ತ್ರೈಮಾಸಿಕದಲ್ಲಿ ಇದರ ಲಾಭವು ಶೇಕಡಾ 95 ರಷ್ಟು ಹೆಚ್ಚಳಗೊಂಡಿದ್ದು, 6.13 ಬಿಲಿಯನ್ ಡಾಲರ್ ಗೆ ತಲುಪಿದೆ ಎನ್ನಲಾಗಿದೆ. ಆದರೆ ಕಂಪನಿಯು ಕೃತಕ ಬುದ್ಧಿಮತ್ತೆ ಡೇಟಾ ಸೆಂಟರ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 156 ಬಿಲಿಯನ್ ಡಾಲರ್ ವೆಚ್ಚದ ಈ ಯೋಜನೆಗಾಗಿ ಕಂಪನಿಯು ಈಗಾಗಲೇ 50 ಬಿಲಿಯನ್ ಡಾಲರ್ ನಷ್ಟು ಸಾಲ ಮಾಡಿದ್ದು, ಅದರ ವೆಚ್ಚವನ್ನು ಸರಿದೂಗಿಸಲು ಈ ಕಠಿಣ ಕ್ರಮವನ್ನು ಕೈಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಯು ವಜಾಗೊಂಡ ಉದ್ಯೋಗಿಗಳಿಗೆ ಮೂರು ತಿಂಗಳ ಸಂಬಳ ಮತ್ತು ಮಾಡಿರುವ ಕೆಲಸಕ್ಕೆ ಅನುಗುಣವಾಗಿ ಪ್ರತಿ ವರ್ಷಕ್ಕೆ 15 ದಿನಗಳ ವೇತನ, ಗ್ರಾಚ್ಯೂಟಿ ಸೇರಿದಂತೆ ಇನ್ನೂ ಅನೇಕ ಬಗೆಯ ಪರಿಹಾರ ಪ್ಯಾಕೇಜ್ ಗಳನ್ನು ಘೋಷಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೂ ಕೂಡ ಭಾರತ ಮತ್ತು ಅಮೆರಿಕಾದಲ್ಲಿನ ಸಾವಿರಾರು ಕುಟುಂಬಗಳು ಕಂಪನಿಯ ಈ ಅನಿರೀಕ್ಷಿತ ನಿರ್ಧಾರದಿಂದಾಗಿ ಆರ್ಥಿಕ ಅನಿಶ್ಚಿತತೆಗೆ ಒಳಗಾಗುವಂತಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಬೆಂಗಳೂರು ಸೇರಿ ಎಲ್ಲೆಡೆ ಉದ್ಯೋಗ ಕಡಿತ ಹೆಚ್ಚಳ ಆಗುವ ಸಾಧ್ಯತೆ ಇದೆ.








