ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಡಾಕ್ಟರೇಟ್
– ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಪ್ರದಾನ
– 25 ವರ್ಷಗಳಿಂದ ಸಮಾಜ ಸೇವೆ, ಸಮುದಾಯ ಸಬಲೀಕರಣ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಕ್ರೆಸ್ತ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ತೀರ್ಥಹಳ್ಳಿ ಲೂರ್ದು ಮಾತೆ ಚರ್ಚ್ ನ ಧರ್ಮಗುರುಗಳಾಗಿರುವ ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್ಡಿ) ಪದವಿಯನ್ನು ಅಧಿಕೃತ ಅಧಿಸೂಚನೆಯ ಮೂಲಕ ಪ್ರದಾನ ಮಾಡಿದೆ.
“ಕೊರಗ ಸಮುದಾಯದ ಸಬಲೀಕರಣದಲ್ಲಿ ಕ್ಯಾಥೊಲಿಕ್ ಚರ್ಚಿನ ಪಾತ್ರ: ಒಂದು ಸಮಾಜಶಾಸ್ತಿಯ ಅಧ್ಯಯನ” ಎಂಬ ವಿಷಯದ ಮೇಲೆ ಅವರು ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಕರ್ನಾಟಕದ ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯಗಳಲ್ಲಿ ಒಂದಾದ ಕೊರಗ ಸಮುದಾಯದ ಅಭಿವೃದ್ಧಿಯಲ್ಲಿ ಚರ್ಚಿನ ಮಹತ್ವದ ಪಾತ್ರವನ್ನು ಈ ಸಂಶೋಧನೆ ಬೆಳಕಿಗೆ ತರುತ್ತದೆ. ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಮಾರ್ಗದರ್ಶನ ನೀಡಿದ್ದರು.
25 ವರ್ಷಗಳ ಸಾರ್ಥಕ ಸೇವೆ: ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ
1973ರ ನವೆಂಬರ್ 5 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರು ಗ್ರಾಮದಲ್ಲಿ ಜನಿಸಿದ ಫಾದರ್ ಮೊರಾಸ್ ಅವರು 2002ರ ಮೇ 6 ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದುಕೊಂಡರು. ಕಳೆದ 25 ವರ್ಷಗಳಿಂದ ಸಮಾಜ ಸೇವೆ, ಸಮುದಾಯ ಸಬಲೀಕರಣ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುತ್ತಾರೆ. ಆಳವಾದ ಅಧ್ಯಯನ ಉಳ್ಳ ಇವರು ಇಂಗ್ಲಿಷ್, ಕನ್ನಡ, ಕೊಂಕಣಿ, ತುಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಪರಿಣತಿ ಹೊಂದಿದ್ದಾರೆ. ಫಾದರ್ ಮೊರಾಸ್ ಅವರ ಶೈಕ್ಷಣಿಕ ಸಾಧನೆ ಕುತೂಹಲ ಕಾರಿಯಾಗಿದೆ. 2021ರಲ್ಲಿ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜ್ ಅಫ್ ಲಾ ಸಂಸ್ಥೆಯಿಂದ ಎಲ್.ಎಲ್.ಬಿ ಪದವಿ, 2008 ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಸಮಾಜಶಾಸ್ತ್ರ ಎಂ.ಎ. ಯಲ್ಲಿ ಪ್ರಥಮ ರ್ಯಾಂಕ್, 2007ರಲ್ಲಿ ಕೆನಡ ದೇಶದ ಕೋಡಿ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ನಿಂದ ಡಿಪ್ಲೊಮಾ ಇನ್ ಡೆವಲಪ್ಮೆಂಟ್ ಲೀಡರ್ಶಿಪ್, 2006ರಲ್ಲಿ ಕಾರಿತಾಸ್ ಇಂಡಿಯಾ ಸಂಸ್ಥೆಯ ಡಿಪ್ಲೊಮಾ ಇನ್ ಡೆವೆಲಪ್ಮೆಂಟ್ ಡೈನಾಮಿಕ್ಸ್, ಬೆಂಗಳೂರಿನ ಸೈಂಟ್ ಪೀಟರ್ಸ್ ಪೊಂತಿಫಿಕಾಲ್ ಇನ್ಸ್ಟಿಟ್ಯೂಟ್ನಿಂದ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ಗಳಲ್ಲಿ ಪದವಿಗಳು ಇವು ಶಿಕ್ಷಣ ಕ್ಷೇತ್ರದಲ್ಲಿ ಅವರು ಹಲವು ಸಾಧನೆಗಳಲ್ಲಿ ಕೆಲವು.
ತೀರ್ಥಹಳ್ಳಿ ಚರ್ಚ್ ಧರ್ಮಗುರುಗಳಾಗಿ ಸೇವೆ
2024ರ ಜುಲೈನಿಂದ ತೀರ್ಥಹಳ್ಳಿ ಅವರ್ ಲೇಡಿ ಆಫ್ ಲೂರ್ದು ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಅವರು 2016ರಿಂದ ಶಿವಮೊಗ್ಗ ಕ್ರೆಸ್ತ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಫಾದರ್ ಮೊರಾಸ್ ಅವರು ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿಯ ಕಾರ್ಯದರ್ಶಿ, ಮೌಂಟ್ ಕಾರ್ಮೆಲ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ‘ಮಕ್ಕಳ ಕಲ್ಯಾಣ ಸಮಿತಿ’ ಹಾಗೂ ‘ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ’ ಸಮಿತಿಯ ಮುಂತಾದ ಸರ್ಕಾರಿ ಸಮಿತಿಗಳಲ್ಲಿಯೂ ಸದಸ್ಯರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿರುತ್ತಾರೆ.
ಸಾಮಾಜಿಕವಾಗಿಯೂ ಸೇವೆ
ಸಮಾಜ ಸೇವಾ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ ಫಾದರ್ ಮೊರಾಸ್, ಸಮಾಜದ ತಳಮಟ್ಟದ ಸಮುದಾಯಗಳನ್ನು ಸಂಘಟಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ 16,೦೦೦ಕ್ಕಿಂತಲೂ ಮಹಿಳೆಯರನ್ನು 55 ಸ್ತ್ರೀ ಬಂಧು ಒಕ್ಕೂಟಗಳಲ್ಲಿ ಸಂಘಟಿಸಿ ಅವರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. 2013ರಲ್ಲಿ 1೦,೦೦೦ ಕ್ಕಿಂತಲೂ ಅಧಿಕ ಸದಸ್ಯತ್ವ ಇರುವ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ‘ಸ್ತ್ರೀ ಬಂಧು ಸೌಹಾರ್ದ ಸಹಕಾರಿ’ಯನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಲೇಖಕರೂ ಹೌದು…
ಫಾದರ್ ಮೊರಾಸ್ ಒಬ್ಬ ಉತ್ತಮ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಜೀಸಸ್, ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್’ ಮತ್ತು ‘ಸ್ಮಾಲ್ ಕ್ರಿಶ್ಚಿಯನ್ ಕಮ್ಯೂನಿಟಿಸ್’ ಎಂಬ ಅವರ ಪುಸ್ತಕಗಳು ಗಮನಾರ್ಹವಾಗಿವೆ. ಸಾಮಾಜಿಕ ಕ್ಷೇತ್ರ ಮತ್ತು ಸಮುದಾಯ ಅಭಿವೃದ್ಧಿ ವಿಷಯಗಳ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರು ಒಬ್ಬ ಉತ್ತಮ ಸಂಪನ್ಮೂಲ ವ್ಯಕ್ತಿಯೂ ಅಗಿದ್ದು, ಹಕ್ಕ ಆಧಾರಿತ ಅಭಿವೃದ್ಧಿ, ನಾಯಕತ್ವ, ಅಂತರ್ ಧರ್ಮಿಯ ಸಂವಾದ ಮುಂತಾದ ಇನ್ನೂ ಅನೇಕ ವಿಷಯಗಳಲ್ಲಿ ತರಬೇತಿ ಕಾರ್ಯಗಾರಗಳನ್ನು ನಡೆಸಿರುತ್ತಾರೆ. ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರ ಪಿಹೆಚ್ಡಿ ಸಾಧನೆಯು ಸಮಾಜಕ್ಕೆ ಪ್ರೇರಣೆಯಾಗಿದ್ದು, ವಿಶೇಷವಾಗಿ ಹಿಂದುಳಿದ ಸಮುದಾಯಗಳ ಸಬಲೀಕರಣದಲ್ಲಿ ಮಹತ್ವದ ಪ್ರಭಾವವನ್ನು ಬೀರಬಲ್ಲದ್ದಾಗಿರುತ್ತದೆ. ಸ್ನೇಹಿತರು, ಸಮುದಾಯ ಬಾಂಧವರು, ಊರಿನ ಪ್ರಮುಖರು ಶುಭಾಶಯ ಸಲ್ಲಿಸಿದ್ದಾರೆ.








