ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಮೂಗುದಾರ!
– ರಾಜ್ಯದಲ್ಲಿ ಸಿದ್ಧಗೊಂಡ ನಿಯಮಾವಳಿ: ಏನಿದು ನಿಯಮ?
– ಮಕ್ಕಳಲ್ಲಿ ಮೊಬೈಲ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವಷ್ಟರ ಮಟ್ಟಿಗೆ ಪಳಗಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಈ ಹಿಂದೆ ಕೆಲವು ನಿಯಮಾವಳಿಗಳನ್ನು ತರಲು ನಿರ್ಧರಿಸಿರುವ ಕುರಿತು ಮಾಹಿತಿ ನೀಡಿತ್ತು. ಇದೀಗ ನಿಯಮ ಮತ್ತು ಕೆಲವು ಕ್ರಮಗಳು ಸಿದ್ಧಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಮಕ್ಕಳು ಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಮಾಡಲು ಶಿಕ್ಷಕರಿಗೆ ತರಬೇತಿ, ಪೋಷಕರಿಗೆ ತಿಳಿವಳಿಕೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಅತಿಯಾಗಿ ಜಾಲತಾಣಗಳನ್ನು ಬಳಸುವ ವಿದ್ಯಾರ್ಥಿಗಳಲ್ಲಿ ಉದ್ವೇಗ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಪರಿಣಾಮವಾಗಿ ಸಮಾಜದಲ್ಲಿ ಪ್ರತ್ಯೇಕ ಮನೋಭಾವ ಬೆಳೆಯಲು, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ. ಈಗಾಗಲೇ ನಡೆಸಿರುವ ಅಧ್ಯಯನದ ಪ್ರಕಾರ ನಾಲ್ಕು ಜನ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಡಿಜಿಟಲ್ ಸಮಸ್ಯೆಗೆ ತುತ್ತಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿಯೇ ಮಕ್ಕಳ ತೊಂದರೆಯನ್ನು ಗುರುತಿಸಿ, ಗುಣಪಡಿಸುವ ಸಲುವಾಗಿ ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ಸಂಬಂಧಿಸಿದಂತೆ ನೀತಿಯನ್ನು ನಿರೂಪಿಸಲಾಗಿದೆ. ಹಾಗೆಯೇ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದುಕೊಂಡ ಬಳಿಕ ಅಂತಿಮ ನೀತಿಯನ್ನು ಪ್ರಕಟಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಿರ್ದಿಷ್ಟವಾಗಿ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವುದು ಕಷ್ಟದಾಯಕವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ. ನಾವು ಶಾಲೆಯ ಶಿಕ್ಷಕರು ಮತ್ತು ಪೋಷಕರ ಸಹಕಾರದೊಂದಿಗೆ ಮಾತ್ರ ಜವಾಬ್ದಾರಿಯುತ ಡಿಜಿಟಲ್ ಬಳಕೆಗೆ ನೀತಿಯನ್ನು ನಿರೂಪಿಸಲು ಸಾಧ್ಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.








