ತೀರ್ಥಹಳ್ಳಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿ ಎಂಐಒ ಶಸ್ತ್ರಚಿಕಿತ್ಸೆ
– 27 ವರ್ಷದ ಯುವತಿಯೊಬ್ಬರಿಗೆ ವರದಾನವಾದ ಆಸ್ಪತ್ರೆ
– ಹಿರಿಯ ಅಂಕಾಲಜಿಸ್ಟ್ ಆದ ಡಾ.ಸುರೇಶ್ ರಾವ್ ನೇತೃತ್ವದಲ್ಲಿ ಚಿಕಿತ್ಸೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: 27 ವರ್ಷದ ಯುವತಿಯೊಬ್ಬರಿಗೆ ಕಳೆದ ಎರಡು ತಿಂಗಳಿನಿಂದ ಮಲದಲ್ಲಿ ರಕ್ತ ಹಾಗೂ ಅತಿಯಾದ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಇದರಿಂದಾಗಿ ಅವರಿಗೆ ಕ್ಯಾನ್ಸರ್ ಎದುರಾಗಿರುವುದು ದೃಢಪಟ್ಟಿತು. ಯುವತಿಯ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಿದಾಗ ತಾಯಿ ರೆಕ್ಟಮ್ ಕ್ಯಾನ್ಸರ್ ನಿಂದ, ಮಾವ ಕೂಡ ರೆಕ್ಟಮ್ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ಮತ್ತೋರ್ವ ಮಾವ ಕೂಡ ಎಂಐಒ ನಲ್ಲಿ ರೆಕ್ಟಮ್ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದಿರುವುದು ಬೆಳಕಿಗೆ ಬಂದಿದೆ.
ಇದರಿಂದಾಗಿ ಯುವತಿಯು ತನ್ನ ಭವಿಷ್ಯವನ್ನು ನಿರಾತಂಕಗೊಳಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೋಲೊನೊಸ್ಕೋಪಿ ಪರೀಕ್ಷೆಯನ್ನು ನಡೆಸಿದ್ದು, ದೊಡ್ಡ ಆಂತ್ರದಲ್ಲಿ ನೂರಕ್ಕಿಂತ ಹೆಚ್ಚು ಪೋಲಿಪ್ ಗಳು ಕಂಡುಬಂದಿದೆ. ಮತ್ತು ದೊಡ್ಡ ಪೊಲಿಪ್ ಗಳಿಂದ ತೆಗೆದ ಬಯಾಪ್ಸಿಯಲ್ಲಿ ಟ್ಯೂಬ್ಯೂಲರ್ ಅಡಿನೋಮಾ ಎನ್ನುವ ಕ್ಯಾನ್ಸರ್ ನ ಪೂರ್ವ ಸ್ಥಿತಿ ಕಂಡು ಬಂದಿದೆ. ಈ ಕಾರಣದಿಂದಾಗಿ ಯುವತಿಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ.
ಬಳಿಕ ಯುವತಿಯ ಕುಟುಂಬಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ನೋಡಿಕೊಳ್ಳಲು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ವಾಗ್ದೇವಿ ಚಾರಿಟೇಬಲ್ ಟ್ರಸ್ಟ್, ಓಂಕಾರಂ ಪ್ರತಿಷ್ಠಾನ ಮತ್ತು ಸ್ಥಳೀಯ ದಾನಿಗಳ ನೆರವಿನೊಂದಿಗೆ ಆಕೆಯ ಶಸ್ತ್ರಚಿಕಿತ್ಸೆ, ಪರೀಕ್ಷೆಗಳು, ಆಸ್ಪತ್ರೆವಾಸ ಮತ್ತು ಆಹಾರ, ಸಂಪೂರ್ಣ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ನಿರ್ದೇಶಕರು ಹಾಗೂ ಹಿರಿಯ ಅಂಕಾಲಜಿಸ್ಟ್ ಆದ ಡಾ.ಸುರೇಶ್ ರಾವ್ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ತೀರ್ಥಹಳ್ಳಿಯ ಗ್ರಾಮೀಣ ಕ್ಯಾನ್ಸರ್ ಆಸ್ಪತ್ರೆಯ ಅಂಕಾಲಜಿಸ್ಟ್ ಗಳಾದ ಡಾ. ದಿವ್ಯ ಜ್ಯೋತಿ, ಡಾ. ಸುಹಾಸ್ ನವಡ ಮತ್ತು ಅವರ ತಂಡಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.








