ಕಂಟೆಂಟ್ ಕ್ರಿಯೇಟರ್ ಗಳ ಮೇಲೆ ಸರ್ಕಾರದ ಕಣ್ಣು!
– ಇನ್ನು ಸೋಷಿಯಲ್ ಮೀಡಿಯಾದಲ್ಲಿ ಒಟ್ರಾಸಿ ಹಾಕಿದ್ರೆ ಕೇಸ್
– ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲು ನಿಯಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಇಲ್ಲಿಯವರೆಗೆ ವೃತ್ತಿಪರ ಸುದ್ಧಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಮತ್ತು ಅನ್ವಯಗೊಳ್ಳುತ್ತಿದ್ದ ನಿಯಮಗಳು, ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ ಗಳಲ್ಲಿ ವಿಚಾರಗಳನ್ನು ಹಂಚಿಕೊಳ್ಳುವ ಸ್ವತಂತ್ರ ಕ್ರಿಯೇಟರ್ ಗಳಿಗೂ ಅನ್ವಯಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ನಿಯಂತ್ರಣದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾಗಿ ಹೊಸ ರೀತಿಯ ಚರ್ಚೆಗಳು ಪ್ರಾರಂಭಗೊಳ್ಳಲು ಕಾರಣವಾಗಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ತರುವ ಮೂಲಕ, ವೈಯಕ್ತಿಕವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವವರಿಗೂ ನಿಯಂತ್ರಣದ ಚೌಕಟ್ಟನ್ನು ವಿಸ್ತರಿಸುವ ಪ್ರಯತ್ನ ನಡೆಸಲಾಗಿದೆ.
ಕೇಂದ್ರ ಸರ್ಕಾರದ ನಿರ್ಧಾರದಂತೆ ಹೊಸ ತಿದ್ದುಪಡಿ ಜಾರಿಗೆ ಬಂದಲ್ಲಿ ಸುದ್ಧಿ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ನಿರಂತರವಾಗಿ ಮಾಹಿತಿಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳ ಅಭಿಪ್ರಾಯ ಮತ್ತು ಮಾಹಿತಿಗಳು ಕೇಂದ್ರ ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಒಂದು ವೇಳೆ ಸಂಬಂಧಿತ ವ್ಯಕ್ತಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾದಲ್ಲಿ ಅಂತಹ ಕಂಟೆಂಟ್ ಗಳನ್ನು ತೆಗೆದು ಹಾಕುವ ಮತ್ತು ತಿದ್ದುಪಡಿ ಮಾಡುವ ಅಧಿಕಾರವು ಸಚಿವಾಲಯಕ್ಕೆ ಇರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಸಿದ್ಧಪಡಿಸುತ್ತಿರುವ ‘ಬ್ರಾಡ್ ಕಾಸ್ಟಿಂಗ್ ಸೇವೆಗಳ ನಿಯಂತ್ರಣ ವಿಧೇಯಕ 2024’ರ ಮೂಲಕ ಡಿಜಿಟಲ್ ಮಾಧ್ಯಮಗಳನ್ನು ಟೆಲಿವಿಷನ್ ಮಾಧ್ಯಮಗಳಂತೆ ನಿಯಂತ್ರಿಸುವ ದಿಕ್ಕಿನತ್ತ ಗಮನಹರಿಸಿದೆ.
ಆದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಸೀಮಿತಗೊಳಿಸುವ, ಆ ಮೂಲಕ ಡಿಜಿಟಲ್ ವೇದಿಕೆಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಸಾಧ್ಯತೆಯಿದ್ದು, ಇದರಿಂದಾಗಿ ಸ್ವತಂತ್ರ ಧ್ವನಿಗಳು ಕುಂಠಿತವಾಗುವ ಪರಿಸ್ಥಿತಿ ಎದುರಾಗಲಿದೆ ಎನ್ನುವ ಅಭಿಪ್ರಾಯಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ತಪ್ಪು ಮಾಹಿತಿ ಮತ್ತು ದ್ವೇಷದ ಭಾಷಣವನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದ್ದರೂ ಅದೇ ಸಂದರ್ಭದಲ್ಲಿ ನಿರ್ಭೀತ ವಾಕ್ ಸ್ವಾತಂತ್ರ್ಯವನ್ನು ಕಾಪಾಡುವುದು ಹೇಗೆ ಎನ್ನುವುದು ಒಂದು ಮಹತ್ವದ ಪ್ರಶ್ನೆಯಾಗಿ ಸರ್ಕಾರ ಮತ್ತು ಸಾರ್ವಜನಿಕರನ್ನು ಕಾಡುತ್ತಿದೆ.








