ಕರಾವಳಿ ಟಾಪ್ ನ್ಯೂಸ್
• ಕಡಬ: ಅಕ್ರಮ ಜಾನುವಾರು ಸಾಗಾಟ; ಪತ್ತೆ ಹಚ್ಚಿದ ಪೊಲೀಸರು
• ಉಡುಪಿ: ಇಬ್ಬರು ಆರೋಪಿಗಳ ಗಡಿಪಾರು
• ಮಂಗಳೂರು: ಮೀನು ಹಿಡಿಯಲು ಹೋಗಿದ್ದ ಯುವಕರ ಪೈಕಿ ಓರ್ವ ನಾಪತ್ತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕಡಬ: ಅಕ್ರಮ ಜಾನುವಾರು ಸಾಗಾಟ; ಪತ್ತೆ ಹಚ್ಚಿದ ಪೊಲೀಸರು
ಕಡಬ: ಹಾಸನದಿಂದ ಕೇರಳದ ಕಡೆಗೆ ಕಂಟೇನರ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ ಘಟನೆ, ಕನ್ವರೆ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರ ನೇತೃತ್ವದ ತಂಡವು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಇಬ್ಬರಲ್ಲಿ ಓರ್ವ ಪರಾರಿಯಾಗಿದ್ದು, ಮತ್ತೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಬಲೆಗೆ ಸಿಲುಕಿದ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ತನಿಖೆಯ ಬಳಿಕ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
• ಉಡುಪಿ: ಇಬ್ಬರು ಆರೋಪಿಗಳ ಗಡಿಪಾರು
ಉಡುಪಿ: ಇಬ್ಬರು ಆರೋಪಿಗಳ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಡಿಪಾರು ಆದೇಶವನ್ನು ಹೊರಡಿಸಿರುವ ಸಂಗತಿ ಶುಕ್ರವಾರದಂದು ನಡೆದಿದೆ. ಆರೋಪಿ ಉದ್ಯಾವರ ಗ್ರಾಮದ ಪಿತ್ರೋಡಿಯ ವಿಜೇತನ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಸೇರಿದಂತೆ ಒಟ್ಟು ನಾಲ್ಕು ಪ್ರಕರಣಗಳು, ಎಲ್ಲೂರು ಗ್ರಾಮದ ಮುದರಂಗಡಿಯ ಆರಿಫ್ ಸಾಹೇಬ್ ವಿರುದ್ಧ ಕೊಲೆ ಯತ್ನ, ಹಲ್ಲೆ, ಮಾದಕ ಸೇವನೆ ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದು, ಆತನ ಮೇಲೆ ರೌಡಿಶೀಟರ್ ಸಹ ತೆರೆಯಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ವಿಜೇತನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಹಾಗೂ ಆರಿಫ್ ಸಾಹೇಬ್ ನನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಮಂಗಳೂರು: ಮೀನು ಹಿಡಿಯಲು ಹೋಗಿದ್ದ ಯುವಕರ ಪೈಕಿ ಓರ್ವ ನಾಪತ್ತೆ
ಮಂಗಳೂರು: ಫಲ್ಗುಣಿ ನದಿಗೆ ಮೀನು ಹಿಡಿಯಲು ಹೋಗಿದ್ದ ಮೂವರು ಯುವಕರ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ, ಗುರುವಾರದಂದು ಕಾವೂರು ಕುಂಜತ್ತಬೈಲ್ ನಲ್ಲಿ ನಡೆದಿದೆ. ಮೀನು ಹಿಡಿಯುವ ಸಲುವಾಗಿ ಮೂವರು ಸ್ನೇಹಿತರು ಸಣ್ಣ ದೋಣಿಯೊಂದರಲ್ಲಿ ಫಲ್ಗುಣಿ ನದಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ದೋಣಿಯು ಆಯಾ ತಪ್ಪಿ ಮಗುಚಿ ಬಿದ್ದಿದೆ. ಪರಿಣಾಮವಾಗಿ ಮೂವರು ನೀರಿಗೆ ಬಿದ್ದಿದ್ದು, ನಿತೇಶ್ ಎನ್ನುವವರು ಈಜಿ ದಡ ಸೇರಿದ್ದು, ಈಜು ಬಾರದ ಗಣೇಶ್ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಯಲ್ ಎನ್ನುವವರು ನೀರಿನಲ್ಲಿ ಮುಳುಗಿದ್ದು, ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಗಣೇಶ್ ಅವರ ಮೃತದೇಹ ಕಂಡುಬಂದಿದ್ದು, ರಾಯಲ್ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಶೋಧನಾ ಕಾರ್ಯವನ್ನು ಮುಂದುವರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ರಾಯಲ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅವನ ಮೃತದೇಹ ಕೂಡ ಪತ್ತೆಯಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.







