ಹಾಸನ ರೈಲ್ವೇ ಮೇಲ್ಸೇತುವೆ ಕಾಮಗಾರಿ ಚುರುಕು: ವರ್ಷಾಂತ್ಯಕ್ಕೆ ಪೂರ್ಣ ಸಾಧ್ಯತೆ
* ತನ್ನ ಪಾಲಿನ ಅನುದಾನ ನೀಡಲು ಸಾಧ್ಯವಿಲ್ಲ ಎಂದಿದ್ದ ರಾಜ್ಯಸರ್ಕಾರ
* ಆಮೆ ಗತಿಯಲ್ಲಿದ್ದ ಕಾಮಗಾರಿಗೆ ವೇಗ ಹೆಚ್ಚಿಸಿದ ಸಂಸದ ಶ್ರೇಯಸ್ ಪಟೇಲ್
NAMMMUR EXPRESS NEWS
ಹಾಸನ: ಕಳೆದ ಏಳು ವರ್ಷದಿಂದ ಆಮೆ ಗತಿಯಲ್ಲಿ ಸಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕೊನೆಗೂ ವೇಗ ದೊರೆತಿದ್ದು, ಹಾಸನಾಂಬ ಉತ್ಸವದ ವೇಳೆಗೆ ಅಥವಾ ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ನಗರದ ಹೃದಯಭಾಗ ಎನ್ ಆರ್ ವೃತ್ತ ಹಾಗೂ ಹೊಸ ಬಸ್ನಿಲ್ದಾಣ ನಡುವೆ 98 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾದ ರೈಲ್ವೆ ಮೇಲ್ಸೇತುವೆ ಮತ್ತೊಂದು ಭಾಗದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿತ್ತು. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಲು ಸಾಧ್ಯವಿಲ್ಲ ಎಂಬ ನಿರ್ಧಾರದೊಂದಿಗೆ ಕೇಂದ್ರ ಸರ್ಕಾರವೇ ಮಾಡಲಿ ಎಂದು ಪತ್ರ ಬರೆದು ಕೈತೊಳೆದುಕೊಂಡಿತ್ತು. ರಾಜ್ಯ ಸರ್ಕಾರ ಹಣ ನೀಡಲು ನಿರಾಕರಿಸಿದ ಪರಿಣಾಮ ಮೇಲ್ಸೇತುವೆಯ ಇನ್ನೊಂದು ಭಾಗದ ಕಾಮಗಾರಿ ಎರಡು ವರ್ಷದಿಂದ ಸ್ಥಗಿತಗೊಂಡು ಕಬ್ಬಿಣ ತುಕ್ಕು ಹಿಡಿಯುವ ಜತೆಗೆ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿತ್ತು.
* ಯೋಜನೆ ವೆಚ್ಚ ಹೆಚ್ಚಳ,ಮಾ.2022 ಕ್ಕೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ
2018 ರ ವಿಧಾನಸಭೆ ಚುನಾವಣೆಗೂ ಮುನ್ನ 72 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭವಾದ ಮೇಲ್ಸೇತುವೆ ಕಾಮಗಾರಿ ಮಾ.2022ಕ್ಕೆ ಪೂರ್ಣಗೊಳ್ಳಬೇಕಿತ್ತು. ಯೋಜನಾ ವೆಚ್ಚ 98 ಕೋಟಿ ರೂ.ಗೆ ಹೆಚ್ಚಳವಾದರೂ, ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ.
ಎನ್ ಆರ್ ವೃತ್ತದಿಂದ ಚನ್ನಪಟ್ಟಣದ ಹೊಸ ಕೋರ್ಟ್ವರೆಗಿನ 21 ಮೀಟರ್ ಉದ್ದದ ಮೇಲ್ವೇತುವೆ ಹಾಗೂ ಕೆಳಭಾಗದಲ್ಲಿ ಸರ್ವಿಸ್ ರಸ್ತೆ 18 ಮೀಟರ್ ಅಗಲದ ವಿಸ್ತೀರ್ಣ ಹೊಂದಲಿದ್ದು, ಚತುಷ್ಪಥದ ಮೇಲ್ಸೇತುವೆಗಿಂತ ಹೆಚ್ಚಿನ ವಿಸ್ತೀರ್ಣವಾಗಲಿದೆ. ಹೀಗಾಗಿ ಎನ್ ಆರ್ ವೃತ್ತದಿಂದ ಹೊಸ ಬಸ್ನಿಲ್ದಾಣ ರಸ್ತೆ ನಡುವೆ ಹಾದುಹೋಗಿರುವ ರೈಲ್ವೆ ಮಾರ್ಗದಲ್ಲಿ ಗೇಟ್ ಹಾಕಿದ ಸಂದರ್ಭ ಉಂಟಾಗುತ್ತಿದ್ದ ಸಮಸ್ಯೆಗೆ ರೈಲ್ವೆ ಮೇಲ್ಸೇತುವೆ ಪರಿಹಾರ ಎಂಬ ನಿರೀಕ್ಷೆಯಲ್ಲೇ ಜನ ಕಾಯುತ್ತಿದ್ದಾರೆ.
* ಕೇಂದ್ರ ಸಚಿವರಿಗೆ ಮನವಿ,ಕಾಮಗಾರಿ ವೇಗ ಹೆಚ್ಚಿಸಿದ ಸಂಸದ ಶ್ರೇಯಸ್ ಪಟೇಲ್
ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಮಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಇರುವ ಅಡೆತಡೆ ನಿವಾರಿಸಿ ಅನುದಾನ ಕೊಡುವಂತೆ ಕೋರಿದ್ದರು. ಜೆಡಿಎಸ್ ಸಹ 2024ರ ಜು.17ರಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಹಾಸನಕ್ಕೆ ಆಹ್ವಾನಿಸಿ ಕಾಮಗಾರಿ ವೀಕ್ಷಣೆಗೆ ಕರೆದೊಯ್ದು ಸಮಸ್ಯೆ ವಿವರಿಸಿತ್ತು. ಇಷ್ಟೆಲ್ಲ ಪ್ರಯತ್ನದ ಬಳಿಕ ಕಾಮಗಾರಿ ಒಂದಿಷ್ಟು ವೇಗ ಪಡೆದುಕೊಂಡಿದೆ.
ಬಸ್ ನಿಲ್ದಾಣಕ್ಕೆ ಹಾಗೂ ಚನ್ನಪಟ್ಟಣ ಬಡಾವಣೆ ಕಡೆಗೆ ತೆರಳುವ ಜನ ರೈಲ್ವೆ ಹಳಿ ದಾಟಿಯೂ ತೆರಳುತ್ತಿದ್ದಾರೆ. ಗೂಡ್ಸ್ ಇಲ್ಲವೇ ರೈಲು ಬರುವ ಮುನ್ನವೇ ರೈಲ್ವೆ ಗೇಟ್ ಹಾಕಿ ವಾಹನ ಸಂಚಾರಕ್ಕೆ ತಡೆಯೊಡ್ಡುವುದರಿಂದ ತೀವ್ರ ಸಮಸ್ಯೆಯಾಗುತ್ತಿದೆ.
ಈ ಸಮಸ್ಯೆ ನಿವಾರಣೆ ಆಗಬೇಕೆಂದರೆ ಉಳಿದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡಲ್ಲಿ ಎನ್ ಆರ್ ವೃತ್ತ ಹಾಗೂ ಬಿ ಎಂ ರಸ್ತೆಯಲ್ಲಿ ವಾಹನ ದಟ್ಟಣೆ ಅಷ್ಟರ ಮಟ್ಟಿಗೆ ತಗ್ಗುತ್ತದೆ.
ರೈಲ್ವೆ ಮೇಲ್ಸೇತುವೆಗೆ ಎದುರಾಗಿದ್ದ ಎಲ್ಲಾ ಅಡಚಣೆಯನ್ನು ನಿವಾರಿಸಿ ಕಾಮಗಾರಿಗೆ ವೇಗ ನೀಡಲಾಗಿದೆ. ಈ ವರ್ಷದ ಅಂತ್ಯದ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್.







