ಸ್ಕ್ರೀಮ್ ಆಮಿಷಕ್ಕೆ ಮುಗ್ದರ ಕೋಟಿ ಕೋಟಿ ಹಣ ಹೋಯ್ತು!
– ಜನರ 3 ಕೋಟಿ ನುಂಗಿದ ವಂಚಕರು: ಹೊಸನಗರದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು
– ಸ್ಕ್ರೀಮ್ ಗಳಿಗೆ ಹಣ ಹಾಕುವ ಮುನ್ನ ಎಚ್ಚರ ಎಚ್ಚರ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು/ಕರಾವಳಿ: ಜನರಿಗೆ ಆಸೆ ಹುಟ್ಟಿಸಿ. ಗೃಹ ಉಪಯೋಗಿ ಸ್ಕೀಮ್ ಹೆಸರಲ್ಲಿ ಜನರಿಗೆ ವಂಚನೆ ಮಾಡುವ ಪ್ರಕರಣ ಹೆಚ್ಚಾಗಿದೆ. ಈ ನಡುವೆ ಕಡಿಮೆ ಹೂಡಿಕೆ, ಬಂಪರ್ ಬಹುಮಾನ ಎಂದು ಬಹುತೇಕರನ್ನು ವಂಚಿಸಿದ ಘಟನೆ ನಡೆದಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಇಂತಹ ಅನೇಕ ಸ್ಕ್ರೀಮ್ ಕೆಲಸ ಮಾಡುತ್ತಿವೆ. ಆಮಿಷಗಳಿಗೆ ಬಲಿಯಾಗಿ ರಾಜ್ಯದಲ್ಲಿ ಸಾವಿರಾರು ಜನರು ಕಷ್ಟಪಟ್ಟು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ತಿಂಗಳ ಕಂತು ಕಟ್ಟಿ ವರ್ಷ ಕಳೆದರೂ ಅನೇಕರಿಗೆ ದುಡ್ಡು ಬರಲಿಲ್ಲ, ಬಹುಮಾನವೂ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಹೊಸನಗರ ಮತ್ತು ಉಡುಪಿ ಭಾಗದಲ್ಲಿ ಬೆಳಕಿಗೆ ಬಂದಿರುವ ‘ ಗ್ರೂಪ್ನ 3 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. “ಅಲ್ಪ ಹೂಡಿಕೆ, ಬಂಪರ್ ಲಾಭ” ಎಂಬ ಮರೀಚಿಕೆಯ ಬೆನ್ನೇರಿ ಹೋದ ಸಾವಿರಾರು ಮುಗ್ಧರು ಇದೀಗ ಬೀದಿಗೆ ಬಿದ್ದಿದ್ದಾರೆ. ಗೃಹೋಪಯೋಗಿ ವಸ್ತುಗಳು ಹಾಗೂ ಆಕರ್ಷಕ ಬಹುಮಾನದ ಆಮಿಷವೊಡ್ಡಿ ಬರೋಬ್ಬರಿ 3 ಕೋಟಿ ರೂಪಾಯಿಗಳಿಗೂ ಅಧಿಕ ಹಣವನ್ನು ಉಡುಪಿ ಮೂಲದ ವಂಚನಾ ಜಾಲ ಕೊನೆಗೂ ಬಯಲಾಗಿದೆ. ಪ್ರಕರಣದ ಪ್ರಮುಖ ರೂವಾರಿ ಅಬ್ದುಲ್ ರಜಾಕ್ನನ್ನು ಹೊಸನಗರ ಪೊಲೀಸರು ಬಂಧಿಸಿದ್ದು, ಠಾಣೆಯ ಮುಂದೆ ವಂಚನೆಗೊಳಗಾದ ನೂರಾರು ಜನರು ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ.
ಏನಿದು ಘಟನೆ?
ಉಡುಪಿ ಜಿಲ್ಲೆಯ ಉಚ್ಚಿಲ ಬಾಡದ ನಿವಾಸಿಗಳಿಬ್ಬರು ಸೇರಿ ಜನರನ್ನು ಯಾಮಾರಿಸಲು 13, 16 ಮತ್ತು 21 ತಿಂಗಳ ಆಕರ್ಷಕ ಸ್ಕೀಮ್ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು. ಗ್ರಾಹಕರು ಪ್ರತಿ ತಿಂಗಳು ಕೇವಲ 1,000 ರೂ. ಕಂತು ಕಟ್ಟಿದರೆ ಸಾಕು, ಸ್ಕೀಮ್ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ ಬೆಲೆಬಾಳುವ ಬಹುಮಾನ ಮತ್ತು ನಗದು ನೀಡುವುದಾಗಿ ನಂಬಿಸಿದ್ದರು. ಗ್ರಾಹಕರನ್ನು ಕರೆತರುವ ಏಜೆಂಟರಿಗೆ ಪ್ರತಿ ಕಾರ್ಡ್ಗೆ ತಲಾ 300 ರೂ. ಭರ್ಜರಿ ಕಮಿಷನ್ ಕೊಡುವ ಆಮಿಷವೊಡ್ಡಿ ಇಡೀ ಜಾಲವನ್ನು ರಾಜ್ಯಾದ್ಯಂತ ವಿಸ್ತರಿಸಿದ್ದರು.
ಕಮಿಷನ್ ಆಸೆಗೆ ಬಿದ್ದು 24 ಲಕ್ಷ ಕಳೆದುಕೊಂಡ ಯುವಕ!
ಹೊಸನಗರ ತಾಲೂಕಿನ ಹಳೇ ಸಾಗರ ರಸ್ತೆಯ ದ್ರಾವರ್ಸ ನಿವಾಸಿ 27 ವರ್ಷದ ಯುವಕ ನಿಹಾಲ್, ಈ ವಂಚಕರ ಜೇನುತುಪ್ಪದ ಮಾತಿಗೆ ಮರುಳಾದವರಲ್ಲಿ ಒಬ್ಬ. 2023ರ ಮೇ ತಿಂಗಳಿನಿಂದ ಈ ಸ್ಕೀಮ್ಗೆ ಏಜೆಂಟ್ ಆಗಿ ಸೇರಿದ ಈತ, ಕಮಿಷನ್ ಆಸೆಗೆ ಬಿದ್ದು ತನ್ನ ಸ್ನೇಹಿತರು ಹಾಗೂ ಪರಿಚಯಸ್ಥರಾದ ಬರೋಬ್ಬರಿ 150 ಜನರನ್ನು ಈ ಖೆಡ್ಡಾಗೆ ಕೆಡವಿದ್ದ.ಗ್ರಾಹಕರಿಂದ ಕಂತಿನ ರೂಪದಲ್ಲಿ ಸಂಗ್ರಹಿಸಿದ ಒಟ್ಟು 24 ಲಕ್ಷ ರೂ. ಹಣವನ್ನು ಆರೋಪಿಗಳ ಫೋನ್ ಪೇ ಖಾತೆಗಳಿಗೆ ನಿಯತ್ತಾಗಿ ಜಮಾ ಮಾಡಿದ್ದ. ಆದರೆ, ದಿನಾಂಕ 04/05/2025 ರಂದು ಸ್ಕೀಮ್ ಮುಕ್ತಾಯಗೊಂಡರೂ ಆರೋಪಿಗಳು ಕವಡೆ ಕಾಸು ಕೂಡ ವಾಪಸ್ ನೀಡದೆ ಸತಾಯಿಸಲು ಶುರುಮಾಡಿದರು. ಇತ್ತ ಹಣ ಕಳೆದುಕೊಂಡ ಗ್ರಾಹಕರು ಏಜೆಂಟ್ ನಿಹಾಲ್ ಮನೆಗೆ ಮುತ್ತಿಗೆ ಹಾಕಿ, ಹಿಂಸೆ ನೀಡತೊಡಗಿದ್ದರಿಂದ, ದಿಕ್ಕುತೋಚದ ಆತ ಮಾನಸಿಕವಾಗಿ ಜರ್ಜರಿತನಾಗಿ ಕಡೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
1960ಕ್ಕೂ ಹೆಚ್ಚು ಜನರಿಗೆ ಮೋಸ!
ಠಾಣೆ ಮುಂದೆ ಹೈಡ್ರಾಮಾ ದೂರುದಾರ ನಿಹಾಲ್ ನೀಡಿದ ಮಾಹಿತಿಯಂತೆ, ಇದು ಕೇವಲ 24 ಲಕ್ಷದ ವಂಚನೆಯಲ್ಲ. ನಿಹಾಲ್ನಂತೆಯೇ ಕಮಿಷನ್ ಆಸೆಗೆ ಬಿದ್ದ ಇತರೆ 7-8 ಏಜೆಂಟರುಗಳು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಆಯಾನ್ ಗ್ರೂಪ್ಗೆ ಸುರಿದಿದ್ದಾರೆ. ಬರೋಬ್ಬರಿ 1960ಕ್ಕೂ ಹೆಚ್ಚು ಮುಗ್ಧ ಜನರಿಗೆ ಈ ಜಾಲ ವಂಚಿಸಿದ್ದು, ಲೂಟಿ ಹೊಡೆದ ಒಟ್ಟು ಮೊತ್ತ 3 ಕೋಟಿ ರೂಪಾಯಿ ದಾಟಿದೆ.
ಆರೋಪಿ ಸೆರೆ, ಭುಗಿಲೆದ್ದ ಆಕ್ರೋಶ:
ಪ್ರಕರಣ ದಾಖಲಿಸಿಕೊಂಡ ಹೊಸನಗರ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶನಿವಾರ (ಮಾ. 28) ಪ್ರಮುಖ ಆರೋಪಿ ಅಬ್ದುಲ್ ರಜಾಕ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಂಚಕನ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ರೊಚ್ಚಿಗೆದ್ದ ನೂರಾರು ಹೂಡಿಕೆದಾರರು ಹೊಸನಗರ ಪೊಲೀಸ್ ಠಾಣೆಯ ಮುಂದೆ ದಿಢೀರ್ ಜಮಾಯಿಸಿದರು.
ಸಾರ್ವಜನಿಕರಿಗೊಂದು ಎಚ್ಚರಿಕೆಯ ಗಂಟೆ
ಯಾವುದೇ ಶ್ರಮವಿಲ್ಲದೆ, ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಬಿತ್ತುವ ಇಂತಹ ನಕಲಿ ಸ್ಕೀಮ್ಗಳಿಗೆ ಸಾರ್ವಜನಿಕರು ಮತ್ತೆ ಮತ್ತೆ ಬಲಿಯಾಗುತ್ತಿರುವುದು ದುರಂತ. ಯಾವುದೇ ಅಧಿಕೃತ ಮಾನ್ಯತೆ (RBI Approval) ಇಲ್ಲದ, ಕೇವಲ ಬಾಯಿ ಮಾತಿನ ಆಮಿಷವೊಡ್ಡುವ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬುದಕ್ಕೆ ಈ ‘ಆಯಾನ್ ಗ್ರೂಪ್‘ ಪ್ರಕರಣವೇ ಕನ್ನಡಿಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ಶೇಕ್ ಮಹಮ್ಮದ್ ಫಜಲ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
– ವರದಿ ಮಾಹಿತಿ: ರಫಿ ರಿಪ್ಪನ್ ಪೇಟೆ








