ಗಬ್ಬಾನೆ ಕ್ಷೇತ್ರದಲ್ಲಿ ಜಾತ್ರಾ ಸಂಭ್ರಮ!
– ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಭವ್ಯ ರಥೋತ್ಸವ
– ಭಕ್ತಸಾಗರದ ನಡುವೆ ಜರುಗಿದ ಜಾತ್ರಾ ಮಹೋತ್ಸವ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಬ್ಬಾನೆಯಲ್ಲಿ ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವವು ಶ್ರದ್ಧಾಭಕ್ತಿ ಹಾಗೂ ಸಡಗರದೊಂದಿಗೆಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಮಲೆನಾಡಲ್ಲೇ ಕಾರಣಿಕ ದೇವಾಲಯ ಇದಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಸನ್ನಿಧಿಯಲ್ಲಿ ಪಂಚಲಿಂಗೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಗಣಪತಿ ಪೂಜೆ ಸೇರಿದಂತೆ ವಿವಿಧ ಹೋಮ-ಹವನಗಳು ನಡೆದವು. ಅರ್ಚಕ ವೃಂದದವರಿಂದ ಮಂತ್ರಘೋಷಗಳ ನಡುವೆ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.
ಉತ್ಸವ ಮೂರ್ತಿಯನ್ನು ಮಂಟಪದಿಂದ ಮೆರವಣಿಗೆಯ ಮೂಲಕ ತಂದು, ಹೂವುಗಳಿಂದ ಅಲಂಕೃತಗೊಂಡಿದ್ದ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನದ ಶುಭ ಮುಹೂರ್ತದಲ್ಲಿ ನೆರೆದಿದ್ದ ಸಾವಿರಾರು ಭಕ್ತರ “ಹರ ಹರ ಮಹಾದೇವ“, “ಶಂಭೋ ಶಂಕರ” ಎಂಬ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥದ ಹಗ್ಗ ಹಿಡಿದು ಎಳೆದು ಪುನೀತರಾದರು. ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಹಣ್ಣು-ಜವನ ಎಸೆದು ಭಕ್ತಿಯ ಪರಾಕಾಷ್ಠೆ ಮೆರೆದರು. ಮಲೆನಾಡಿನ ಹಸಿರು ಸಿರಿಯ ನಡುವೆ ಸಾಗಿದ ರಥದ ದೃಶ್ಯ ಕಣ್ಮನ ಸೆಳೆಯುವಂತಿತ್ತು.
ಹರಿದುಬಂದ ಭಕ್ತಸಾಗರ!
ಕೊಪ್ಪ ತಾಲೂಕು ಸೇರಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗಾಗಿ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಗೃಹೋಪಯೋಗಿ ವಸ್ತುಗಳು, ಆಟಿಕೆಗಳು ಮತ್ತು ಸಿಹಿತಿಂಡಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಸ್ಥಳೀಯ ಜಾನಪದ ಕಲಾತಂಡಗಳ ಪ್ರದರ್ಶನ ಮತ್ತು ಭಜನಾ ಕಾರ್ಯಕ್ರಮಗಳು ವಿಶೇಷ ಆಕರ್ಷಣೆಯಾಗಿದ್ದವು. ಕ್ಷೇತ್ರದ ಪಾವಿತ್ರ್ಯತೆ ಮತ್ತು ಸಾಂಪ್ರದಾಯಿಕ ವೈಭವವನ್ನು ಎತ್ತಿ ಹಿಡಿಯುವಲ್ಲಿ ಈ ವರ್ಷದ ಗಬ್ಬಾನೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ ಎಂದು ಸ್ಥಳೀಯರು ಹರ್ಷ ವ್ಯಕ್ತಪಡಿಸಿದರು.








