ಹುಲಿ ಉಗುರು: ಅರಿವು ಮೂಡಿಸದೇ ಅರೆಸ್ಟ್ ತಪ್ಪು!
– ಸುಧೀರ್ ಕುಮಾರ್ ಮುರೊಳ್ಳಿ ಹೇಳಿಕೆ
– ಹಳ್ಳಿ ಮನೆಗಳಲ್ಲಿ ನೂರಾರು ವರ್ಷಗಳ ನೆನಪು ಅಂತ ಇಟ್ಟುಕೊಂಡಿದ್ದಾರೆ!
NAMMUR EXPRESS NEWS
ಕೊಪ್ಪ: ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ವಕ್ತಾರ, ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಅವರು ಮಾತನಾಡಿದ್ದು, ಹುಲಿ ಉಗುರು ಇತರೆ ಪ್ರಾಣಿ ಉತ್ಪನ್ನ ಬಳಕೆ, ನಿಷೇಧ, ಶಿಕ್ಷೆ ಬಗ್ಗೆ ಜನರಿಗೆ ಅರಿವು ಮೂಡಿಸದೇ ಅರೆಸ್ಟ್ ತಪ್ಪು ಎಂದು ಹೇಳಿದ್ದಾರೆ. ಸುಧೀರ್ ಕುಮಾರ್ ಮುರೊಳ್ಳಿ ಪತ್ರಿಕಾಗೋಷ್ಠಿ ವೇಳೆ ಮಾತನಾಡಿ, ಹುಲಿ ಉಗುರು, ಚರ್ಮ,ದಂತ,ಜಿಂಕೆಯ ತಲೆ ಹೀಗೆ ಇದಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧವಾಗಿರುತ್ತದೆ.
ಇದೀಗ ಅರಣ್ಯ ಅಧಿಕಾರಿಗಳು ಹಲವು ಕಡೆ ಸೆಲೆಬ್ರಿಟಿಗಳನ್ನು,ಮಠಾಧೀಶರನ್ನ ಅರ್ಚಕರ ಮನೆಗಳ ಶೋಧ ನಡೆಸಿ ಕೆಲವರನ್ನು ಬಂಧಿಸಿರುವುದು ಬೆಳಕಿಗೆ ಬಂದಿದೆ. ಆದರೆ ಅರಣ್ಯ ಇಲಾಖೆಯವರು ಗಮನಿಸಬೇಕಾದ ವಿಚಾರವೆಂದರೆ ಈ ಹಳ್ಳಿ ಭಾಗದಲ್ಲಿ ಹಲವಾರು ಮನೆಗಳಲ್ಲಿ ನೂರಾರು ವರ್ಷಗಳ ಹಿಂದಿನ ಜಿಂಕೆಯ ತಲೆ, ಕಾಡುಕೋಣದ ತಲೆ ಹೀಗೆ ಹಲವು ವಸ್ತುಗಳನ್ನು ಹವ್ಯಾಸದಿಂದಾಗಿ ಹಾಗೂ ಪೂರ್ವಜರ ಕಾಲದ ವಸ್ತುಗಳು ಎಂದು ನೆನಪಿನಲ್ಲಿಟ್ಟುಕೊಳ್ಳವ ದೃಷ್ಟಿಯಿಂದ ಇಂದು ಕೂಡ ಹಲವು ಮನೆಗಳಲ್ಲಿ ಹಲವು ರೀತಿಯ ಪ್ರಾಣಿಗಳ ವಸ್ತುಗಳು ಇವೆ.
ಅರಣ್ಯಾಧಿಕಾರಿಗಳು ಏಕಾಏಕಿ ಈ ವಸ್ತುಗಳನ್ನು ಸಂಗ್ರಹಿಸಿ ಅವರುಗಳನ್ನು ಬಂಧಿಸುವ ಬದಲು ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅರಣ್ಯ ಕಾಯ್ದೆಯ ಪ್ರಕಾರ ಅಪರಾಧ ಎಂದು ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮೊದಲು ಮುಂದಾಗಬೇಕು ಎಂದು ಹೇಳಿದ್ದಾರೆ.







