ಕಣ್ಣು ಕಾಣದ ಹುಡುಗಿ ವಿಶ್ವಕಪ್ ಗೆಲ್ಲಿಸಿದಳು..!
– ಭಾರತ ಅಂಧರ ವಿಶ್ವ ಕಪ್ ಗೆಲ್ಲಿಸಿದ ಆಲ್ ರೌಂಡರ್ ಕಾವ್ಯ ರಿಪ್ಪಿನಪೇಟೆ
– ಪ್ರಧಾನಿ, ಸಿಎಂ ಸೇರಿ ಎಲ್ಲರಿಂದ ಸಿಹಿ ತಿನಿಸಿ ಸಂಭ್ರಮ
‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು’ ಎನ್ನುವ ಗೀತೆ ಹಲವರ ಬದುಕಿಗೆ ಪ್ರೇರಣೆ ನೀಡಿದರೆ, ಆ ಹಾಡಿನ ಸಾಲುಗಳಂತೆ ಬದುಕುವ ಮೂಲಕ ಕೆಲವು ವ್ಯಕ್ತಿತ್ವಗಳು ಬೇರೆಯವರಿಗೆ ಮಾದರಿಯಾಗಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಇಂಡಿಯಾ ಅಂಧರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಭಾರತ ಅಂಧರ ವಿಶ್ವ ಕಪ್ ಗೆಲ್ಲುವ ಸಾಧನೆ ಮಾಡಿದ ಕಾವ್ಯ ವಿ ಈಗ ಸುದ್ದಿಯಲ್ಲಿದ್ದಾರೆ.
ಐವರು ಹೆಣ್ಣು ಮಕ್ಕಳ ಕುಟುಂಬ!
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಎನ್ನುವ ಸಣ್ಣ ಊರಿನ ಒಂದು ಭಾಗವಾದ ಬರುವೆ ಎಂಬ ಗ್ರಾಮದಲ್ಲಿ ವೆಂಕಟೇಶ್ ಆಚಾರ್ಯ ಮತ್ತು ಜಯ ಅವರ ಪುತ್ರಿಯಾಗಿ ಜನಿಸಿದ ಕಾವ್ಯ ಅವರು ಜನ್ಮಜಾತವಾಗಿ ಕಣ್ಣಿನ ದೋಷವನ್ನು ಹೊಂದಿದವರು. ಐವರು ಹೆಣ್ಣು ಮಕ್ಕಳಿಂದ ತುಂಬಿರುವ ಬಡ ಕುಟುಂಬವನ್ನು, ವೆಂಕಟೇಶ್ ಮತ್ತು ಜಯ ಅವರು ತಮ್ಮ ಶ್ರಮಭರಿತ ದುಡಿಮೆಯಿಂದ ಕಟ್ಟಿದರು. ನಾಲ್ವರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಬೆಳೆಸಿದರು. ಆದರೆ ಕಷ್ಟಪಡುವವರಿಗೇ ನೋವು ಜಾಸ್ತಿ ಎನ್ನುವಂತೆ ಐವರು ಹೆಣ್ಣು ಮಕ್ಕಳಲ್ಲಿ ಒಬ್ಬಳಾದ ಕಾವ್ಯಾಳಿಗೆ ಎದುರಾಗಿರುವ ಕಣ್ಣಿನ ಸಮಸ್ಯೆಯಿಂದಾಗಿ ಉತ್ತಮ ಭವಿಷ್ಯ ನೀಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕೊರಗು ವೆಂಕಟೇಶ್ ದಂಪತಿಗಳಿಗೆ ಸದಾ ಕಾಡುತ್ತಿತ್ತು.
ಅಂಧರ ಶಾಲೆಯಲ್ಲಿ ಓದಿ ಸಾಧನೆ
ರಿಪ್ಪನ್ ಪೇಟೆಯ ಬರುವೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾವ್ಯಾಳಿಗೆ ಕಣ್ಣಿನ ದೋಷದಿಂದಾಗಿ ಬರಬರುತ್ತ ಓದು ಬಹಳ ಕಷ್ಟದಾಯಕವಾಯಿತು. ಆಕೆಯ ಸಮಸ್ಯೆಯನ್ನು ಅರಿತ ಗರ್ತಿಕೆರೆ ಶಾಲೆಯ ಶಿಕ್ಷಕಿಯಾದ ಪೂರ್ಣಿಮಾ ಅವರು ಕಾವ್ಯಾಳ ತಂದೆ ತಾಯಿಗಳಿಗೆ ತಿಳಿಸಿ, ಶಿವಮೊಗ್ಗದ ಗೋಪಾಳ ಬಡಾವಣೆಯಲ್ಲಿರುವ ಶಾರದಾ ಅಂಧರ ವಿಕಾಸ ಶಾಲೆಗೆ ದಾಖಲಿಸಿದರು. ಐದನೇ ತರಗತಿಯಿಂದ ಕಾವ್ಯ ಶಾರದಾ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿನಿಯಾಗಿ 2009ರಿಂದ 2015ರ ವರೆಗೆ ವಿದ್ಯಾಭ್ಯಾಸ ನಡೆಸಿದರು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಕಾವ್ಯಾಳಿಗೆ ಅಲ್ಲಿನ ಶಿಕ್ಷಕರಾದ ಸುರೇಶ್ ಮತ್ತು ಈಶ್ವರ್ ಅವರು ಉತ್ತೇಜನ ನೀಡಿ ಆಕೆಯ ಜೀವನದಲ್ಲಿ ಸ್ಪೂರ್ತಿದಾಯಕ ವ್ಯಕ್ತಿಗಳಾದರು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನತ್ತ ಪಯಣ ಬೆಳೆಸಿದ ಕಾವ್ಯ ಅವರು, ಬೆಂಗಳೂರಿನ ಸಮರ್ಥನಂ ಅಂಧರ ವಿಕಾಸ ಕೇಂದ್ರದಲ್ಲಿ ಬಿ.ಎ. ಪದವಿಯನ್ನು ಪಡೆದುಕೊಂಡರು. ಪ್ರಸ್ತುತ ಜ್ಞಾನ ಭಾರತಿ ಎಜುಕೇಶನ್ ಸೊಸೈಟಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾರೆ.
ಕ್ರೀಡೆ ಆಸೆ ಚಿಗುರು ಒಡೆಯಿತು…!
ಬೆಂಗಳೂರಿನಲ್ಲಿ ನೆಲೆಸಿದ ಕಾವ್ಯಾಳಿಗೆ ತನ್ನ ಕ್ರೀಡಾಸಕ್ತಿಗೆ ಮತ್ತಷ್ಟು ಉತ್ತೇಜನ ದೊರೆಯಿತು. ಜ್ಞಾನ ಭಾರತಿ ಎಜುಕೇಶನ್ ಸೊಸೈಟಿ ಇದಕ್ಕೆ ಪೂರಕವಾಯಿತು. ಅಲ್ಲದೆ ಶಿಕಾ ಶೆಟ್ಟಿ ಮತ್ತು ಚಂದು ಅವರು ಕಾವ್ಯಾಳ ಕ್ರೀಡೆ ಎಂಬ ಚಿಗುರಿಗೆ ತರಬೇತಿ ಎಂಬ ನೀರೆರೆದು ಪೋಷಿಸಿ, ಬೆಳೆಸಿದರು. ಅದರ ಫಲವನ್ನು ಇಡೀ ದೇಶವೇ ಕೊಂಡಾಡುವoತಾಯಿತು.
ಭಾರತದ ಆಲ್ ರೌಂಡರ್!
2025ರ ನವೆಂಬರ್ ನಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಅಂಧ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ನಲ್ಲಿ, ದೀಪಿಕಾ ಟಿ.ಸಿ ಅವರ ನಾಯಕತ್ವದ ಭಾರತದ ತಂಡದಲ್ಲಿ ಕಾವ್ಯ ಅವರು ಏಳು ಕ್ರಿಕೆಟ್ ಪಂದ್ಯಾವಳಿ ಶ್ರೇಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಲ್ ರೌಂಡರ್ ಆಗಿ ಆಡುವ ಮೂಲಕ, ನೇಪಾಳ ತಂಡವನ್ನು ಏಳು ವಿಕೆಟ್ ಗಳಲ್ಲಿ ಪರಾಭವಗೊಳಿಸಿ, ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಕೈಜೋಡಿಸಿದರು. ಪರಿಣಾಮವಾಗಿ ಕಾವ್ಯಾಳಿಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಮೋದಿ, ಸಿಎಂ ಅವರಿಂದ ಅಭಿನಂದನೆ
ಪ್ರಧಾನಮಂತ್ರಿಗಳು ಸಿಹಿ ತಿನ್ನಿಸಿರುವುದು, ಅಮಿತ್ ಶಾ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕದ ದೊಡ್ಮನೆ ಎನಿಸಿಕೊಂಡ ಡಾ.ರಾಜಕುಮಾರ್ ಅವರ ಕುಟುಂಬಸ್ಥರು ಕಾವ್ಯ ಮತ್ತವರ ತಂಡವನ್ನು ಮನೆಗೆ ಆಹ್ವಾನಿಸಿ ಔತಣ ನೀಡಿದ್ದು, ಕ್ರಿಕೆಟ್ ತಂಡದ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗುವ ಅವಕಾಶ ಒದಗಿ ಬಂದಿದ್ದು, ಕೇವಲ ಕಾವ್ಯಾ ಮತ್ತು ಆಕೆಯ ಕುಟುಂಬಕ್ಕಷ್ಟೇ ಅಲ್ಲದೆ ಮಲೆನಾಡಿಗರಿಗೆ ಹೆಮ್ಮೆಯನ್ನು ತಂದುಕೊಟ್ಟಿದೆ.
ಇಡೀ ಊರಿಗೆ ಹೆಮ್ಮೆ..!
ಇನ್ನು ರಿಪ್ಪನ್ ಪೇಟೆಯ ಜನರಿಗೆ ತಮ್ಮೂರಿನ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ಊರಿನ ಮಗಳ ಬಗ್ಗೆ ಕೇವಲ ಹೆಮ್ಮೆಯಷ್ಟೇ ಅಲ್ಲದೆ ಅಭಿಮಾನ ಕೂಡ ಮೂಡಿದೆ. ದೇವರು ಒಂದನ್ನು ಕಸಿದುಕೊಂಡರೆ ಅದರ ಎರಡರಷ್ಟು ಒಳ್ಳೆಯದನ್ನು ನೀಡುತ್ತಾನೆ ಎನ್ನುವುದಕ್ಕೆ ಕಾವ್ಯ ಉತ್ತಮ ನಿದರ್ಶನವಾಗಿದ್ದಾಳೆ.








