ದಕ್ಷಿಣ ಭಾರತದ ಅತಿದೊಡ್ಡ ಹಲಸಿನ ಮಾರುಕಟ್ಟೆ
– ಮಲೆನಾಡು, ಕರಾವಳಿ ಭಾಗದಲ್ಲೂ ಅತೀ ಹೆಚ್ಚು ಬೆಳೆ
– ಅನೇಕ ಖಾದ್ಯ ಮಾಡುವ ಹಲಸಿಗೆ ಈಗ ಡಿಮ್ಯಾಂಡ್
ಇದೀಗ ಹಲಸಿನ ಸೀಸನ್, ಎಲ್ಲೆಡೆ ಹಲಸಿನ ಹಣ್ಣು ಕಾಣುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಹಲಸಿನ ಹಣ್ಣುಗಳ ಉತ್ಪಾದನೆಯಾಗುವುದು ತುಮಕೂರು ಜಿಲ್ಲೆಯಲ್ಲಿ 147 ಹೆಕ್ಟೇರ್ ಪ್ರದೇಶದಲ್ಲಿ ಹಲಸಿನ ಮರಗಳಿವೆ. ವರ್ಷಕ್ಕೆ ಸುಮಾರು 5279 ಟನ್ ನಷ್ಟು ಹಲಸಿನ ಇಳುವರಿ ಲಭ್ಯವಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಹಲಸಿನ ಹಣ್ಣಿನ ವಿಚಾರಕ್ಕೆ ಬಂದಾಗ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಗ್ರಾಮ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಹಲಸಿನ ಮಾರುಕಟ್ಟೆಯನ್ನು ಹೊಂದಿದೆ. ಈ ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ವಿವಿಧ ತಳಿಯ ಹಲಸಿನ ಹಣ್ಣುಗಳ ವ್ಯಾಪಾರ ನಡೆಯಲಿದ್ದು, ಕೋಟ್ಯಂತರ ರೂಪಾಯಿ ವಹಿವಾಟನ್ನು ಹೊಂದಿದೆ.
ಒಂದು ಹಣ್ಣಿಗೆ ನೂರರಿಂದ ನಾಲ್ನೂರು ರೂಪಾಯಿ ಬೆಲೆ ನಿಗದಿಗೊಳ್ಳುತ್ತದೆ. ಜಿಲ್ಲೆಯ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಹಲಸಿನ ವ್ಯಾಪಾರಿಗಳು ಈ ಮಾರುಕಟ್ಟೆಗೆ ಆಗಮಿಸಿ, ತಮ್ಮ ವ್ಯಾಪಾರವನ್ನು ಕುದುರಿಸುತ್ತಾರೆ. ತುಮಕೂರಿನ ಹಲಸಿನ ಹಣ್ಣುಗಳು ದೇಶದ ಎಂಟು ರಾಜ್ಯಗಳಿಗೆ ಕೂಡ ರವಾನೆಯಾಗುತ್ತದೆ. ಹಲಸಿನ ವ್ಯಾಪಾರವು ಚೇಳೂರು ಮಾರುಕಟ್ಟೆಯಲ್ಲಿ ಮೇ ತಿಂಗಲಿನಿಂದ ಜುಲೈ ವರೆಗೆ ನಡೆಯುತ್ತದೆ. ಪ್ರತಿ ಗುರುವಾರ ವಿವಿಧ ಭಾಗಗಳಿಂದ ಹಲಸಿನ ವ್ಯಾಪಾರಿಗಳು ಇಲ್ಲಿಗೆ ಆಗಮಿಸಿ ಲಾರಿ, ಟ್ರ್ಯಾಕ್ಟರ್, ಆಟೋಗಳಲ್ಲಿ ಹಲಸಿನ ಹಣ್ಣಗಳನ್ನು ತುಂಬಿಕೊAಡು ಹೋಗುತ್ತಾರೆ. ಬೆಂಗಳೂರಿನ ವ್ಯಾಪಾರಿಗಳು ಚೇಳೂರಿನಲ್ಲಿ ಹಣ್ಣುಗಳನ್ನು ಖರೀದಿಸಿ ಆನ್ಲೈನ್ ಮೂಲಕ ಮಾರಾಟ ಮಾಡುತ್ತಾರೆ.
ಚೇಳೂರು ಮಾರುಕಟ್ಟೆಗೆ ಹಳದಿ, ಕೆಂಪು, ಬಿಳಿ ಹಲಸಿನ ಹಣ್ಣುಗಳು ಬರುತ್ತಿವೆ. ಕೆಂಪು ತೊಳೆಯ ಹಲಸಿನ ಹಣ್ಣುಗಳಿಗೆ ಅಧಿಕ ಬೇಡಿಕೆಯಿದೆ ಎನ್ನಲಾಗಿದೆ. ಹಲಸಿನ ಹಣ್ಣುಗಳಲ್ಲೇ ಉತ್ತಮವಾದುದು ಎಂದು ಗುರುತಿಸಲಾದ ತುಮಕೂರಿನ ಹೆಮ್ಮೆಯ ಹಲಸಿನ ತಳಿಗಳಾದ ಸಿದ್ಧು ಮತ್ತು ಶಂಕರ ಹಣ್ಣಿಗೆ ಪೇಟೆಂಟ್ ಕೂಡ ಲಭಿಸಿದೆ. ಈ ಎರಡೂ ತಳಿಗಳು ರುಚಿ ಮತ್ತು ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಮಲೆನಾಡು, ಕರಾವಳಿಯಲ್ಲೂ ಹಲಸು ಬೆಳೆ ಹೆಚ್ಚು!
ರಾಜ್ಯದ ವಿವಿಧ ಕಡೆ ಹಲಸು ಬೆಳೆಯುತ್ತದೆ. ಮಲೆನಾಡು ಕರಾವಳಿಯಲ್ಲಿ ಕಾಡು ಬೆಟ್ಟ ಗುಡ್ಡಗಳಲ್ಲೂ ಹಲಸು ಬೆಳೆಯುತ್ತದೆ. ಹಲಸಿನಿಂದ ಚಿಪ್ಸ್, ಮುಲ್ಕ, ಪಲ್ಯ ಸೇರಿ ಅನೇಕ ಖಾದ್ಯ ಮಾಡಲಾಗುತ್ತದೆ.








