ಆಗುಂಬೆ-ಶಿವಮೊಗ್ಗ ಸಾವಿನ ಹೆದ್ದಾರಿ!
– ಪ್ರತಿ ನಿತ್ಯ ಅಪಘಾತ: ಒಂದು ತಿಂಗಳಲ್ಲಿ 10 ಸಾವು
– ಮಿತಿ ಮೀರಿದ ವೇಗ, ಚಾಲಕರ ನಿರ್ಲಕ್ಷ್ಯ ಕಾರಣ
– ಮೇಗರವಳ್ಳಿ ಸಾವಿನ ಬಳಿಕ ನಾಲೂರಲ್ಲಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಆಗುಂಬೆ ಮತ್ತು ಶಿವಮೊಗ್ಗ ನಡುವೆ ಹೆದ್ದಾರಿ ಇದೀಗ ಸಾವಿನ ಹೆದ್ದಾರಿ ಆಗುತ್ತಿದೆ. ಪ್ರತಿ ದಿನ ಒಂದಲ್ಲ ಒಂದು ಅಪಘಾತ ಮಾಮೂಲಿ ಆಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ.
ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಮಹಿಳೆ ಪ್ರಾಣ ಬಿಟ್ಟ ಘಟನೆ ಮಾಸುವ ಮುನ್ನವೇ
ನಾಲೂರಲ್ಲಿ ಆಟೋ ಚಾಲಕನ ನಿರ್ಲಕ್ಷ್ಯದಿಂದಾಗಿ ಭಾನುವಾರ ರಾತ್ರಿ ಅಪಘಾತವೊಂದು ಸಂಭವಿಸಿದ್ದು ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಏನಿದು ಘಟನೆ?: ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವಶಬರಿ ಹೋಟೆಲ್ ಮಾಲೀಕರಾದ ಸುದರ್ಶನ್ ಮತ್ತು ಕುಟುಂಬದವರು ಉಡುಪಿಯ ಹೆಬ್ರಿ ಸಮೀಪದ ಸಂಬಂಧಿಕರ ಮನೆ ಗೃಹಪ್ರವೇಶಕ್ಕಾಗಿ ಆಟೋದಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಆಗುವಾಗ ನಾಲೂರು ಸಮೀಪದ ತಿರುವಿನಲ್ಲಿ ಕಬ್ಬಿಣದ ಡಿವೈಡರ್ ಗೆ ಆಟೋ ಡ್ರೈವರ್ ಚಾಲಕನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದ್ದು ನಿಶ್ಚಿತಾ ಶೆಟ್ಟಿ (27) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದರ್ಶನ್ ಹಾಗೂ ಮಗು ಸಂಚಿತ್ ಇಬ್ಬರಿಗೂ ಗಾಯಗಳಾಗಿದ್ದು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುವಳ್ಳಿಯ ಯಲ್ಲಪ್ಪ ಎಂಬ ಆಟೋ ಚಾಲಕನ ವಿರುದ್ಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಟೋ ಚಾಲಕನ ನಿರ್ಲಕ್ಷ್ಯ ಇದೀಗ ಒಂದು ಕುಟುಂಬವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
ಇತ್ತೀಚಿಗೆ ಭಾರತೀಪುರ ಬಳಿ ಮೂವರು, ಶಿವರಾಜ ಪುರ ಓರ್ವ, ಮೇಗರವಳ್ಳಿ ಓರ್ವರು, ಮಂಡಗದ್ದೆ ಇಬ್ಬರು ಸೇರಿ ಹತ್ತಾರು ಮಂದಿ ಇಂತಹ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.








