ಹೊಸ ನಗರ ಮರು ಕ್ಷೇತ್ರ ಸ್ಥಾಪನೆಗೆ ಹೋರಾಟ!
– ಸಾವಿರಾರು ಜನರಿಂದ ಪ್ರತಿಭಟನೆ: ಪಕ್ಷಾತೀತವಾಗಿ ನ್ಯಾಯಕ್ಕಾಗಿ ಪಟ್ಟು
– ಪಾದಯಾತ್ರೆಗೆ ಹರಿದು ಬಂದ ಜನಸಾಗರ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಹೊಸನಗರ ತಾಲೂಕಲ್ಲಿ ಭಾರಿ ಹೋರಾಟ ಶುರುವಾಗಿದೆ. ಪಕ್ಷಾತೀತ ಹೋರಾಟಕ್ಕೆ ಜನ ಬೆಂಬಲ, ರಾಜಕೀಯ-ಧಾರ್ಮಿಕ ನಾಯಕರ ಬೆಂಬಲ ಸಿಕ್ಕಿದ್ದು, ಸಾವಿರಾರು ಜನ ಭಾಗಿಯಾಗಿದ್ದಾರೆ. ಹೊಸನಗರ ತಾಲೂಕು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಹೊಸನಗರ ಪ್ರದೇಶ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಅನಿವಾರ್ಯ ಎಂದು ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ವಿವಿಧ ಧರ್ಮಗುರುಗಳು ಒಮ್ಮತದ ಧ್ವನಿಯಲ್ಲಿ ಒತ್ತಾಯಿಸಿದ್ದಾರೆ.
ಹೊಸ ನಗರ ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಕಷ್ಟ ಹರ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು. ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ ಸೇರಿ ಬಹುತೇಕ ಜನ ನಾಯಕರು ಭಾಗಿಯಾಗಿದ್ದರು. ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಹೊಸನಗರ ನಾಡು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರೂ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಕ್ಷೇತ್ರ ಮರುಸ್ಥಾಪನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ತನು-ಮನ-ಧನ ಸಮರ್ಪಿಸುವುದಾಗಿ ಭರವಸೆ ನೀಡಿದರು. ತಾಲೂಕು ಎರಡು ಕ್ಷೇತ್ರಗಳಿಗೆ ಹಂಚಿರುವುದು ಆಡಳಿತಾತ್ಮಕವಾಗಿ ಸಂಕಷ್ಟ ಉಂಟುಮಾಡುತ್ತಿದೆ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, 2008ರ ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿಯೇ ಹೊಸನಗರ ಕ್ಷೇತ್ರ ರದ್ದುಗೊಳಿಸುವ ನಿರ್ಧಾರಕ್ಕೆ ತಾವು ವಿರೋಧ ವ್ಯಕ್ತಪಡಿಸಿದ್ದಾಗಿ ಹೇಳಿದರು. ಆದರೆ ಆ ಸಮಯದಲ್ಲಿ ಅವರ ಆಕ್ಷೇಪಣೆ ಪರಿಗಣಿಸಲ್ಪಡಲಿಲ್ಲ. ಇದೀಗ ಜನರೇ ಹೋರಾಟಕ್ಕೆ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಹೊಸನಗರ ಕ್ಷೇತ್ರ ಮರುಸ್ಥಾಪನೆ ಜನರ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾಗಿದೆ. ಅಭಿವೃದ್ಧಿ, ಆಡಳಿತ ಸುಗಮತೆ ಮತ್ತು ಜನಸೇವೆ ದೃಷ್ಟಿಯಿಂದ ಪ್ರತ್ಯೇಕ ಕ್ಷೇತ್ರ ಅವಶ್ಯಕವಾಗಿದೆ. ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು. ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ದೊರಕಲು ಈ ಹೋರಾಟ ನಿರಂತರವಾಗಿರಬೇಕು ಎಂದು ಅವರು ಹೇಳಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್ ಸೇರಿದಂತೆ ಹಲವಾರು ಗಣ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮೂಲೆಗದ್ದೆ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಪಾದಯಾತ್ರೆಗೆ ದೊರೆತ ಭಾರೀ ಸ್ಪಂದನೆ ಜನರ ನೋವು ಮತ್ತು ಸಮಸ್ಯೆಗಳ ತೀವ್ರತೆಯನ್ನು ತೋರಿಸುತ್ತದೆ ಎಂದರು. ಧರ್ಮಾತೀತ, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಜನ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಇಲ್ಲಿನ ಜನತೆಗೆ ಹಕ್ಕು ಇದೆ. ಮುಳುಗಡೆ ಸೇರಿದಂತೆ ಹಲವು ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಆಡಳಿತಾತ್ಮಕ ಸುವ್ಯವಸ್ಥೆ ಸಿಗಬೇಕಾದರೆ ಪ್ರತ್ಯೇಕ ಕ್ಷೇತ್ರವೇ ಪರಿಹಾರ ಎಂದು ಹೇಳಿದರು. ಕಳೆದ 25 ವರ್ಷಗಳಿಂದ ಎದುರಿಸುತ್ತಿರುವ ಅನ್ಯಾಯಕ್ಕೆ ತೆರೆ ಬೀಳಬೇಕಿದ್ದು ಕ್ಷೇತ್ರ ಮರುಸ್ಥಾಪನೆಯವರೆಗೆ ಹೋರಾಟ ನಿರಂತರವಾಗಿರಬೇಕು ಎಂದು ಕರೆ ನೀಡಿದರು.
ಈ ಪಾದಯಾತ್ರೆಯಲ್ಲಿ 96 ವರ್ಷದ ಹಿರಿಯ ರಾಜಕಾರಣಿ ಮತ್ತು ಮಾಜಿ ಶಾಸಕ ಬಿ. ಸ್ವಾಮಿರಾವ್ ಮೊದಲ ದಿನವೇ 18 ಕಿಮೀ ನಡೆದು ವಿಶೇಷ ಗಮನ ಸೆಳೆದರು. ವಾಹನದಲ್ಲಿ ತೆರಳುವಂತೆ ಮನವಿ ಮಾಡಿದರೂ ನಿರಾಕರಿಸಿ ಪಾದಯಾತ್ರೆಯಲ್ಲೇ ಭಾಗವಹಿಸಿದರು. ಇನ್ನೊಂದೆಡೆ, ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಲಿಗೇರಿ ಗ್ರಾಮದಿಂದ ನೂರಾರು ಗ್ರಾಮಸ್ಥರು ಎತ್ತಿನಗಾಡಿಗಳ ಮೂಲಕ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪಾದಯಾತ್ರೆಯ ಮಾರ್ಗದಲ್ಲಿ ಭಾಗವಹಿಸಿದವರಿಗೆ ಬಾಳೆಹಣ್ಣು, ಶರಬತ್ತು ಐಸ್ಕ್ರೀಂ ಸೇರಿದಂತೆ ತಿನಿಸುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಿಟ್ಟೂರು ಗರ್ತಿಕೆರೆ ಶ್ರೀಗಳು, ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಹಾಲಗದ್ದೆ ಉಮೇಶ್, ದೇವಾನಂದ್, ಕೆ.ವಿಕೃಷ್ಣಮೂರ್ತಿ,ರಮಾಕಾಂತ್,ಚಿದಂಬರ,ಮಹೇಶ್ ದೇವರಸಲಿಕೆ, ಆಲುವಳ್ಳಿ ವಿರೇಶ್,ಆರ್.ಎ.ಚಾಬುಸಾಬ್, ರಮೇಶ್ ಹಲಸಿನಹಳ್ಳಿ ಕರುಣಾಕರ ಶೆಟ್ಟಿ, ಸತೀಶ್, ಅಂಬ್ರಯ್ಯಮಠ, ಚಕ್ರವಾಕ ಸುಬ್ರಹಣ್ಯ, ಸುಧೀಂದ್ರ ಪಂಡಿತ್, ನಾರಾಯಣ ಕಾಮತ್, ಎನ್ ವರ್ತೇಶ್,ನೇಮಿರಾಜ್, ಸೇರಿದಂತೆ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳು, ವಿವಿಧ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನಗರ ಹೋಬಳಿಯ 9 ಗ್ರಾಪಂಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ರವಿ ಬಿದನೂರು ನಿರ್ವಹಿಸಿದರು.








