ಸಿಮೆಂಟ್, ಆಟೋ ಗ್ಯಾಸ್ ದುಬಾರಿ!
– ಯುದ್ಧ ಪರಿಣಾಮ ಆಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ
– ಮನೆ ಕಟ್ಟೋದು ಇನ್ನು ಕಷ್ಟ ಕಷ್ಟ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಇಸ್ರೇಲ್- ಅಮೆರಿಕಾ ಮತ್ತು ಇರಾನ್ ನಡುವಿನ ಕದನವು ತಿಂಗಳುಗಳು ಕಳೆದರೂ ಇನ್ನೂ ಮುಂದುವರಿದಿದ್ದು, ಪರಿಣಾಮವಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಹಲವಾರು ಬಗೆಯ ಸಮಸ್ಯೆಗಳು ಪ್ರತಿದಿನ ಒಂದರಂತೆ ತಲೆದೋರುತ್ತಿದೆ. ಇದೀಗ ಆಟೋ ಗ್ಯಾಸ್ ಸರದಿಯಾಗಿದೆ. ಆಟೋ ಚಾಲಕರಿಗೆ ತಮ್ಮ ವಾಹನಗಳಿಗೆ ಅಳವಡಿಸಲು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಪ್ರಸ್ತುತ ಅವರು ಪೆಟ್ರೋಲ್ ಬಳಸುವ ಅನಿವಾರ್ಯತೆ ಎದುರಾಗಿದೆ.
ಸಿಎನ್ಜಿ ಪೂರೈಕೆ ಇರುವುದರಿಂದ ಆಟೋಗಳಿಗೆ ಇದುವರೆಗೂ ಯಾವುದೇ ರೀತಿಯ ಸಮಸ್ಯೆ ತಲೆದೋರಿಲ್ಲ. ಆದರೆ, ಗ್ಯಾಸ್ ಅನ್ನು ಅಳವಡಿಸಿಕೊಂಡಿರುವ ಆಟೋಗಳಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎನ್ನುವುದು ಆಟೋ ಚಾಲಕರ ಅಭಿಪ್ರಾಯವಾಗಿದೆ. ಇದರಿಂದಾಗಿ ಆಟೋ ಗ್ಯಾಸ್ ಸಿಕ್ಕಿದಾಗ ಮಾತ್ರ ಅದನ್ನು ಅಳವಡಿಸಲಾಗುತ್ತಿದ್ದು, ಉಳಿದ ದಿನಗಳಲ್ಲಿ ಪೆಟ್ರೋಲ್ ನಿಂದ ಆಟೋವನ್ನು ಓಡಿಸಲಾಗುತ್ತಿದೆ ಎನ್ನಲಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ಈ ಸಮಸ್ಯೆ ಗಂಭೀರವಾಗಿದ್ದು, ನಗರದ ಆಟೋ ಚಾಲಕರು ತಮ್ಮ ಆಟೋಗಳಿಗೆ ಬ್ರಹ್ಮಾವರ ಮತ್ತು ಹೆಜಮಾಡಿಗಳಿಗೆ ತೆರಳಿ, ಎಲ್ ಪಿಜಿ ತುಂಬಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇನ್ನು ಅಲ್ಲಿಯೂ ಸಮಸ್ಯೆ ತಲೆದೋರಿ ಅದು ಮುಂದುವರಿದರೆ ತಮ್ಮ ಜೀವನ ನಿರ್ವಹಣೆ ಕಷ್ಟ ಎಂದು ಆಟೋ ಚಾಲಕರು ಚಿಂತಿತರಾಗಿದ್ದಾರೆ.
ಏಪ್ರಿಲ್ 5ರಿಂದ ಸಿಮೆಂಟ್ ದರದಲ್ಲಿ ಏರಿಕೆ
ನವದೆಹಲಿ: ಯುದ್ಧದ ಪರಿಣಾಮವಾಗಿ ಇಂಧನ ಮತ್ತು ಪ್ಯಾಕೇಜಿಂಗ್ ವೆಚ್ಚದಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ಸಿಮೆಂಟ್ ತಯಾರಿಕಾ ಸಂಸ್ಥೆಗಳು ಒಗ್ಗೂಡಿ ಸಿಮೆಂಟ್ ದರದಲ್ಲಿ ಏರಿಕೆ ಮಾಡುವ ಕುರಿತು ನಿರ್ಧಾರ ಕೈಗೊಂಡಿದೆ. ಮಾರ್ಚ್ ತಿಂಗಳಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುಸಿತ ಕಂಡುಬಂದಿರುವ ಕಾರಣ ಮತ್ತು ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಉತ್ಪಾದನಾ ವೆಚ್ಚ ಕೂಡ ಹೆಚ್ಚಳಗೊಂಡಿದ್ದು, ಜೂನ್ ತ್ರೈಮಾಸಿಕದಲ್ಲಿ ಲಾಭಾಂಶ ಕೂಡ ಕುಸಿಯುವ ಸಾಧ್ಯತೆಯಿರುವ ನಿಟ್ಟಿನಲ್ಲಿ ಸಂಸ್ಥೆಗಳು ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗಿದೆ.
50 ಕೆಜಿ ತೂಕದ ಒಂದು ಸಿಮೆಂಟ್ ಮೂಟೆಗೆ ಈಗ 300 ರಿಂದ 500 ರೂಪಾಯಿಗಳಿದ್ದು, ಮೂರರಿಂದ ಆರು ತಿಂಗಳಲ್ಲಿ ಪೆಟ್ ಕೋಕ್ ಮತ್ತು ಕಲ್ಲಿದ್ದಲುಗಳ ಬೆಲೆಯು ಜಾಗತಿಕ ಮಟ್ಟದಲ್ಲಿ ಶೇಕಡ 30ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ಸಿಮೆಂಟ್ ಚೀಲಗಳ ದರವು 15 ರೂಪಾಯಿಗಳಷ್ಟು ಏರಿಕೆ ಮಾಡಲು ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.








