ಶೃಂಗೇರಿ ಕ್ಷೇತ್ರದಲ್ಲಿ ಮುಗಿಯದ ಕಾಡಾನೆ ಕಾಟ
* ಮೊನ್ನೆವರೆಗೂ ಕೊಪ್ಪ ಇಂದು ಎನ್ ಆರ್ ಪುರದಲ್ಲಿ ಪ್ರತ್ಯಕ್ಷ
* ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಯಾವಾಗ ?
NAMMMUR EXPRESS NEWS
ಎನ್.ಆರ್ ಪುರ: ಕ್ಷೇತ್ರದಾದ್ಯಂತ ಕಾಡಾನೆಗಳ ಹಾವಳಿ ಮಿತಿಮೀರಿದ್ದು ಇದು ಮುಗಿಯುವಂತೆ ಕಾಣುತ್ತಿಲ್ಲ ಶೃಂಗೇರಿಗೆ ಬಂದ ಕಾಡಾನೆಗಳು ಬಾಳೆಹೊನ್ನೂರು,ತುಪ್ಪೂರು,ಕೊಪ್ಪ,ಕುದುರೆಗುಂಡೆ ಭಾಗದಲ್ಲಿ ಓಡಾಡಿ ತೀರ್ಥಹಳ್ಳಿ ಕೊಪ್ಪ ಗಡಿಭಾಗ ಮೃಗವಧೆಯಲ್ಲಿ ಕಾಣಿಸಿಕೊಂಡಿವೆ.ಇನ್ನೊಂದೆಡೆ ಶೃಂಗೇರಿ ತಾಲೂಕಿನ ಬೇಗಾರು ಗ್ರಾ ಪಂ ವ್ಯಾಪ್ತಿಯ ತಾರೊಳ್ಳಿಕೊಡಿಗೆ ಭಾಗದಲ್ಲಿ ಕಾಣಿಸಿಕೊಂಡಿದ್ದ ಆನೆ ಆಗುಂಬೆ ಭಾಗದಲ್ಲಿ ಕಾಣಿಸಿಕೊಂಡಿದೆ.
ಈಗ ಮತ್ತೆ ಎನ್ ಆರ್ ಪುರ ತಾಲೂಕಿನಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದು, ಆನೆಗಳ ಪುಂಡಾಟ ಮುಂದುವರೆದಿದೆ ತಾಲೂಕಿನ ಆಲಂದೂರು ಗ್ರಾಮದಲ್ಲಿ ಕಳೆದ ರಾತ್ರಿ ತೋಟಕ್ಕೆ ನುಗ್ಗಿರುವ ಆನೆ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿದೆ. ಮಲೆನಾಡು ತಾಲೂಕುಗಳಲ್ಲಿ ಕಾಡಾನೆ ದಾಳಿಯಿಂದ ಪ್ರತಿನಿತ್ಯ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ. ರಾತ್ರಿ ವೇಳೆ ಆಹಾರ ಹುಡುಕಿಕೊಂಡು ಬರುವ ಕಾಡಾನೆಗಳು ಫಸಲಿಗೆ ಬಂದ ಅಡಿಕೆ ಮರಗಳನ್ನು ಮುರಿದು ಧ್ವಂಸ ಮಾಡುತ್ತಿವೆ. ಇನ್ನು ಬಾಳೆ ಹಾಗೂ ಕಾಫಿ ಗಿಡಗಳ ಕಥೆ ಹೇಳತೀರದಾಗಿದೆ.ನಿರಂತರವಾಗಿ ಆನೆಗಳು ದಾಳಿ ಮಾಡುತ್ತಿರುವುದರಿಂದ ಕತ್ತಲಾದ ಮೇಲೆ ಜನ ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಹಗಲಿನಲ್ಲೂ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ತೋಟದ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರು ಹಾಗೂ ಶಾಲೆಗೆ ತೆರಳುವ ಮಕ್ಕಳು ಹೆದರುವಂತಾಗಿದೆ. ಅರಣ್ಯ ಇಲಾಖೆ ಹಾಗು ಜನಪ್ರತಿನಿಧಿಗಳು ಕಾಡಾನೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.







