ದ್ವೇಷ ರಾಜಕಾರಣ ಸುಡೋ ಕಾಲ ಬರಲಿದೆ…!
– ರಾಜ್ಯ ಸರ್ಕಾರ-ಶ್ರೇಯಸ್ ಪಟೇಲ್ ವಿರುದ್ಧ ಎಂಎಲ್ಸಿ ಸೂರಜ್ ರೇವಣ್ಣ ವಾಗ್ದಾಳಿ
– ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ…
NAMMUR EXPRESS NEWS
ಚನ್ನರಾಯಪಟ್ಟಣ: ಸೂರ್ಯ ಹುಟ್ಟುವುದು ಒಂದೇ ಅಲ್ಲ ಸೂರ್ಯ ಪ್ರಜ್ವಲಿಸುತ್ತಾನೆ, ನಿಮ್ಮ ಪ್ರಜ್ವಲ್ ಅಣ್ಣನೂ ಅಷ್ಟೇ, ನಿಮ್ಮ ಸೂರಜ್ ಅಣ್ಣನೂ ಅಷ್ಟೆ, ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡ್ತೀವಿ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದ್ದಾರೆ. ತಮ್ಮ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು. ಕೆಲ ಅಧಿಕಾರಿಗಳು, ಕೆಲವು ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡ್ತಿದ್ದಾರೆ ನೋಡುತ್ತಿದ್ದೇವೆ. ಯಾವುದೂ ಶಾಶ್ವತವಲ್ಲ, ಯಾವ ಸರ್ಕಾರವೂ ಶಾಶ್ವತ ಅಲ್ಲ ಎಂದು ಎಚ್ಚರಿಸಿದರು.ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂಥವರೋ ಏನೇನೋ ಆಗಿದ್ದಾರೆ ಅನ್ನೋದು ಗೊತ್ತಾಗುತ್ತೆ ಎಂದು ಸೂಚ್ಯವಾಗಿ ಹೇಳಿದರು. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತೆ, ಈ ದ್ವೇಷದ ರಾಜಕಾರಣ ಉಳಿಯಲ್ಲ ಎಂದರು.ನಿಮಗೆ ೧೩೫ ಸೀಟ್ ಕೊಟ್ಟಿರೋದು ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಅಂತ, ಅದನ್ನು ಬಿಟ್ಟು ದಿನ ಬೆಳಿಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಗಿಸೋದು ಬರಿ ಇದೇ ಆಗೋಯ್ತು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು, ಯಾವ ರೈತರಿಗೆ ಒಳ್ಳೆಯದಾಗಿದೆ ಹೇಳಲಿ ಎಂದ ಸೂರಜ್, ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಇವತ್ತು ಆವರಿಸಿಕೊಂಡಿದೆ ಎಂದರು. ಮತ್ತೆ ನಿಮ್ಮ ಸೂರಜ್ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕೆಲವರು ಕುಣಿಯುತ್ತಿದ್ದಾರೆ ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು. ಇದೇ ವೇಳೆ ಸಂಸದ ಶ್ರೇಯಸ್ ಪಟೇಲ್ ವಿರುದ್ಧವೂ ಕಿಡಿಕಾರಿದ ಸೂರಜ್, ನಿನ್ನೆ ಮೊನ್ನೆ ಪೆನ್ಡ್ರೈವ್ ಹಂಚಿ ನಾನು ಎಂಎಲ್ಸಿ ಆಗಿಲ. ನಿಮ್ಮ ತಾತನ ತರ ಕುತಂತ್ರ ಮಾಡಿ ಎಂಎಲ್ಸಿ ಆಗಿದ್ದಲ್ಲ. ದೇವೇಗೌಡರು, ರೇವಣ್ಣನ ಕುಟುಂಬ ಮುಗಿಸುತ್ತಾರಂತೆ ಎಂದು ವಾಗ್ದಾಳಿ ನಡೆಸಿದರು. ಇದೇ ೨೫ ವರ್ಷದ ಹಿಂದೆ, ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆಯೋ ಅವರ ತಾತ, ನಮ್ಮ ಅಜ್ಜಿ, ತಾಯಿ ಮೇಲೆ ಆಸಿಡ್ ಎರಚಿಸಿದ್ದನ್ನ ಯಾರೂ ಮರೆಯಬಾರದು. ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತ ಅವರ ತಮ್ಮನ ಮಕ್ಕಳಿಂದ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಆಸಿಡ್ ದಾಳಿ ಮಾಡಿಸಿದ್ರು. ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತೂ ಕೂಡ ಸಂಕಷ್ಟ ಇತ್ತು, ಅಂದೂ ಕಾಂಗ್ರೆಸ್ ಸರ್ಕಾರ ಇತ್ತು. ಈಗ ೧೩೫ ಸೀಟ್, ಆಗ ೧೩೦ ಸೀಟ್ ಗೆದ್ದಿದ್ದರು. ಇವರಿಗೆ ದೇವೇಗೌಡರು, ರೇವಣ್ಣ ಕುಟುಂಬ ಮುಗಿಸಬೇಕು ಎಂಬುದು ಒಂದೇ ಉದ್ದೇಶ. ೨೫ ವರ್ಷದ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು, ನಂತರ ಏನಾಯ್ತು ಸ್ವಾಮಿ, ಇದು ಅದೇ ರೀತಿಯ ಒಂದು ಅನುಭವ ಎಂದು ಹೇಳಿದರು.