ಇನ್ನು ಮುಂದೆ ಪೊಲೀಸರಿಗೆ ನೀಲಿ ಟೋಪಿ!
– ಹಳೆ ಕಾಲದ ಟೋಪಿಗೆ ಗುಡ್ ಬೈ ಹೇಳಿದ ರಾಜ್ಯ ಸರ್ಕಾರ
– ಹೊಸ ಟೋಪಿ ಹಾಕಿ ಪೋಸ್ ಕೊಟ್ಟ ಪೊಲೀಸರು
ವಿಶೇಷ ವರದಿ: ಸಿದ್ಧಾಂತ್
NAMMUR EXPRESS NEWS
ಬೆಂಗಳೂರು: ಪೊಲೀಸ್ ಟೋಪಿ ಈಗ ಬದಲಾಗಲಿದೆ. ಕರ್ನಾಟಕ ಪೊಲೀಸರಿಗೆ ಪೀಕ್ ಕ್ಯಾಪ್ ಅನ್ನು ಸರ್ಕಾರ ವಿತರಣೆ ಮಾಡಿದೆ.
ಇನ್ನು ಮುಂದೆ ಪೊಲೀಸರಿಗೆ ನೀಲಿ ಟೋಪಿ ಸಿಗಲಿದ್ದು ಹಳೆ ಕಾಲದ ಟೋಪಿಗೆ ಗುಡ್ ಬೈ ಹೇಳಲಾಗಿದೆ. ರಾಜ್ಯ ಸರ್ಕಾರ ಕೊಟ್ಟ ಹೊಸ ಟೋಪಿ ಹಾಕಿ ಪೊಲೀಸರು ಗೌರವ ಸಲ್ಲಿಸಿದ್ದಾರೆ.
ಮಂಗಳವಾರ ಬೆಂಗಳೂರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಯ ಪೀಕ್ ಕ್ಯಾಪ್ ವಿತರಣೆ ಹಾಗೂ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ಸನ್ಮಿತ್ರ ಕೈಪಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವರಾದ ಜಿ.ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಹಳೇ ಕಾಲದ ಸ್ಲೋಚ್ ಹ್ಯಾಟ್ಗೆ ವಿದಾಯ ಹೇಳಿ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ವಿತರಣೆ ಮಾಡಲಾಯಿತು. ಎಲ್ಲಾಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹೊಸ ಟೋಪಿ ಧರಿಸಿದರು. ಪ್ರತಿ ಠಾಣೆಗೂ ಶೀಘ್ರದಲ್ಲಿ ಹೊಸ ಟೋಪಿ ರವಾನೆ ಆಗಲಿದೆ.
ಹೊಸ ಟೋಪಿ ಏಕೆ..?
ಪ್ರತಿಭಟನೆ, ಆರೋಪಿಯನ್ನು ಹಿಡಿಯಲು ಓಡುವಾಗ, ಲಾಠಿಪ್ರಹಾರದ ವೇಳೆ ಸ್ಲೋಚ್ ಕ್ಯಾಪ್ ಕೆಳಗೆ ಬೀಳುತ್ತಿತ್ತು. ಪೊಲೀಸರ ಹ್ಯಾಟ್ ಕೆಳಗೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಕಳೆದ 4 ದಶಕಗಳಿಂದ ಪೀಕ್ ಕ್ಯಾಪ್ ನೀಡುವಂತೆ ಪೊಲೀಸರು ಬೇಡಿಕೆಯಿಟ್ಟಿದ್ದರು. ಕೊನೆಗೆ ಸರ್ಕಾರ ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್ ಕ್ಯಾಪ್ ವಿತರಿಸಲು ಒಪ್ಪಿಗೆ ನೀಡಿತ್ತು. ಹೊಸ ಪೀಕ್ ಕ್ಯಾಪ್ನಲ್ಲಿ ಎಲಾಸ್ಟಿಕ್ ಇರುವುದರಿಂದ ಪೊಲೀಸರ ತಲೆಯಲ್ಲಿ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್ ಸಿಗಲಿದೆ.








