ಆಧುನಿಕ ಯುಗದಲ್ಲಿ ಮತ್ತೆ ಮಣ್ಣಿನ ಮಡಿಕೆಗೆ ಡಿಮ್ಯಾಂಡ್!
– ಮಡಿಕೆಯಲ್ಲಿ ತುಂಬಿಸಿದAತಹ ನೀರು ಭಾರಿ ತಂಪು
– ಮಡಿಕೆೆಯಲ್ಲಿ ಅಡುಗೆ ಮಾಡಿದರೆ ಹೆಚ್ಚು ರುಚಿಕರ, ಆರೋಗ್ಯಕರ
ಬೇಸಿಗೆ ಬಂತೆಂದರೆ ಎಲ್ಲರೂ ತಣ್ಣನೆಯ ಗುಟುಕು ನೀರು ಸಿಕ್ಕರೆ ಸಾಕಪ್ಪ ಎನ್ನುವಂತೆ ಕುಂಬಾರರ ಪ್ರಕೃತಿ ಪ್ರಿಡ್ಜ್ (ಮಣ್ಣಿನ ಮಡಿಕೆ) ಹೆಚ್ಚು ಸಹಕಾರಿಯಾಗಿದೆ. ಈ ಹಿಂದೆ ಬೇಸಿಗೆ ಬಂದರೆ ಎಲ್ಲರೂ ತಣ್ಣನೆ ಮಣ್ಣಿನ ಮಡಕೆ ನೀರು ಕುಡಿಯುತ್ತಿದ್ದವರೇ, ಅದು ಆರೋಗ್ಯಕ್ಕೂ ಹಿತಕರವಾಗಿತ್ತು. ಇತ್ತೀಚೆಗೆ ಆ ಮಣ್ಣಿನ ಮಡಿಕೆಗಳು ಕಡಿಮೆಯಾಗುತ್ತಾ ಪ್ಲಾಸ್ಟಿಕ್ ಬಾಟಲಿ, ಸ್ಪೀಲ್, ಅಲ್ಯೂಮಿನಿಯಂ, ಅಕ್ವಗಾರ್ಡ್ ಹಾಗೂ ಇಲೆಕ್ಟ್ರಾನಿಕ್ ಫ್ರಿಡ್ಜ್ಗಳಲ್ಲಿ ನೀರು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇದೀಗ ಇತ್ತೀಚಿಗೆ ಮತ್ತೆ ಮಡಿಕೆ, ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ.
ಸಾಗಣೆ ಮತ್ತು ಉತ್ಪಾದನೆ ಕಷ್ಟ ಕಷ್ಟ!
ಮಡಿಕೆಗಳೊಂದಿಗೆ ಮಣ್ಣಿನಿಂದ ಮಾಡಿದ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಮಣ್ಣಿನ ಮಡಿಕೆಗಳಿಗೆ ಈ ಹಿಂದೆ ಹೆಚ್ಚು ಬೇಡಿಕೆ ಇತ್ತು. ಇದೀಗ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಎಲ್ಲರೂ ಎಲೆಕ್ಟ್ರಾನಿಕ್ ಯುಗಕ್ಕೆ ಮಾರಿಹೋಗುತ್ತಿರುವ ಸಂದರ್ಭದಲ್ಲಿ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಕುಸಿದಿದೆ. ಬೇಸಿಗೆಯಲ್ಲಿ ಮಡಿಕೆಯ ಬೆಲೆ 150. ರೂ. ರಿಂದ 300 ರೂ.ಗಳ ವರೆಗೆ ಇರುತ್ತದೆ. ತಿಂಗಳಿಗೆ 5 ರಿಂದ 6 ಸಾವಿರ ರೂ. ವ್ಯಾಪಾರ ಮಾಡಿದರೆ ಹೆಚ್ಚು, ಸಾಗಣೆ ವೆಚ್ಚ ಕೂಡ ದುಬಾರಿಯಾಗಿದೆ.
ಕುಂಬಾರರು ಕುಲ ಕಸುಬನ್ನೇ ನಂಬಿಕೊಂಡು ಈಗಲೂ ಜೀವನ ನಡೆಸುತ್ತಿದ್ದಾರೆ. ಈ ಉದ್ಯೋಗ ಬಿಟ್ಟರೆ ಬೇರೆ ಉದ್ಯೋಗ ನಮಗಿಲ್ಲ. ನಾವು ಬೇಸಿಗೆಯಲ್ಲಿ ಒಂದಷ್ಟು ಹಣ ನೋಡುತ್ತೇವೆ, ಬಿಟ್ಟರೆ ಗಣಪತಿ ಹಬ್ಬದ ದಿನಗಳಲ್ಲಿ ಮಾತ್ರ ಗಣಪತಿಯನ್ನ ತಯಾರಿಸಿ ಮಾರಾಟ ಮಾಡುತ್ತೇವೆ ಎಂದು ಮಣ್ಣಿನ ಮಡಿಕೆಯ ವ್ಯಾಪಾರಸ್ಥರು ಹೇಳುತ್ತಾರೆ. ಈ ಮೊದಲು ಮಡಕೆ ಮಾತ್ರ ಮಾಡಲಾಗುತ್ತಿತ್ತು. ಇದೀಗ ಮಡಿಕೆಗೆ ನಲ್ಲಿ ಜೋಡಿಸಿ ತಯಾರಿಸಲಾಗಿದ್ದು, ಮಡಿಕೆಗೆ ರಂಗುರಂಗಿನ ಬಣ್ಣವನ್ನು ಬಳಿದು ಬಹಳ ಆಕರ್ಷಣೀಯವನ್ನಾಗಿಸಿ ಗ್ರಾಹಕರ ಮನ ಸೆಳೆಯಲಾಗುತ್ತಿದೆ. ಮಣ್ಣಿನ ಮಡಿಕೆಯ ನೀರಿನಲ್ಲಿ ಕಬ್ಬಿಣಾಂಶ ಹೆಚ್ಚು ಇರುತ್ತದೆ. ಮಡಿಕೆಯಲ್ಲಿ ಅಡುಗೆ ಮಾಡಿ ತಿಂದರೆ ಹೆಚ್ಚು ರುಚಿಕರ, ಆರೋಗ್ಯಕರವಾಗಿರುತ್ತದೆ.
ತಂಪು ನೀರಿಗೆ ಮಡಕೆ ಫಿಲ್ಟರ್!
ಕುಡಿಯುವ ನೀರನ್ನು ಕಡಿಮೆ ವೆಚ್ಚದಲ್ಲಿ ತಂಪಾಗಿಡಲು ಸುಲಭ ಹಾಗೂ ಸರಳ ವಿಧಾನ ಮಣ್ಣಿನ ಮಡಿಕೆ. ಬಿಸಿಲ ಬೇಗೆಗೆ ನಗರ-ಗ್ರಾಮೀಣ ಪ್ರದೇಶವೆನ್ನದೆ ಎಲ್ಲರೂ ಇದೀಗ ಮಣ್ಣಿನ ಫಿಲ್ಟರ್ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಮಡಿಕೆ ಮಣ್ಣಿನಲ್ಲಿ ನೀರು ತುಂಬಿಸಿಡುವುದು ಆರೋಗ್ಯಕರ ಮಾತ್ರವಲ್ಲದೆ ಫ್ಯಾಶನ್ ಆಗಿಯೂ ಬದಲಾಗಿದೆ. ಇದು ಕುಲಕಸುಬುದಾರರಿಗೆ ಪ್ರೋತ್ಸಾಹ ನೀಡಿದಂತಾಗುವುದಲ್ಲದೆ, ಸಂಸ್ಕೃತಿ ಮರುಕಳಿಸುವಂತೆಯೂ ಮಾಡಿದೆ. ಫ್ರಿಜ್ ಇದ್ದರೂ ಕೆಲವರಿಗೆ ಮಣ್ಣಿನ ಮಡಿಕೆಯ ನೀರು ಕುಡಿದರೆ ಮಾತ್ರ ಸಮಾಧಾನ. ಆರೋಗ್ಯಕ್ಕೂ ಒಳ್ಳೆಯದು.








