ತೀರ್ಥಹಳ್ಳಿ ಪಟ್ಟಣಕ್ಕೆ ವರ್ಷದಲ್ಲಿ ಅತಿ ಹೆಚ್ಚು ವಾಹನ ಆಗಮಿಸುವ ದಿನ!
– ಬೆಂಗಳೂರು ಸೇರಿ ಹೊರ ಊರಿಂದಲೂ ಜನ
– ಕಂಡ ಕಂಡಲ್ಲಿ ವಾಹನ ನಿಲ್ಲಿಸಬೇಡಿ
– ಜಾತ್ರೆಯಲ್ಲಿ ಅಂಗವಿಕಲರ ತಂದು ಬಿಡುವ ದಂಧೆ!
NAMMUR EXPRESS NEWS
ತೀರ್ಥಹಳ್ಳಿ ಜಾತ್ರೆ ವಿಶೇಷ: ತೀರ್ಥಹಳ್ಳಿ ಇತಿಹಾಸದಲ್ಲಿ ಎಳ್ಳಮಾವಾಸ್ಯೆ ಜಾತ್ರೆಯ ತೆಪ್ಪೋತ್ಸವದ ದಿನ ತೀರ್ಥಹಳ್ಳಿ ಪಟ್ಟಣ, ಹಳ್ಳಿಗಳು, ಮಲೆನಾಡು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ. ಇನ್ನು ದ್ವಿಚಕ್ರ ವಾಹನ ನಾಲ್ಕು ಚಕ್ರದ ವಾಹನವನ್ನ ನಿಗದಿ ಪಡಿಸಿದ ಜಾಗದಲ್ಲೇ ವಾಹನ ಪಾರ್ಕಿಂಗ್ ಮಾಡಬೇಕು. ಜೊತೆಗೆ ಮುಖ್ಯ ರಸ್ತೆಯಲ್ಲಿ ಪಾರ್ಕಿಂಗ್ ಮಾಡಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
ಪಾರ್ಕಿಂಗ್ ದೂರದ ಮೈದಾನಗಳಲ್ಲಿ ಹಾಗೂ ಪಾರ್ಕಿಂಗ್ ಗಾಗಿ ಇರುವ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಉತ್ತಮ. ಇನ್ನು ತೆಪ್ಪೋತ್ಸವದ ದಿನದಂದು ಬಹುತೇಕ ವಾಹನಗಳನ್ನ ಕುರುವಳ್ಳಿ, ಕುಶಾವತಿ, ಆಗುಂಬೆ, ಎಪಿಎಂಸಿ ಭಾಗಗಳಲ್ಲಿ ಸಾಗರ ರಸ್ತೆಯ ಕೋರ್ಟ್ ಆವರಣದಲ್ಲಿ ನಿಲುಗಡೆ ಮಾಡುವಂತೆ ಕೋರಲಾಗಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ನಿಯಮಗಳು ಕೂಡ ಸಂಪೂರ್ಣವಾಗಿ ಜಾರಿಗೆ ಬರಲಿವೆ.
ಎಲ್ಲಿ ನೋಡಿದ್ರೂ ಜನವೋ ಜನ!
ತೀರ್ಥಹಳ್ಳಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ತಮ್ಮ ಊರಿನ ಹಬ್ಬವನ್ನು ಕಣ್ಣು ತುಂಬಿಕೊಳ್ಳಲು ಹೊರ ಊರಲ್ಲಿ ಇದ್ದವರು ಕೂಡ ಆಗಮಿಸಿದ್ದಾರೆ.
ಜಾತ್ರೆಯಲ್ಲಿ ಅಂಗವಿಕಲರ ಕಿರಿಕಿರಿ
ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾಸ್ಯೆ ಜಾತ್ರೆಯಲ್ಲಿ ಅಂಗವಿಕಲರನ್ನ ಬಳಸಿಕೊಂಡು ದುಡ್ಡು ಮಾಡುವ ದಂಧೆಯೊಂದು ಇದೀಗ ಕಳೆದ ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದು, ಇದೀಗ ಪೊಲೀಸ್ ಇಲಾಖೆ ಅವರ ಮೇಲೆ ಕಣ್ಣು ಇಟ್ಟಿದೆ. ಕಾಲು ಹಾಗೂ ಕೈ ಇಲ್ಲದಂತಹ ಅನೇಕ ಅಂಗವಿಕಲರನ್ನು ವಾಹನಗಳಲ್ಲಿ ತಂದು ತೀರ್ಥಹಳ್ಳಿ ಪಟ್ಟಣ ಜಾತ್ರೆ ಬೈಲು ತುಂಗಾ ನದಿ ತೀರದಲ್ಲಿ ಬಿಡಲಾಗುತ್ತದೆ. ಬಳಿಕ ಅವರನ್ನ ಬಳಸಿಕೊಂಡು ಹಣ ಮಾಡುವ ದಂದೆಯೂ ಬಯಲಾಗುವ ಸಾಧ್ಯತೆ ಇದೆ. ತೀರ್ಥಹಳ್ಳಿ ಪೊಲೀಸರು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ವರ್ಷ ಬೆಳಗ್ಗೆಯಿಂದ ರಾತ್ರಿವರೆಗೆ ಈ ರೀತಿ ಅಂಗವಿಕಲರಿಂದಾಗಿ ಒಂದು ಭಾಗದಲ್ಲಿ ತೀರ್ಥಹಳ್ಳಿ ಜಾತ್ರೆಗೆ ಕಳಂಕ, ಜೊತೆಗೆ ಮಾನವೀಯ ನೆಲೆಗಟ್ಟಿನಲ್ಲಿ ಕಿರಿಕಿರಿ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಬಗ್ಗೆ ಖಡಕ್ ಕ್ರಮ ಕೈಗೊಂಡಿದೆ.








