ಯುದ್ಧ ಮುಗಿಯಲ್ಲ.. ಬದುಕು ಉಳಿಯಲ್ಲ..!
– ಭಾರತದಲ್ಲಿ ಯುದ್ಧದ ಎಫೆಕ್ಟ್: ಉದ್ಯಮ ತಳಮಳ
– ಇನ್ನು ಭಾರತ ಗಟ್ಟಿ ಆಗದಿದ್ದರೆ ಭವಿಷ್ಯ ಕತ್ತಲು!
– ಲಕ್ಷ ಲಕ್ಷ ಉದ್ಯೋಗ ಕಡಿತ: ಉದ್ಯಮಗಳಿಗೆ ನಷ್ಟ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಅಮೇರಿಕಾ ಇರಾನ್ ಯುದ್ಧ ಇದೀಗ ಜಗತ್ತಿನ ಎಲ್ಲೆಡೆ ಸಮಸ್ಯೆ ತಂದಿಟ್ಟಿದೆ. ಎರಡು ಮೂರು ವಾರಗಳಲ್ಲಿ ಭೀಕರ ದಾಳಿ ಮಾಡುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಇರಾನ್ ನೊಂದಿಗಿನ ಯುದ್ಧವನ್ನು ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳಿಸಲಿದ್ದೇವೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಬೆನ್ನಲ್ಲೇ, ಇನ್ನು ಎರಡು ಮೂರು ವಾರಗಳಲ್ಲಿ ಇರಾನ್ ಮೇಲೆ ಉಗ್ರ ದಾಳಿಯೊಂದನ್ನು ನಡೆಸಲಿದ್ದೇವೆ ಎಂದಿದ್ದಾರೆ. ಈಗಾಗಲೇ ಹಲವಾರು ದಿನಗಳಿಂದ ನಡೆಸಿದ ಯುದ್ಧದಲ್ಲಿ ಇರಾನ್ ನ ನೌಕಾಪಡೆ ವಾಯುಪಡೆಗಳನ್ನು ಧ್ವಂಸಗೊಳಿಸಿದ್ದೇವೆ. ಇರಾನ್ ಒಪ್ಪಂದಕ್ಕೆ ಒಪ್ಪಿದರೆ ಯುದ್ಧವನ್ನು ನಿಲ್ಲಿಸುತ್ತೇವೆ. ಇಲ್ಲವೆಂದಾದಲ್ಲಿ ಅದರ ವಿದ್ಯುತ್ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಹಾರ್ಮಜ್ ನಿಂದ ನಮಗೆ ಇಂಧನದ ಅವಶ್ಯಕತೆ ಇಲ್ಲ ಒಂದು ವೇಳೆ ಜಗತ್ತಿನ ಇತರ ರಾಷ್ಟ್ರಗಳು ಅದನ್ನು ಬಯಸಿದರೆ ಅವರೇ ತೆಗೆದುಕೊಂಡು ಹೋಗಲಿ ಎಂದು ತಮ್ಮ ಹೇಳಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇತ್ತ ಭಾರತ ಸೇರಿ ಅನೇಕ ದೇಶಗಳು ಯುದ್ಧದ ಎಫೆಕ್ಟ್ ಇಂದ ಕಂಗಾಲಾಗಿವೆ. ದಿನ ನಿತ್ಯ ಬಳಕೆ ವಸ್ತುಗಳು ಸೇರಿ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಗ್ಯಾಸ್, ಕಬ್ಬಿಣ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು ಬಡವರ ಬದುಕು ಬೀದಿಗೆ ಬಂದಿದೆ. ಇನ್ನು ಯುದ್ಧ ಮುಂದುವರಿದಲ್ಲಿ ಭಾರತಕ್ಕೆ ಭಾರೀ ತೊಂದರೆ ಅಗಲಿದೆ. ಗ್ಯಾಸ್ ಸಿಗದೆ ಹೋಟೆಲ್, ಕಾರ್ಖಾನೆ, ಸಣ್ಣ ಉದ್ಯಮಗಳು ನೆಲ ಕಚ್ಚುತ್ತಿವೆ. ಸಾವಿರಾರು ಉದ್ಯೋಗ ನಷ್ಟ ಆಗುತ್ತಿದೆ. ಭಾರತ ಎಲ್ಲದಕ್ಕೂ ಅವಲಂಬನೆ ಆಗಿರುವುದು ದೊಡ್ಡ ಹೊಡೆತಕ್ಕೆ ಕಾರಣವಾಗಿದೆ.








