ದೇಶದಲ್ಲಿ ಆನ್ ಲೈನ್ ಗೇಮಿಂಗ್ ಆ್ಯಪ್ ಬ್ಯಾನ್!
– ಡಿಜಿಟಲ್ ಗೇಮ್ ಕೂಡ ನಿಷೇಧ: ಸರ್ಕಾರದ ಮಾಹಿತಿ
– ಆನ್ ಲೈನ್ ಗೇಮ್ ಆರಂಭಿಸಿದವರಿಗೆ 1 ಕೋಟಿ ದಂಡ ಮತ್ತು 3 ವರ್ಷಗಳವರೆಗೆ ಜೈಲು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಕೇಂದ್ರ ಸರ್ಕಾರವು ಹಣ ಕಟ್ಟಿ ಆಡುವ, ಜೂಜಿನಂತಹ ಆನ್ ಲೈನ್ ಆಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025 ಅನ್ನು ಜಾರಿಗೆ ತರುವ ಮೂಲಕ, ಅಂತಹ ಆಟಗಳನ್ನು ಬ್ಯಾನ್ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ವ್ಯವಹಾರಗಳ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಡಾ.ಎಲ್.ಮುರುಗನ್ ಅವರು “ಆಟ ಯಾವುದೇ ಇರಲಿ, ಅದರಲ್ಲಿ ಹಣ ಕಟ್ಟಿ ಆಡುವಂತಹ ಆಯ್ಕೆಗಳಿದ್ದರೆ, ಅಂತಹ ಆಟಗಳಿಗೆ ಯಾವುದೇ ರೀತಿಯ ಅವಕಾಶ ನೀಡಲಾಗುವುದಿಲ್ಲ. ಡಿಜಿಟಲ್ ವೇದಿಕೆಗಳು ಜನರಿಗೆ ಸುರಕ್ಷಿತವಾಗಿರಬೇಕು.
ಬೆಟ್ಟಿಂಗ್ ಕಟ್ಟಿ ಆಡುವಂತಹ ಯಾವುದೇ ಆಟಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಇವುಗಳಿಗೆ ಪಾವತಿಸಲು ಇರುವಂತಹ ಪೇಮೆಂಟ್ ಗೇಟ್ ವೇಗಳನ್ನು ನಿರ್ಬಂಧಿಸಲಾಗಿದೆ. ಜೊತೆಗೆ ಇಂತಹ ಆ್ಯಪ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವವರಿಗೂ ಕಾನೂನಿನ ಅಡಿಯಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50.000 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಆನ್ ಲೈನ್ ಗೇಮ್ ಅನ್ನು ಮೊದಲ ಬಾರಿಗೆ ಆರಂಭಿಸಿದವರಿಗೆ 1 ಕೋಟಿ ರೂಪಾಯಿ ದಂಡ ಮತ್ತು ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು, ಎರಡನೇ ಬಾರಿ ಅಪರಾಧ ಎಸಗಿದರೆ 2 ಕೋಟಿ ರೂಪಾಯಿ ದಂಡ ಹಾಗೂ ಕನಿಷ್ಠ ಐದು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಆನ್ ಲೈನ್ ಗೇಮಿಂಗ್ ಪ್ರಾಧಿಕಾರವನ್ನು ಶೀಘ್ರದಲ್ಲೇ ತೆರೆಯಲಾಗುತ್ತಿದ್ದು, ಪ್ರಾಧಿಕಾರವು ಅನುಮತಿ ನೀಡಿದ ಬಳಿಕವಷ್ಟೇ ಆನ್ ಲೈನ್ ಗೇಮಿಂಗ್ ಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ” ಎಂದು ತಿಳಿಸಿದ್ದಾರೆ.








