ಹುಲಿಕಲ್ ಘಾಟಿ ವಾಹನಗಳ ಸಂಚಾರ ತಾತ್ಕಾಲಿಕ ಬಂದ್!
– ಮಲೆನಾಡು – ಕರಾವಳಿ ಸಂಪರ್ಕಕ್ಕೆ ತೊಂದರೆ: ಸಚಿವರ ಭೇಟಿ
– ಆಗುಂಬೆ ಘಾಟಿಯಲ್ಲೂ ಎಚ್ಚರ ಎಚ್ಚರ ಎಂದ ಸಚಿವರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಕಳೆದ ಕೆಲವು ದಿನಗಳ ಹಿಂದೆ ನಡೆದ ಹುಲಿಕಲ್ ಘಾಟಿ ದುರಂತದ ಹಿನ್ನೆಲೆಯಲ್ಲಿ ಹೊಸನಗರ ಮತ್ತು ಕುಂದಾಪುರದ ನಡುವಿನ ಮಾರ್ಗದಲ್ಲಿ ವಾಹನಗಳು ಸಂಚರಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಹುಲಿಕಲ್ ಘಾಟಿ ಬಂದ್ ಪರಿಣಾಮವಾಗಿ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ-ರಾವೆ- ಕಾನುಗೋಡು-ನಗರ- ಕೊಲ್ಲೂರು-ಕುಂದಾಪುರ ಮಾರ್ಗವನ್ನು ಬಳಸುವುದು. ಯಡೂರು ಮಾಸ್ತಿಕಟ್ಟೆ ಮಾರ್ಗವಾಗಿ ಸಂಚರಿಸುವ ಭಾರಿ ವಾಹನಗಳು ತೀರ್ಥಹಳ್ಳಿ-ಕಾನುಗೋಡು- ನಗರ-ಕೊಲ್ಲೂರು- ಕುಂದಾಪುರ ಮಾರ್ಗವನ್ನು ಬಳಸುವುದು.
ಅದೇ ರೀತಿ ಶಿವಮೊಗ್ಗ ಸಾಗರದಿಂದ ಹೊಸನಗರ ಮಾರ್ಗವಾಗಿ ಹೋಗುವ ಭಾರಿ ವಾಹನಗಳು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-ಹೊನ್ನಾವರ-ಭಟ್ಕಳ-ಬೈಂದೂರು-ಕುಂದಾಪುರ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸುವಂತೆ ತಿಳಿಸಲಾಗಿದೆ. ಹುಲಿಕಲ್ ಘಾಟಿ ದುರಂತಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸ್ಥಳಕ್ಕೆ ಭೇಟಿ ನೀಡಿ, ಅಪಘಾತ ಯಾವ ಕಾರಣದಿಂದ ಆಗಿದೆ ಎನ್ನುವುದನ್ನು ಪರಿಶೀಲಿಸಿ, ಮುಂದೆ ಈ ರೀತಿಯ ಅನಾಹುತ ಎದುರಾಗದಂತೆ ತಡೆಗಟ್ಟಲು ಬೇಕಾದ ಸೂಕ್ತ ಕ್ರಮವನ್ನು ಕೈಗೊಳ್ಳಲು ಆಲೋಚನೆ ನಡೆಸಿದ್ದಾರೆ.
ಗುತ್ತಿಗೆದಾರರಿಂದ ತಪ್ಪಾಗಿದೆ..
ವಿಹಂಗಮ ರೆಸಾರ್ಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು “ಇಲಾಖೆಯಿಂದ ಗೈಡ್ ಲೈನ್ ಅನ್ನು ಕೊಡಲಾಗಿತ್ತು. ಗುತ್ತಿಗೆದಾರರು ಅದನ್ನು ಅನುಸರಿಸಬೇಕಿತ್ತು. ಆಗ ಅನಾಹುತ ಸಂಭವಿಸದಂತೆ ತಡೆಯಬಹುದಾಗಿತ್ತು. ಆದರೆ ಈಗ ಎರಡೂ ಕಡೆಗಳಿಂದ ತಪ್ಪಾಗಿದೆ. ನಮ್ಮ ಅಧಿಕಾರಿಗಳಿಂದಲೂ ತಪ್ಪಾಗಿರಬಹುದು ಮತ್ತು ಗುತ್ತಿಗೆದಾರರು ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕಿತ್ತು. ಶಾಸಕರ ಸಂಬಂಧಿಕರೇ ಆಗಲಿ, ಯಾರೇ ಆಗಲಿ ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆ ಆಗುತ್ತದೆ. ನಮ್ಮ ಇಲಾಖೆಯಿಂದ ತಪ್ಪಾಗಿದೆಯೇ ಅಥವಾ ಗುತ್ತಿಗೆದಾರರಿಂದ ತಪ್ಪಾಗಿದೆಯೇ ಎನ್ನುವುದನ್ನು ತನಿಖೆಯ ಮೂಲಕ ತಿಳಿದುಕೊಳ್ಳಬೇಕಿದೆ. ವರದಿ ಏನು ಬರುತ್ತದೆ ಎನ್ನುವುದನ್ನು ನೋಡಿ, ನಂತರ ತೀರ್ಮಾನವನ್ನು ಕೈಗೊಳ್ಳುತ್ತೇವೆ. ಈಗಾಗಲೇ ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಧನವನ್ನು ನೀಡಲಾಗಿದೆ ಎಂದರು.
ಆಗುಂಬೆ ಘಾಟಿ ಬಗ್ಗೆಯೂ ಎಚ್ಚರ ಎಚ್ಚರ!
ಆಗುಂಬೆಯಲ್ಲೂ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ಅಲ್ಲಿಯೂ ಕೂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ನೋಡಿಕೊಂಡು ಕೆಲಸ ಮಾಡುತ್ತೇವೆ. ಅಲ್ಲಿ ಯಾವುದೇ ರೀತಿಯ ಭೂಕುಸಿತ ಸಂಭವಿಸದಂತೆ ಗುತ್ತಿಗೆದಾರರು ಮತ್ತು ಕಾರ್ಮಿಕರು ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.








