ಆರ್.ಸಿ ಬದಲಾಗದಿದ್ದರೆ ಹಳೆ ಮಾಲೀಕರೇ ಹೊಣೆಗಾರರು!
– ಅಪಘಾತ ಆದ್ರೂ ಕೇಸ್: ದಾಖಲೆ ಆಗದಿದ್ದರೆ ಬೇಗ ಮಾಡಿಸಿಕೊಳ್ಳಿ
– ತಾನು ಮಾಡದ ತಪ್ಪಿಗೆ 47 ಲಕ್ಷ ಕಟ್ಟಲು ಕೋರ್ಟ್ ಆದೇಶ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ತಮ್ಮಲ್ಲಿರುವ ಯಾವುದೇ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, ಆರ್ ಸಿಯನ್ನು ಬದಲಾಯಿಸದಿದ್ದರೆ ಇನ್ನು ಮುಂದೆ ಹಳೆಯ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ. ಅಲ್ಲದೆ ವಾಹನವನ್ನು ಖರೀದಿ ಮಾಡಿದ ವ್ಯಕ್ತಿಯು ಯಾವುದೇ ರೀತಿಯ ಅಪಘಾತವನ್ನು ನಡೆಸಿದರೆ, ಅದರ ಹೊಣೆ ವಾಹನವನ್ನು ಮಾರಾಟ ಮಾಡಿದ ಮಾಲೀಕನಿಗೆ ಅನ್ವಯಗೊಳ್ಳುತ್ತದೆ ಎನ್ನಲಾಗಿದೆ. ಮಾರತಹಳ್ಳಿಯ ಸುನಿಲ್ ಕುಮಾರ್ ಎನ್ನುವವರು ತಮ್ಮ ಬೈಕ್ ಅನ್ನು ಶಬ್ರೇಜ್ ಎನ್ನುವವರಿಗೆ ಮಾರಾಟ ಮಾಡಿದ್ದು, 2020ರ ಜೂನ್ 18ರಂದು ಶಬ್ರೇಜ್ ಅವರು ಹನುಮಂತ ಎನ್ನುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಅವರು ಮೃತಪಟ್ಟಿದ್ದರು. ಹನುಮಂತ ಅವರ ಕುಟುಂಬಸ್ಥರು ಪರಿಹಾರವನ್ನು ಕೋರಿ ಮೋಟರ್ ಅಪಘಾತ ನ್ಯಾಯಮಂಡಳಿಗೆ ಅರ್ಜಿಯನ್ನು ಸಲ್ಲಿಸಿದ್ದರು.
ಆದರೆ ವಿಮಾ ದಾಖಲೆಗಳ ಸಮಸ್ಯೆಯಿಂದಾಗಿ, ಮೊದಲಿಗೆ ವಾಹನವನ್ನು ಹೊಂದಿದ್ದ ಮಾಲೀಕರೇ ಪರಿಹಾರವನ್ನು ನೀಡಬೇಕೆಂದು, 33 ಲಕ್ಷ ರೂಪಾಯಿ ಪರಿಹಾರವನ್ನು ನ್ಯಾಯಮಂಡಳಿಯು ನಿಗದಿಪಡಿಸಿತ್ತು. ವಾಹನದ ಮಾಲೀಕ ಇದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠವು, ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ಮಾಲೀಕತ್ವ ಬದಲಾವಣೆಯಾಗದ ಹೊರತು, ಮೊದಲ ಮಾಲೀಕನೇ ಎಲ್ಲದಕ್ಕೂ ಹೊಣೆಯಾಗುತ್ತಾನೆ ಎಂದು, ಮೃತ ಕುಟುಂಬಕ್ಕೆ 47.15.000 ರೂಪಾಯಿಗಳಷ್ಟು ಪರಿಹಾರ ನೀಡಬೇಕೆಂದು ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ.








