2029ರ ಚುನಾವಣೆಯಲ್ಲೇ ಮಹಿಳಾ ಮೀಸಲಾತಿ!
– ಲೋಕಸಭಾ, ವಿಧಾನ ಸಭಾ ಎರಡು ಕಡೆ ಜಾರಿ?
– 273 ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: 2029ರ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗಲಿದೆಯಾ? ಹೌದು. ಮಹಿಳಾ ಮೀಸಲಾತಿಯೊಂದಿಗೆ ನಡೆದರೆ ಭಾರತದ ಪ್ರಜಾಪ್ರಭುತ್ವವು ಜಗತ್ತಿನಲ್ಲೇ ಅತ್ಯಂತ ಸದೃಢ ಮತ್ತು ಚೈತನ್ಯದಾಯಕವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪುರುಷ ರಾಜಕಾರಣಿಗಳಿಗೆ ಶಾಕ್ ಆಗುವ ಸಾಧ್ಯತೆ ಇದೆ.
ಮಹಿಳಾ ಮೀಸಲಾತಿ: ಮೋದಿ ಹೇಳಿದ್ದೇನು?
ದೇಶದ ಮಹಿಳೆಯರಿಗೆ ಬರೆದಿರುವ ವಿಶೇಷ ಪತ್ರದಲ್ಲಿ ಈ ಆಶಯ ವ್ಯಕ್ತಪಡಿಸಿರುವ ಅವರು, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರಿಗೆ ಶಾಸಕಾಂಗದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಕಾಲದ ಅನಿವಾರ್ಯತೆಯಾಗಿದೆ ಎಂದು ತಿಳಿಸಿದ್ದಾರೆ. ಏಪ್ರಿಲ್ 16ರಿಂದ ಆರಂಭವಾಗಲಿರುವ ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ‘ನಾರಿ ಶಕ್ತಿ ವಂದನ್ ಅಧಿನಿಯಮ‘ಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲಾಗುವುದು ಎಂದು ಅವರು ಘೋಷಿಸಿದ್ದಾರೆ.
ಈ ಸಾಂವಿಧಾನಿಕ ತಿದ್ದುಪಡಿ ಪ್ರಕ್ರಿಯೆಯಲ್ಲಿ ಇನ್ನು ಮುಂದೆ ಯಾವುದೇ ವಿಳಂಬ ಮಾಡುವುದು ಭಾರತದ ಮಹಿಳೆಯರಿಗೆ ಮಾಡುವ ಘೋರ ಅನ್ಯಾಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. “ನಮ್ಮ ಪುತ್ರಿಯರು ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ಹಕ್ಕಿಗಾಗಿ ಅನಿರ್ದಿಷ್ಟಕಾಲ ಕಾಯುವಂತಾಗಬಾರದು. ಶಾಸಕಾಂಗಗಳಲ್ಲಿ ಮಹಿಳೆಯರ ಧ್ವನಿ ಗಟ್ಟಿಯಾದಷ್ಟೂ ಪ್ರಜಾಪ್ರಭುತ್ವದ ಅಡಿಪಾಯ ಭದ್ರವಾಗುತ್ತದೆ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2023ರಲ್ಲಿ ಅಂಗೀಕರಿಸಲ್ಪಟ್ಟ ಮಹಿಳಾ ಮೀಸಲಾತಿ ಕಾಯ್ದೆಯು ಮೂಲತಃ 2034ರ ವೇಳೆಗೆ ಜಾರಿಯಾಗುವ ನಿರೀಕ್ಷೆಯಿತ್ತು. ಏಕೆಂದರೆ ಇದು 2027ರ ಜನಗಣತಿ ಮತ್ತು ನಂತರದ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಗೆ ಒಳಪಟ್ಟಿತ್ತು. ಆದರೆ, ಇದನ್ನು 2029ರ ಲೋಕಸಭೆ ಚುನಾವಣೆಯಿಂದಲೇ ಜಾರಿಗೆ ತರಲು ಕೇಂದ್ರ ಸರ್ಕಾರ ಈಗ ವಿಶೇಷ ಅಧಿವೇಶನ ಕರೆದಿದೆ. ಈ ತಿದ್ದುಪಡಿ ಜಾರಿಯಾದರೆ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದ್ದು, ಅದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಈ ಬದಲಾವಣೆಯು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.








